ರಾಂಚಿ: ದೇಶದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದರೆ ದೇಶದ ಹಿಂದುಳಿದ, ದಲಿತ, ಆದಿವಾಸಿಗಳಿಗೆ ಸಿಗಬೇಕಾದ ನ್ಯಾಯಯುತ ಪಾಲು ನೀಡುವುದಕ್ಕಾಗಿ, ಸದ್ಯ ಜಾರಿಯಲ್ಲಿರುವ ಶೇ.50 ರ ಮೀಸಲಾತಿಯ ಮಿತಿಯನ್ನು ರದ್ದು ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ.
ಮಣಿಪುರದಿಂದ ಆರಂಭವಾಗಿರುವ ಭಾರತ ಜೋಡೋ ನ್ಯಾಯ ಯಾತ್ರೆ-2.0 ಅಂಗವಾಗಿ ಜಾರ್ಖಂಡದ ರಾಂಚಿಯಲ್ಲಿ ಇಂದು ನಡೆದ ಸಾರ್ವಜನಿಕ ಸಭೆಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಇಂದು ದೇಶದಲ್ಲಿ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ಸಿಗುವುದಿಲ್ಲ. ಈಗಿರುವ ಮೀಸಲಾತಿ ಮಿತಿಯನ್ನು ಕಾಂಗ್ರೆಸ್ ಹಾಗೂ ಇಂಡಿಯಾ ಸರಕಾರ ಎತ್ತಿ ಎಸೆಯಲಿದೆ ಎಂದು ಗುಡುಗಿರುವ ಅವರು, ದಲಿತರು ಮತ್ತು ಆದಿವಾಸಿಗಳ ಮೀಸಲಾತಿಯಲ್ಲಿ ಯಾವುದೇ ಕಡಿತವಾಗುವುದಿಲ್ಲ ಎನ್ನುವ ಗ್ಯಾರಂಟಿ ವಾಗ್ದಾನ ನೀಡುತ್ತೇನೆ. ಇದರ ಜೊತೆಗೆ ಹಿಂದುಳಿದ ವರ್ಗಕ್ಕೆ ಸಿಗಬೇಕಾದ ಎಲ್ಲ ಹಕ್ಕುಗಳು ಅವರಿಗೆ ಸಿಕ್ಕೇ ಸಿಗುತ್ತವೆ ಎಂದಿದ್ದಾರೆ.
ಸೈಕಲ್ ಮೇಲೆ 200 ಕೆಜಿಯ ಕಲ್ಲಿದ್ದಲನ್ನು ಹೊತ್ತು 50 ಕಿ.ಮೀ ವರೆಗೆ ಸಾಗುತ್ತಿದ್ದ ಒಬ್ಬ ಹಸಿದ ಆದಿವಾಸಿಯನ್ನು ನಾನು ಕಣ್ಣಾರೆ ನೋಡಿದ್ದೇನೆ. ಇಂತಹ ಶ್ರಮದಾಯಕ ವಲಯದಲ್ಲಿ ಹಿಂದುಳಿದ, ದಲಿತ, ಆದಿವಾಸಿಗಳು ಕಾಣಿಸುತ್ತಾರೆ. ಆದರೆ ದೊಡ್ಡ ದೊಡ್ಡ ಕಾರ್ಪೋರೇಟ್, ಆಸ್ಪತ್ರೆ, ನ್ಯಾಯಾಲಯ, ಉನ್ನತ ಅಧಿಕಾರಿ ವಲಯದಲ್ಲಿ ಈ ಶೋಷಿತ ವರ್ಗ ನಿಮಗೆ ಕಾಣಲು ಸಿಗುವುದಿಲ್ಲ. ಹೀಗಾಗಿ ನಮ್ಮ ಮೊದಲ ಹೆಜ್ಜೆ ಜಾತಿ ಜನಗಣತಿ ಮಾಡುವುದಾಗಿದೆ ಎಂದಿದ್ದಾರೆ.
ದೇಶದ ಪೂರ್ಣ ಬಜೆಟ್ ನ್ನು ಐಎಎಸ್ ಅಧಿಕಾರಿಗಳನ್ನು ಒಳಗೊಂಡ 90 ಜನ ನಿರ್ಧರಿಸುತ್ತಾರೆ. ಇವರಲ್ಲಿ ಕೇವಲ ಮೂರು ಜನ ಮಾತ್ರ ಒಬಿಸಿ ವರ್ಗಕ್ಕೆ ಸೇರಿದವರು. ಶೇ.50ರಷ್ಟಿರುವ ಒಬಿಸಿ ವರ್ಗದ ಜನರನ್ನು ಪ್ರತಿನಿಧಿಸುವುದು ಕೇವಲ ಶೇ. 5 ರಷ್ಟು ಅಧಿಕಾರಿ ವಲಯ. ಅಂದರೆ ಬಜೆಟ್ಟಿನಲ್ಲಿ ರೂ.100 ರ ಹಂಚಿಕೆಯಲ್ಲಿ ಕೇವಲ ರೂ.5 ಹಂಚಿಕೆಯ ನಿರ್ಣಯವನ್ನು ಮಾತ್ರ ಒಬಿಸಿ ವರ್ಗ ತೆಗೆದುಕೊಳ್ಳುತ್ತಿದೆ. ಇದರಲ್ಲಿ ದಲಿತ, ಆದಿವಾಸಿಗಳ ಪ್ರಾತಿನಿಧಿತ್ವ ಇಲ್ಲವೇ ಇಲ್ಲ.
ಅಂದರೆ ಹಿಂದುಳಿದ, ದಲಿತ, ಆದಿವಾಸಿಗಳಿಗೆ ಸರಕಾರದಲ್ಲಿ ಪಾಲುದಾರಿಕೆ ಇಲ್ಲ, ಕಾರ್ಪೋರೇಟ್ ವಲಯದಲ್ಲಿ ಪಾಲುದಾರಿಕೆ ಇಲ್ಲ, ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳ ಮಾಲೀಕತ್ವ, ಆಡಳಿತದಲ್ಲಿ ಈ ವರ್ಗಗಳ ಪಾಲಿಲ್ಲ. ದೇಶದ ಪ್ರತಿಷ್ಠಿತ ಖಾಸಗಿ ಶಾಲಾ ಕಾಲೇಜು ವಿಶ್ವವಿದ್ಯಾಲಯಗಳ ಪಟ್ಟಿ ನೋಡಿದರೆ ಅವುಗಳಲ್ಲಿ ಯಾವುದೇ ಸಂಸ್ಥೆಯ ಮಾಲೀಕತ್ವ ಈ ವರ್ಗಕ್ಕಿಲ್ಲ. ಆದರೆ ಗುತ್ತಿಗೆ ಕಾರ್ಮಿಕರ ಪಟ್ಟಿ ತೆಗೆದು ನೋಡಿದರೆ ನಮಗೆ ಅಲ್ಲಿ ಈ ದಲಿತ ಹಿಂದುಳಿದ ಆದಿವಾಸಿ ವರ್ಗ ಮಾತ್ರ ಕಾಣಸಿಗುತ್ತದೆ. ಮತ್ಯಾರೂ ಅಲ್ಲಿ ಸಿಗುವುದಿಲ್ಲ. ಹೀಗೆ ದಲಿತ ಆದಿವಾಸಿ ಹಿಂದುಳಿದವರನ್ನು ಗುತ್ತಿಗೆ ಕಾರ್ಮಿಕರನ್ನಾಗಿ ದುಡಿಸಿಕೊಳ್ಳುತ್ತಿದ್ದಾರೆ. ಶೇ. 50 ರಷ್ಟಿರುವ ಹಿಂದುಳಿದವರು, ಶೇ. 8ರಷ್ಟಿರುವ ಆದಿವಾಸಿಗಳು, ಶೇ.15-16 ರಷ್ಟಿರುವ ದಲಿತರು ದೇಶದ ಆಸ್ಪತ್ರೆ, ನ್ಯಾಯಾಲಯ, ಕಾರ್ಪೋರೇಟ್ ವಲಯದಲ್ಲಿ ನೋಡಲು ನಮಗೆ ಸಿಗುವುದಿಲ್ಲ.