ಬೆಂಗಳೂರಿನಲ್ಲಿ ಭಾರೀ ಮಳೆ; ಸಂಚಾರ ಅಸ್ತವ್ಯಸ್ತ, ಸವಾರರು ಹೈರಾಣ

Most read

ಬೆಂಗಳೂರಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಪ್ರಮುಖ ರಸ್ತೆಗಳು ಜಲಾವೃತವಾಗಿದ್ದು, ನಗರದಾದ್ಯಂತ ಸಂಚಾರ ದಟ್ಟಣೆ ಎದುರಾಗಿ ಸವಾರರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಈ ನಡುವೆ ಬೆಂಗಳೂರು ನಗರ ಸಂಚಾರ ಪೊಲೀಸರು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಸಂದೇಶ ಪ್ರಕಟಿಸುವ ಮೂಲಕ ಸಾರ್ವಜನಿಕರಿಗೆ ಹಲವು ಸಲಹೆಗಳನ್ನು ನೀಡುತ್ತಿದ್ದಾರೆ.

ದಾಸರಹಳ್ಳಿ, ಮಹದೇವಪುರ, ಮಾರತ್ತಹಳ್ಳಿ, ಶೇಷಾದ್ರಿಪುರಂ, ಸಂಜಯ್ ನಗರ, ಹುಣಸೆಮಾರನಹಳ್ಳಿ, ಹೆಬ್ಬಾಳ ಮೇಲ್ಸೇತುವೆ, ಹೊರ ವರ್ತುಲ ರಸ್ತೆ (ಒಆರ್‌ಆರ್) ಮತ್ತು ಬನ್ನೇರುಘಟ್ಟ ರಸ್ತೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ.

ಇದಲ್ಲದೆ, ಕೆಂಗೇರಿ, ಮೈಸೂರು ರಸ್ತೆ, ಸಾರಕ್ಕಿ, ಜೆ.ಪಿ.ನಗರ, ಗೊರಗುಂಟೆಪಾಳ್ಯ, ಹೆಬ್ಬಾಳ ಮುಂತಾದ ಕಡೆಗಳಲ್ಲಿ ಕಚೇರಿ, ಶಾಲಾ-ಕಾಲೇಜುಗಳಿಗೆ ತೆರಳುವ ಪ್ರಯಾಣಿಕರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡುವಂತಾಗಿತ್ತು.

ವೈಟ್‌ಫೀಲ್ಡ್, ಬೆಳ್ಳಂದೂರು, ಸಿಲ್ಕ್ ಬೋರ್ಡ್ ಸೇರಿದಂತೆ ಐಟಿ ಕಾರಿಡಾರ್ ಮತ್ತು ಹೊರ ವರ್ತುಲ ರಸ್ತೆದಲ್ಲಿಯೂ ತೀವ್ರ ಸಂಚಾರ ದಟ್ಟಣೆ ಕಂಡುಬಂದಿತ್ತು. ವಿಶೇಷವಾಗಿ ಜೆಸಿ ರಸ್ತೆಯಲ್ಲಿ ವಾಹನಗಳು ನೀರಿನಲ್ಲಿ ಸಿಲುಕಿಕೊಂಡಿದ್ದು ಕಂಡು ಬಂದಿತು.

ಕೆಐಎ ರಸ್ತೆ (ಬಳ್ಳಾರಿ ರಸ್ತೆ), ಸರ್ಜಾಪುರ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಕಸ್ತೂರಿ ನಗರ, ರಿಂಗ್ ರೋಡ್, ಮೈಸೂರು ರಸ್ತೆ, ಎಚ್‌ಎಸ್‌ಆರ್ ಲೇಔಟ್, ಮಡಿವಾಳ, ಹೊಸೂರು ರಸ್ತೆ ಮತ್ತು ಬೊಮ್ಮನಹಳ್ಳಿ ಜಂಕ್ಷನ್. ಹುಣಸಮಾರನಹಳ್ಳಿಯಲ್ಲಿ ಭಾರೀ ಜಲಾವೃತದಿಂದ ವಾಹನಗಳು ನಿಧಾನಗತಿಯಲ್ಲಿ ಚಲಿಸುತ್ತಿದ್ದವು. ಇದರಿಂದ ಭಾರೀ ಸಂಚಾರ ದಟ್ಟಣೆ ಎದುರಾಗಿತ್ತು. ಬಳಿಕ ಪೊಲೀಸರು ಮಾರ್ಗಗಳನ್ನು ಬದಲಾಯಿಸುವಂತೆ ಪ್ರಯಾಣಿಕರಿಗೆ ಸಾಮಾಜಿಕ ಮಾಧ್ಯಮದ ಮೂಲಕ ವಿನಂತಿಸಿಕೊಂಡರು.

ಇನ್ನು ಭಾರೀ ಮಳೆ ಹಿನ್ನೆಲೆಯಲ್ಲಿ ಈಗಾಗಲೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಐಟಿ ವೃತ್ತಿಪರರು ಮನೆಯಿಂದಲೇ ಕೆಲಸ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆಂದು ತಿಳಿದುಬಂದಿದೆ.

ಜೆಸಿಬಿ, ಟ್ರ್ಯಾಕ್ಟರ್ ಬಳಸಿ ಶಾಲಾ ಮಕ್ಕಳ ರಕ್ಷಣೆ

ಈ ನಡುವೆ ಜಲಾವೃತಗೊಂಡಿದ್ದ ಬೆಳೆಗೆರೆ ಮುಖ್ಯ ರಸ್ತೆಯಲ್ಲಿ ಸಿಲುಕಿದ್ದ ಖಾಸಗಿ ಶಾಲಾ ಬಸ್ ನಲ್ಲಿದ್ದ ಹತ್ತು ಮಕ್ಕಳನ್ನು ಜೆಸಿಬಿ ಹಾಗೂ ಟ್ರ್ಯಾಕ್ಟರ್ ಗಳನ್ನು ಬಳಸಿ ರಕ್ಷಣೆ ಮಾಡಲಾಯಿತು.

ಶಾಲೆಯಿಂದ ಮಕ್ಕಳನ್ನು ಮನೆಗೆ ಕರೆದೊಯ್ಯುವಾಗ ಸುಮಾರು ಎರಡೂವರೆ ಅಡಿವರೆಗೆ ನಿಂತಿದ್ದ ನೀರಿನಲ್ಲೇ ಚಾಲಕ ಬಸ್ ಚಲಾಯಿಸಿದ್ದಾನೆ. ಈ ವೇಳೆ ನೀರು ಮತ್ತು ಕೆಸರಿನಲ್ಲಿ ಚಕ್ರಗಳು ಸಿಲುಕಿಕೊಂಡಿತ್ತು. ಪರಿಣಾಮ ಬಸ್ ಮುಂದಕ್ಕೆ ಚಲಿಸದ ಕಾರಣ ಮಕ್ಕಳು ಆತಂಕಕ್ಕೆ ಒಳಗಾಗಿದ್ದರು. ಸುಮಾರು ಒಂದು ತಾಸು ಕಾಲ ಬಸ್ ನಿಂತಲ್ಲೇ ನಿಂತಿತ್ತು. ಈ ವೇಳೆ ಸ್ಥಳೀಯರು ಜೆಸಿಬಿ ಹಾಗೂ ಟ್ರ್ಯಾಕ್ಟರ್ ಬಳಸಿ ಮಕ್ಕಳನ್ನು ರಕ್ಷಣೆ ಮಾಡಿದರು.

More articles

Latest article