ಇಂದೋರ್: ಮಧ್ಯಪ್ರದೇಶದ ಇಂದೋರ್ ನಲ್ಲಿ ಕಲುಷಿತ ನೀರು ಕುಡಿದು ವಾಂತಿ, ಭೇದಿಯಿಂದ ಬಳಲುತ್ತಾ ಬಾಂಬೆ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳು ಮತ್ತು ಅವರ ಕುಟುಂಬದವರನ್ನು ಕಾಂಗ್ರೆಸ್ ವರಿಷ್ಠ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಡಿಸೆಂಬರ್ ನಲ್ಲಿ ಈ ದುರಂತ ಸಂಭವಿಸಿದ ಭಗೀರಥಪುಕ್ಕೂ ರಾಹುಲ್ ಗಾಂಧಿ ಬೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಕಲುಷಿತ ನೀರು ಕುಡಿದು ವಾಂತಿ ಮತ್ತು ಭೇದಿ ಸಂಭವಿಸಿ 5 ತಿಂಗಳ ಹಸುಗೂಸು ಸೇರಿ 24 ಮಂದಿ ಮೃತಪಟ್ಟಿದ್ದಾರೆ ಎಂದು ಭಗೀರಥಪುರದ ನಿವಾಸಿಗಳು ರಾಹುಲ್ ಅವರ ಗಮನಕ್ಕೆ ತಂದರು.
ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ರಾಜ್ಯ ಸರ್ಕಾರ ನೀಡುವ ಅಂಕಿಅಂಶಕ್ಕೂ ಸ್ಥಳೀಯರು ನೀಡುವ ಮಾಹಿತಿಗೂ ವ್ಯತ್ಯಾಸವಿದೆ. ಸರ್ಕಾರ ದುರಂತದಲ್ಲಿ 7 ಮಂದಿ ಮೃತಪಟ್ಟಿದ್ದಾರೆ ಎಂದು ಮಧ್ಯಪ್ರದೇಶ ಹೈಕೋರ್ಟ್‌ಗೆ ತಿಳಿಸಿದ್ದರೆ ಸ್ಥಳೀಯ ಮಹಾತ್ಮ ಗಾಂಧಿ ಮೆಮೊರಿಯಲ್ ಮೆಡಿಕಲ್ ಕಾಲೇಜಿನ ವೈದ್ಯರ ತಂಡ ನಡೆಸಿದ ಸಮೀಕ್ಷೆಯಲ್ಲಿ 15 ಮಂದಿ ವಾಂತಿ ಭೇದಿಯಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ರಾಹುಲ್ ಜತೆ ಮಧ್ಯಪ್ರದೇಶದ ಕಾಂಗ್ರೆಸ್ ಘಟಕದ ಅಧ್ಯಕ್ಷ ಜೀತು ಪಟ್ವಾರಿ ಮತ್ತು ಪಕ್ಷದ ಮುಖಂಡ ಉಮಂಗ್ ಸಿಂಗಾರ್ ಹಾಜರಿದ್ದರು.

