ಹೊಸದಿಲ್ಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಜನ್ಮದಿನವಾದ ಇಂದು ರಾಜಕೀಯ ರಂಗದ ಗಣ್ಯರು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
54 ವರ್ಷಕ್ಕೆ ಕಾಲಿಡ್ಡುತ್ತಿರುವ ರಾಹುಲ್ ಗಾಂಧಿ ದೇಶದ ಅತ್ಯಂತ ಪ್ರಭಾವಿ ರಾಜಕೀಯ ಕುಟುಂಬದಿಂದ ಬಂದವರಾಗಿಯೂ ಜನಸಾಮಾನ್ಯರ ನಡುವೆ ಇರಲು ಬಯಸುವ ಮೂಲಕ ತಮ್ಮದೇ ಆದ ರಾಜಕೀಯ ಮಾರ್ಗವನ್ನು ಕಂಡುಕೊಂಡವರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಿಂದಿನ ಎರಡು ಚುನಾವಣೆಗಳಿಗಿಂತ ದುಪ್ಪಟ್ಟು ಸ್ಥಾನಗಳನ್ನು ಗಳಿಸಲು ರಾಹುಲ್ ಗಾಂಧಿಯವರ ಛಲ ಬಿಡದ ಹೋರಾಟವೇ ಕಾರಣವಾಗಿತ್ತು.
ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಪುತ್ರನಾಗಿ 1970ರ ಜೂನ್ 19ರಂದು ಜನಿಸಿದ ರಾಹುಲ್ ಗಾಂಧಿ, ಡೆಹರಾಡೂನ್ ನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ ಅಮೆರಿಕದ ರೋಲಿನ್ಸ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರೆಸಿದರು. ನಂತರ ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಎಂ.ಪಿಲ್ ಪದವಿಯನ್ನು ಪಡೆದರು.
ರಾಜಕೀಯ ಸೇರ್ಪಡೆಗೆ ಅಷ್ಟೇನೂ ಆಸಕ್ತಿ ಇರದ ರಾಹುಲ್ ಗಾಂಧಿ, ಅನಿವಾರ್ಯ ಕಾರಣಗಳಿಂದ ಈ ಕ್ಷೇತ್ರಕ್ಕೆ ಬಂದರು, 2004ರಲ್ಲಿ ಅಮೇಠಿ ಕ್ಷೇತ್ರದಲ್ಲಿ ಮೊಟ್ಟಮೊದಲ ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ಇದೇ ಕ್ಷೇತ್ರದಲ್ಲಿ ತಂದೆ ರಾಜೀವ್ ಗಾಂಧಿ, ಚಿಕ್ಕಪ್ಪ ಸಂಜಯ್ ಗಾಂಧಿ ಹಿಂದೆ ಸಂಸತ್ ಸದಸ್ಯರಾಗಿದ್ದರು.
ಆರಂಭದ ದಿನಗಳಲ್ಲಿ ರಾಹುಲ್ ಗಾಂಧಿಯವರು ಅನೇಕ ಸವಾಲುಗಳನ್ನು, ಟೀಕೆಗಳನ್ನು ಎದುರಿಸಬೇಕಾಯಿತು. ರಾಜಕೀಯ ಕ್ಷೇತ್ರದಲ್ಲಿನ ಅವರ ಅನನುಭವ, ದೇಶದ ವಾಸ್ತವಿಕ ಪರಿಸ್ಥಿತಿಯ ಕುರಿತು ಅವರಿಗಿದ್ದ ಅಜ್ಞಾನ ಅವರಿಗೆ ಸಮಸ್ಯೆಗಳನ್ನು ತಂದೊಡ್ಡಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ರಾಹುಲ್ ಗಾಂಧಿ ದೇಶದ ಉದ್ದಗಲಕ್ಕೂ ಸಂಚರಿಸಿ ಜನರ ಜೊತೆ ಬೆರೆತು ಬೆಳೆಯುತ್ತ ಹೋದರು.
2007ರಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾದರು. 2009ರಲ್ಲಿ ಎರಡನೇ ಬಾರಿ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬರಲು ರಾಹುಲ್ ಗಾಂಧಿ ಪಾತ್ರ ಮಹತ್ವದ್ದಾಗಿತ್ತು. ಆದರೆ ಸರ್ಕಾರದಲ್ಲಿ ಯಾವುದೇ ಮಂತ್ರಿಪದವಿ ಪಡೆಯಲು ರಾಹುಲ್ ನಿರಾಕರಿಸಿದರು. ನಂತರ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು.
2014 ಮತ್ತು 2019ರ ಲೋಕಸಭಾ ಚುನಾವಣೆಗಳ ಸೋಲು ರಾಹುಲ್ ಗಾಂಧಿಯವರಿಗೆ ದೊಡ್ಡ ಆಘಾತವನ್ನು ತಂದಿತು. ನರೇಂದ್ರ ಮೋದಿಯವರ ಜನಪ್ರಿಯತೆಯ ಎದುರು ರಾಹುಲ್ ಮಂಕಾಗಿಹೋದರು. ರಾಹುಲ್ ಗಾಂಧಿ ಅಸಮರ್ಥ ನಾಯಕ ಎಂಬ ಕೂಗು ಪಕ್ಷದೊಳಗೆಯೇ ಕೇಳಿಬರಲಾರಂಭಿಸಿತ್ತು. ಇನ್ನೊಂದೆಡೆ ರಾಹುಲ್ ಗಾಂಧಿಯವರನ್ನು ದಡ್ಡ (ಪಪ್ಪು) ಎಂದು ಬಿಂಬಿಸಲು ಎದುರಾಳಿಗಳು ಸಾವಿರಾರು ಕೋಟಿ ರುಪಾಯಿಗಳನ್ನು ಖರ್ಚು ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸುಳ್ಳಿನ ಅಭಿಯಾನವನ್ನೇ ನಡೆಸಿದರು.
ಇದ್ಯಾವುದನ್ನೂ ತಲೆಗೆ ಹೆಚ್ಚಿಕೊಳ್ಳದ ರಾಹುಲ್ ಗಾಂಧಿ ದೇಶದ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತ ಹೋದರು. 2024ರ ಚುನಾವಣೆಗೆ ಮುನ್ನಅವರು ನಡೆಸಿದ ಭಾರತ್ ಜೋಡೋ ಯಾತ್ರೆ ಮತ್ತು ಭಾರತ್ ಜೋಡೋ ನ್ಯಾಯ ಯಾತ್ರೆಗಳು ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದವು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಡೆದು ಸಾಗಿದ ರಾಹುಲ್ ಗಾಂಧಿ ಜನರೊಂದಿಗೆ ಬೆರೆತು ಅವರ ಕಷ್ಟಸುಖಗಳನ್ನು ಕೇಳಿದರು. ರೈತರು, ಕಾರ್ಮಿಕರು, ವಿದ್ಯಾರ್ಥಿಗಳ ಜೊತೆ ಅವರ ಸಂವಾದಗಳು ಅರ್ಥಪೂರ್ಣವಾಗಿದ್ದವು.
ರಾಹುಲ್ ಗಾಂಧಿಯವರ ಛಲ ಬಿಡದ ಹೋರಾಟದಿಂದಲೇ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆಯಲ್ಲದೆ, ಮೋದಿ ನೇತೃತ್ವದ ಬಿಜೆಪಿ ಸ್ವತಂತ್ರವಾಗಿ ಬಹುಮತ ಸಾಧಿಸಲು ವಿಫಲವಾಯಿತು.
ದೇಶದ ರಾಜಕಾರಣದಲ್ಲಿ `ಪಪ್ಪು’ ಎಂದು ಬಿಂಬಿಸಲ್ಪಟ್ಟ ರಾಹುಲ್ ಗಾಂಧಿ ಇಂದು ದೇಶದ ಜನತೆಯ ಮನಗೆಲ್ಲಲು ಯಶಸ್ವಿಯಾಗಿದ್ದು, ಅವರ ಮುಂದಿನ ರಾಜಕೀಯ ವರಸೆಯ ಕುರಿತು ತೀವ್ರ ಆಸಕ್ತಿ ಮೂಡಿದೆ.