ಹಿಂಸಾಚಾರ ಪೀಡಿತ ಸಂಭಲ್ ಪ್ರವೇಶಕ್ಕೆ ರಾಹುಲ್‌ ಗಾಂಧಿಗೆ ನಿರಾಕರಣೆ

Most read

ಸಂಭಲ್‌; ಮಸೀದಿ ಸಮೀಕ್ಷೆ ಸಂದರ್ಭದಲ್ಲಿ ಹಿಂಸಾಚಾರ ನಡೆದ ಸಂಭಲ್‌ಗೆ ತೆರಳುತ್ತಿದ್ದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶ ಪೊಲೀಸರು ಬುಧವಾರ ಘಾಜಿಪುರ ಗಡಿಯಲ್ಲಿ ತಡೆದಿದ್ದಾರೆ. ನಾನು ಪೊಲೀಸರೊಂದಿಗೆ ಸಂಭಾಲ್‌ಗೆ ಏಕಾಂಗಿಯಾಗಿ ಹೋಗಲು ಸಿದ್ಧನಿದ್ದೇನೆ. ಆದರೆ, ಅವರು ಅನುಮತಿಸಲಿಲ್ಲ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ, ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರು ಇಂದು ಬೆಳಿಗ್ಗೆ ಘಾಜಿಪುರ ಗಡಿಯನ್ನು ತಲುಪಿದರು. ಆದರೆ ಅಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಸಂಭಲ್‌ಗೆ ಪ್ರವೇಶಿಸುವುದನ್ನು ತಡೆಯಲಾಯಿತು. ಕೆಲ ಹೊತ್ತಿನ ಮಾತುಕತೆ ಬಳಿಕ ರಾಹುಲ್ ಗಾಂಧಿ ದೆಹಲಿಗೆ ಮರಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾವು ಸಂಭಲ್‌ಗೆ ಹೋಗಲು ಪ್ರಯತ್ನಿಸುತ್ತಿದ್ದೇವೆ. ಆದರೆ  ಪೊಲೀಸರು ನಿರಾಕರಿಸುತ್ತಿದ್ದಾರೆ.  ನಮಗೆ ಅವಕಾಶ ನೀಡುತ್ತಿಲ್ಲ. ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ಅಲ್ಲಿಗೆ  ಹೋಗುವುದು ನನ್ನ ಹಕ್ಕು. ನಾನು ಒಬ್ಬನೇ ಹೋಗಲು ಸಿದ್ಧ ಎಂದು ಪೊಲೀಸರೊಂದಿಗೆ ಹೇಳಿದರೂ ಅವರು ಕೇಳಲಿಲ್ಲ ಎಂದರು. ಕೈಯಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡ ರಾಹುಲ್ ಗಾಂಧಿ, ಪೊಲೀಸರ ನಿರ್ಧಾರ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಕಿಡಿ ಕಾರಿದರು.

ನಾವು ಸಂಭಲ್‌ಗೆ ಹೋಗಿ ಅಲ್ಲಿ ಏನಾಗಿದೆ ಎಂಬುದನ್ನು ನೋಡಲು ಬಯಸುತ್ತೇವೆ.ಅಲ್ಲಿನ ಜನರನ್ನು ಭೇಟಿಯಾಗಲು ಬಯಸುತ್ತೇವೆ. ಅದು ನನ್ನ ಸಾಂವಿಧಾನಿಕ ಹಕ್ಕು.  ಆದರೆ ನನಗೆ ಅನುಮತಿ ನೀಡುತ್ತಿಲ್ಲ.  ಸಂವಿಧಾನವನ್ನು ಕೊನೆಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ, ನಾವು ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ  ಅವರ ಸಂಭಲ್‌ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ. ಏಕೆಂದರೆ, ಅಲ್ಲಿನ ಆಡಳಿತವು ನಿಷೇಧಾಜ್ಞೆಗಳನ್ನು ಹೊರಡಿಸಿದೆ ಎಂದು ಗಾಜಿಯಾಬಾದ್ ಪೊಲೀಸ್ ಕಮಿಷನರ್ ಅಜಯ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

More articles

Latest article