ರಾಹುಲ್ ಗಾಂಧಿ ಅವರ ಭಾರತ ಜೋಡೋ ನ್ಯಾಯ ಯಾತ್ರೆಯ ಆಯೋಜಕರಾದ ಕೆ ಬಿ ಬೈಜಿಯು ಅವರ ವಿರುದ್ಧ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯಾತ್ರೆಯು ಮೊದಲು ತಿಳಿಸಿದ ಹಾದಿಯನ್ನು ಬಿಟ್ಟು ಪಟ್ಟಣದ ಜೊರ್ಹಟ್ ಮೂಲಕ ಗುರುವಾರ ಮಧ್ಯಾಹ್ನ ಸಾಗಿದೆ ಎಂದು ಪೋಲಿಸರು ಆರೋಪಿಸಿದ್ದಾರೆ.
ಭಾರತ ಜೋಡೊ ನ್ಯಾಯ ಯಾತ್ರೆ ಸಾಗುವ ಹಾದಿಯಲ್ಲಿ ದಿಢೀರ್ ಬದಲಾವಣೆ ಮಾಡಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಆಯೋಜಕರಾದ ಬೈಜಿಯು ಟ್ರಾಫಿಕ್ ಬ್ಯಾರಿಕೇಡುಗಳನ್ನು ಮುರಿಯಲು ಪ್ರೇರೇಪಿಸಿದರು ಮತ್ತು ಕರ್ತವ್ಯದಲ್ಲಿದ್ದ ಪೋಲಿಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೋಲೀಸರು ಆರೋಪ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ದೇಬಬ್ರತ ಸೈಕಿಯಾ ನಮ್ಮ ನಾಯಕರ ಯಾತ್ರೆಗೆ ಅನಗತ್ಯ ಅಡ್ಡಿಯುಂಟು ಮಾಡಲು ಈ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಯಾತ್ರೆ ಸಾಗುತ್ತಿದ್ದ ದಾರಿಯಲ್ಲಿ ಯಾವುದೇ ಪೋಲಿಸರು ಇರಲಿಲ್ಲ, ಮೊದಲ ಯೋಜಿತ ಹಾದಿಯು ತೀರ ಕಿರಿದಾಗಿದ್ದರಿಂದ ಜನರ ನೂಗುನುಗ್ಗಲು ಹೆಚ್ಚಾಗುತ್ತದೆ ಎಂದು ಹಾದಿಯನ್ನು ಬದಲಿಸಲಾಗಿತ್ತು. ಕೆಲವೇ ಮೀಟರ್‌ಗಳಷ್ಟು ದೂರ ಮಾತ್ರ ಬೇರೆ ಹಾದಿಯಲ್ಲಿ ಸಾಗಿದ್ದೆವು. ಮೊದಲ ದಿನ ಯಾತ್ರೆಗೆ ದೊರೆತಿದ್ದ ಯಶಸ್ಸು ನೋಡಿ ಸಿಎಂ ಹಿಮಂತ ಬಿಸ್ವಶರ್ಮ ಭಯಪಟ್ಟಿಕೊಂಡಿದ್ದರು. ಅದಕ್ಕೆ ಯಾತ್ರೆಗೆ ಅಡ್ಡಿಯುಂಟು ಮಾಡಲು ಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಅವರ ಯಾತ್ರೆಯು ಅಸ್ಸಾಂನಲ್ಲಿ ಜನವರಿ 25ರ ತನಕ ಸಂಚರಿಸಲಿದ್ದು ರಾಜ್ಯದ 17 ಜಿಲ್ಲೆಗಳಲ್ಲಿ 833 ಕಿಮೀ ದೂರ ಸಾಗಲಿದೆ.