ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಬಿಜೆಪಿ ಸಂಸ್ಕೃತಿಯಾಗಿದೆ: ರಾಹುಲ್‌ ಗಾಂಧಿ ಆರೋಪ

Most read

ನವದೆಹಲಿ: ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮಾಡಿಕೊಳ್ಳುವದೇ ಬಿಜೆಪಿ ಸಂಸ್ಕೃತಿಯಾಗಿದೆ. ಇದಕ್ಕೆ ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಆಡಳಿತ ಕುಸಿದುಬಿದ್ದಿರುವುದು ಮತ್ತು ವೈಫಲ್ಯಗಳೇ ಸಾಕ್ಷಿ ಎಂದು ಕಾಂಗ್ರೆಸ್‌ ವರಿಷ್ಠ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಪಾದಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅವರು ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ದೇಶಾದ್ಯಂತ ಭ್ರಷ್ಟ ಜನತಾ ಪಾರ್ಟಿ (ಬಿಜೆಪಿ)ಯ ಡಬಲ್‌ ಎಂಜಿನ್‌ ಸರ್ಕಾರ ಜನ ಜೀವನವನ್ನು ವಿನಾಶದ ಅಂಚಿಗೆ ಕೊಂಡೊಯ್ದಿದೆ.  ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮತ್ತು ದ್ವೇಷದ ವಿಷ ಬಿಜೆಪಿಯ ಮೇಲಿನಿಂದ ಕೆಳಹಂತದವರೆಗೂ ಹರಡಿಕೊಂಡಿದೆ. ಈ ವ್ಯವಸ್ಥೆಯಿಂದಾಗಿ ಬಡವರ, ಅಸಹಾಯಕರ, ಕಾರ್ಮಿಕರ ಮತ್ತು ಮಧ್ಯಮ ವರ್ಗದ ಜನರ ಜನಜೀವನ ಕುಸಿದು ಬಿದ್ದಿದೆ ಎಂದು ಟೀಕಿಸಿದ್ದಾರೆ.

ಅಭಿವೃದ್ಧಿ ಹೆಸರಲ್ಲಿ ಬಿಜೆಪಿ ಜನರ ಸುಲಿಗೆ ಮಾಡುತ್ತಿದೆ. ಕೋಟ್ಯಧಿಪತಿಗಳಿಗಾಗಿ ಅರಾವಳಿ ಪರ್ವತ ಶ್ರೇಣಿಗಳನ್ನು ನಾಶಪಡಿಸಲಾಗುತ್ತಿದೆ ಎಂದೂ ಆಪಾದಿಸಿದ್ದಾರೆ.

ಬಿಜೆಪಿಯ ದುರಾಡಳಿತಕ್ಕೆ ಅವರು ಉತ್ತರಾಖಂಡದಲ್ಲಿ ಅಂಕಿತ ಭಂಡಾರಿ ಹತ್ಯೆ, ಉತ್ತರ ಪ್ರದೇಶದ ಉನ್ನಾವೊ ಅತ್ಯಾಚಾರ ಪ್ರಕರಣ, ಇಂದೋರ್‌ನ ಕಲುಪಿತ ನೀರು ಸೇವನೆ ಸೇರಿದಂತೆ ಹಲವು ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ. ಈ ಎಲ್ಲ ಪ್ರಕರಣಗಳಲ್ಲಿ ಬಿಜೆಪಿ ತನ್ನ ಮುಖಂಡರನ್ನು ರಕ್ಷಿಸುತ್ತಿದೆ. ಇಡೀ ದೇಶಾದ್ಯಂತ ಬಿಜೆಪಿಯ ಕ್ರಿಮಿನಲ್‌ ಗಳು ಶಿಕ್ಷೆಯಿಂದ ಪಾರಾಗುತ್ತಿದ್ದಾರೆ.  ಒಟ್ಟಾರೆ ಬೆರಳೆಣಿಕೆಯಷ್ಟು ಕೋಟ್ಯಧಿಪತಿಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಡಬಲ್ ಎಂಜಿನ್ ಸರ್ಕಾರ ನಡೆಯುತ್ತಿದೆ. ಆದರೆ ಈ ಭ್ರಷ್ಟ ಸರ್ಕಾರದಿಂದ ಶ್ರೀಸಮಾನ್ಯರ ಜನಜೀವನ ಹಾಲಾಗುತ್ತಿದೆ ಎಂದು ಕಟು ಶಬ್ಧಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

More articles

Latest article