ನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಯಾ ವಲಯ ವ್ಯಾಪ್ತಿಯಲ್ಲಿ ಅಧಿಕಾರಿಗಳು ಸನ್ನದ್ಧರಾಗಿ ಕಾರ್ಯನಿರ್ವಹಿಸಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಇಂದು ವರ್ಚುವಲ್ ಮೂಲಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಮುಂಜಾನೆಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಎಲ್ಲಾ ಅಧಿಕಾರಿಗಳು ಮುಂಜಾಗ್ರತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಎಲ್ಲಿಯೂ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಪ್ರವಾಹ ಪೀಡಿತ ಪ್ರದೇಶಗಳ ಬಳಿ ನಿಗಾವಹಿಸಬೇಕು. ಏನಾದರು ಸಮಸ್ಯೆಯಾಗುವ ಸಂಭವವಿದ್ದರೆ ಸ್ಥಳೀಯ ನಿವಾಸಿಗಳನ್ನು ಕೂಡಲೆ ಸುರಕ್ಷಿತ ಸ್ಥಳಕೆ ಕರೆದೊಯ್ಯುವ ವ್ಯವಸ್ಥೆ ಮಾಡಬೇಕೆಂದು ತಿಳಿಸಿದರು.
ರಸ್ತೆಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಿ:
ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆ ರಸ್ತೆಗಳಲ್ಲಿ ನೀರು ನಿಂತು ಜಲಾವೃತವಾಗುವ ಕಾರಣ ಹೆಚ್ಚು ಸಂಚಾರ ದಟ್ಟಣೆಯಾಗಲಿದೆ. ಈ ಸಂಬಂಧ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಅಧಿಕಾರಿಗಳು ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಪರಿಶೀಲನೆ ನಡೆಸಿ ನೀರು ನಿಲ್ಲದಂತೆ ಸೂಕ್ತ ಕ್ರಮ ವಹಿಸಬೇಕು. ಪಾಲಿಕೆ ಸಿಬ್ಬಂದಿಯ ಸಹಯೋಗದೊಂದಿಗೆ ಗ್ರೇಟಿಂಗ್ಸ್ ಗಳ ಬಳಿ ತ್ಯಾಜ್ಯವನ್ನು ಸ್ವಚ್ಛಗೊಳಿಸಿ ಸೈಡ್ ಡ್ರೈನ್‌ಗಳಿಗೆ ಸರಾಗವಾಗಿ ಮಳೆ ನೀರು ಹರಿದು ಹೋಗುವಂತೆ ನೋಡಿಕೊಳ್ಳಲು ಸೂಚನೆ ನೀಡಿದರು.
ನಿಯಂತ್ರಣ ಕೊಠಡಿಗೆ ಬಂದ ದೂರುಗಳಿಗೆ ಕೂಡಲೆ ಸ್ಪಂದನೆ:
ಮಳೆಯಾಗುತ್ತಿರುವುದರಿಂದ ಮಳೆ ನೀರು ನಿಂತಿರುವ, ಜಲಾವೃತವಾಗಿರುವ, ಮರ, ಮರದ ರೆಂಬೆ-ಕೊಂಬೆಗಳು ಧರೆಗುರುಳಿರುವುದು ಸೇರಿದಂತೆ ಇನ್ನಿತೆ ಸಮಸ್ಯೆಗಳ ಕುರಿತು ನಾಗರೀಕರಿಂದ ನಿಯಂತ್ರಣ ಕೊಠಡಿಗೆ ಬರುವ ದೂರುಗಳಿಗೆ ಕೂಡಲೆ ಸ್ಪಂದಿಸಿ ಇರುವ ಸಮಸ್ಯೆಗಳನ್ನು ಬಗೆಹರಸಬೇಕೆಂದು ಸೂಚನೆ ನೀಡಿದರು.
ರಾಜಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಯುವಂತೆ ನೋಡಿಕೊಳ್ಳಿ:
ರಾಜಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿದು ಹೊಗುವಂತೆ ನೋಡಿಕೊಳ್ಳಬೇಕು. ಎಲ್ಲಿಯೂ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕ್ರಮ ವಹಿಸಬೇಕೆಂದು ಸೂಚಿಸಿದರು.
ಮರ, ಮರದ ರೆಂಬೆ-ಕೊಂಬೆ ತೆರವು:
ನಗರದಲ್ಲಿ ಮಳೆಯಿಂದಾಗಿ ಧರೆಗುರುಳುವ ಮರ, ಮರದ ರೆಂಬೆ-ಕೊಂಬೆಗಳನ್ನು ಮರ ತೆರವುಗೊಳಿಸುವ ತಂಡಗಳು ಕಾರ್ಯಪ್ರವೃತ್ತರಾಗಿ ನಾಗರೀಕರಿಂದ ದೂರುಗಳು ಬಂದ ತಕ್ಷಣ ಸ್ಥಳಕ್ಕೆ ತೆರಳಿ ತೆರವುಗೊಳಿಸುವ ಕೆಲಸ ಮಾಡಲು ಸೂಚಿಸಿದರು.
ಪಾಲಿಕೆ ಸಹಾಯವಾಣಿ ಸಂಖ್ಯೆ 1533ಗೆ ಕರೆ ಮಾಡಿ:
ನಗರದ 8 ವಲಯ ವ್ಯಾಪ್ತಿಯಲ್ಲಿ 8 ನಿಯಂತ್ರಣ ಕೊಠಡಿಗಳಿದ್ದು, ಪಾಲಿಕೆ ಕೇಂದ್ರ ಕಛೇರಿಯಲ್ಲಿ 1 ನಿಯಂತ್ರಣ ಕೊಠಡಿಯಿದೆ. ಮಳೆಯಿಂದಾಗಿ ಏನಾದರು ಸಮಸ್ಯೆಗಳಿದ್ದರೆ ನಾಗರೀಕರು ಕೂಡಲೆ ಪಾಲಿಕೆಯ ಉಚಿತ ಸಹಾಯವಾಣಿ ಸಂಖ್ಯೆಯಾದ 1533ಗೆ ಕರೆ ಮಾಡಿ ದೂರು ನೀಡಬಹುದಾಗಿದೆ. ಸದರಿ ದೂರಗಳನ್ನು ಸಂಬಂಧಪಟ್ಟ ವಲಯ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರವಾಗಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಾಗುತ್ತದೆ.
ಸಭೆಯಲ್ಲಿ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಸುರಳ್ಕರ್ ವಿಕಾಸ್ ಕಿಶೋರ್, ಡಾ. ಕೆ. ಹರೀಶ್ ಕುಮಾರ್, ಎಲ್ಲಾ ವಲಯ ಆಯುಕ್ತರು, ಪ್ರಧಾನ ಅಭಿಯಂತರರು, ಮುಖ್ಯ ಅಭಿಯಂತರರು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ತಿತರಿದ್ದರು.