ಹಾಸನ | ರೈಲು ಅಪಘಾತ ಅಣಕು ಪ್ರದರ್ಶನವನ್ನು ನಿಜವಾದ ಅಪಘಾತ ಎಂದು ಕಕ್ಕಾಬಿಕ್ಕಿಯಾದ ಅಧಿಕಾರಿಗಳು, 10 ಜನ ಸಾವು ಎಂದು ವರದಿ!

Most read

ಹಾಸನ: ಸಕಲೇಶಪುರ ನಿಲ್ದಾಣದಲ್ಲಿ ರೈಲು ಅಪಘಾತವಾಗಿ ಹತ್ತು ಜನರು ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಅಗ್ನಿಶಾಮಕ‌ ದಳದ ಅಣಕು ಪ್ರದರ್ಶನ ತಂಡ ಅಣಕು ಕಾರ್ಯಾಚರಣೆ ಅಂಗವಾಗಿ ನೀಡಿದ ಸಂದೇಶವನ್ನು ನೈಜ ಮಾಹಿತಿ ಎಂದು ಭಾವಿಸಿದ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪೆಚ್ಚಾದ ಘಟನೆ ಶನಿವಾರ ನಡೆದಿದೆ.

ಅಪಘಾತ ಮತ್ತು ನಂತರದ ಪರಿಹಾರ ಕಾರ್ಯಾಚರಣೆಗಳ ಸಿದ್ಧತೆಯ ಅಣಕು ಪ್ರದರ್ಶನವನ್ನು ನಡೆಸುವ ಬಗ್ಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಅಗ್ನಿಶಾಮಕದಳದ ತಂಡ ಜಂಟಿಯಾಗಿ ಶನಿವಾರ ಅಣಕು ಪ್ರದರ್ಶನ ಏರ್ಪಡಿಸಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಮುಂಚಿತವಾಗಿಯೇ ಮಾಹಿತಿ ನೀಡಿತ್ತು.

ಶನಿವಾರ ಬೆಳಗ್ಗೆ ರೈಲು ನಿಲ್ದಾಣದಲ್ಲಿ ಅಪಘಾತವಾದ ರೈಲು ಬೋಗಿಯಲ್ಲಿ ಸಿಲುಕಿದ ಪ್ರಯಾಣಿಕರನ್ನು ಹೊರತೆಗೆಯುವ, ಗಾಯಗಳನ್ನು ಏಣಿ ಬಳಸಿ ಕೆಳಗಿಳಿಸುವ ಅಣಕು ಪ್ರದರ್ಶನ ಆರಂಭಿಸಲಾಯಿತು. ಅಣಕು ಕಾರ್ಯಾಚರಣೆ ಭಾಗವಾಗಿ ನಿಯೋಜಿತ ಸಿಬ್ಬಂದಿ ಜಿಲ್ಲಾಡಳಿತಕ್ಕೆ ದೂರವಾಣಿ ಕರೆ ಮಾಡಿ ಸಕಲೇಶಪುರ ರೈಲು ನಿಲ್ದಾಣದಲ್ಲಿ ರೈಲು ಅಪಘಾತವಾಗಿ ಹತ್ತು ಜನರು ಮೃತರಾಗಿದ್ದಾರೆ ಎನ್ನುವ ಸಂದೇಶ ರವಾನಿಸಿದರು.

ಆದರೆ ಅಣಕು ಸಂದೇಶವನ್ನು ನೈಜವೆಂದು ಭಾವಿಸಿದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಕ್ಷಣವೇ ಸ್ಥಳಕ್ಕೆ ತೆರಳುವಂತೆ ಸಕಲೇಶಪುರ ತಹಸೀಲ್ದಾರ್ ಮೇಘನಾ ಹಾಗೂ ಉಪವಿಭಾಗಾಧಿಕಾರಿ ಶ್ರುತಿ ಅವರಿಗೆ ಸೂಚಿಸಿದರು. ವೈದ್ಯಕೀಯ ಪರಿಹಾರ ಸಾಮಗ್ರಿ ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಕಳಿಸುವಂತೆ ಡಿಎಚ್ಒಗೆ ಸೂಚಿಸಿದರು.

ಇದರಿಂದ ಸುತ್ತಮುತ್ತಲಿನಲ್ಲಿದ್ದ 108 ಅಂಬುಲೆನ್ಸ್ ಗಳು ರೈಲ್ವೆ ನಿಲ್ದಾಣದ ಕಡೆಗೆ ವೇಗವಾಗಿ ಧಾವಿಸಿದವು. ಅಧಿಕಾರಿಗಳೂ ಸ್ಥಳ ತಲುಪಿದಾಗ ಅಲ್ಲಿ ನೈಜ ಅಪಘಾತ ಆಗಿಲ್ಲ. ಅದೊಂದು ಅಣಕು ಪ್ರದರ್ಶನ ಎನ್ನುವುದು ಗೊತ್ತಾಯಿತು. ಅಷ್ಟರಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರೂ ನಿಲ್ದಾಣ ತಲುಪಿದರು‌

ಆರಂಭದಲ್ಲಿ ಭಾರಿ ಅಪಘಾತ ಸಂಭವಿಸಿದ ಆಘಾತದಲ್ಲಿದ್ದ ಅಧಿಕಾರಿಗಳು ಅಲ್ಲಿ ನಡೆದಿದ್ದು ಅಣಕು ಪ್ರದರ್ಶನ ಎಂದು ತಿಳಿದ ನಂತರ ನಿಟ್ಟುಸಿರು ಬಿಟ್ಟರು. ಸಂವಹನ ಕೊರತೆಯಿಂದಾಗಿ ಅಣಕು ಪ್ರದರ್ಶನದಲ್ಲಿ ಜಿಲ್ಲಾಡಳಿತದ ಸಿದ್ಧತೆಯ ವೇಗವೂ ಪರೀಕ್ಷೆಗೊಳಪಟ್ಟಿತು.

ಎನ್.ಡಿ.ಆರ್.ಎಫ್. ನ ಸೇಂತಿಲಾಲ್, ನೈರುತ್ಯ ರೈಲ್ವೆ ADRM ಕವಿತಾ ಅಣಕು ಕಾರ್ಯಾಚರಣೆ ನೇತೃತ್ವ ವಹಿಸಿದ್ದರು

More articles

Latest article