ಚುನಾವಣಾ ಅಯೋಗದ ಇಬ್ಬಗೆ ನೀತಿಗೆ ರಾಹುಲ್‌ ಗಾಂಧಿ ಕೆಂಡಾಮಂಡಲ; ಪ್ರಮಾಣಪತ್ರ ಸಲ್ಲಿಸಲು ಬಿಜೆಪಿಗೂ ಸೂಚನೆ ನೀಡಲು ಆಗ್ರಹ

Most read

ಬಿಹಾರ: ಮತ ಕಳವು ಆರೋಪ ಕುರಿತ ತಮ್ಮ ಆರೋಪಕ್ಕೆ ಲಿಖಿತ ಪ್ರಮಾಣ ಸಲ್ಲಿಸುವಂತೆ ಚುನಾವಣಾ ಆಯೋಗವು ನಮ್ಮನ್ನು ಮಾತ್ರ ಕೇಳುತ್ತಿದೆ. ಆದರೆ ಇದೇ ಪ್ರಮಾಣಪತ್ರವನ್ನು ಬಿಜೆಪಿ ಮುಖಂಡರಿಗೆ ಏಕೆ ಕೇಳುತ್ತಿಲ್ಲ ಎಂದು ಕಾಂಗ್ರೆಸ್‌ ವರಿಷ್ಠ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದಾರೆ.

ಮುಂದಿನ ಎರಡು ತಿಂಗಳಲ್ಲಿ ಚುನಾವಣೆ ನಡೆಯಲಿರುವ ಬಿಹಾರದ ಸಾಸಾರಾಮ್‌ ನಲ್ಲಿ ಇಂದು ಆರಂಭವಾದ  ‘ಮತದಾರನ ಅಧಿಕಾರ ಯಾತ್ರೆ’ ಯಲ್ಲಿ ಭಾಗವಹಿಸಿದ ರಾಹುಲ್‌ ಗಾಂಧಿ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡರು.

ನಾನು ಮತ ಕಳವಾಗಿದೆ ಎಂದು ಆರೋಪ ಮಾಡಿದ ರೀತಿಯಲ್ಲೇ ಬಿಜೆಪಿ ನಾಯಕ ಅನುರಾಗ್ ಠಾಕೂರ್‌ ಸೇರಿದಂತೆ ಅನೇಕ ನಾಯಕರು ಆರೋಪ ಮಾಡಿದ್ದಾರೆ. ಅಮೇಠಿ, ರಾಯಬರೇಲಿ ಮತ್ತು ವಯನಾಡ್‌, ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಅನುರಾಗ್‌ ಠಾಕೂರ್ ಆರೋಪಿಸಿದ್ದರು. ಆಯೋಗವು ಬಿಜೆಪಿ ಮುಖಂಡರನ್ನು ಪ್ರಮಾಣ ಪತ್ರ ಕೇಳದೆ ನನ್ನನ್ನು ಮಾತ್ರ ಏಕೆ ಕೇಳಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರು ಏಳು ದಿನಗಳಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು, ಇಲ್ಲವೇ ದೇಶದ ಕ್ಷಮೆ ಯಾಚಿಸಬೇಕು ಎಂದು ತಾಕೀತು ಮಾಡಿದ್ದರು.

 ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ ಐಆರ್‌) ಎಂದರೆ ಬಿಹಾರದ ಜನರ ಮತಗಳನ್ನು ಕದಿಯುವುದೇ ಆಗಿದೆ. ಆರಂಭದಲ್ಲಿ ಮತಗಳನ್ನು ರಹಸ್ಯವಾಗಿ ಕದಿಯುತ್ತಿದ್ದರು. ಈಗ ಬಹಿರಂಗವಾಗಿಯೇ ಈ ಕೆಲಸ ಮಾಡುತ್ತಿದ್ದಾರೆ ಎಂದು ಆಯೋಗ ಮತ್ತು ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಚುನಾವಣಾ ಆಯೋಗ ಸಿಸಿಟಿವಿಗೆ ಸಂಬಂಧಿಸಿದಂತೆ ಕಾನೂನೊಂದನ್ನು ತಂದಿದ್ದು, ಆ ಕಾನೂನನ್ನು ಈಗ ಏಕೆ ಬದಲಾಯಿಸಲಾಗಿದೆ ?. ಚುನಾವಣಾ ಆಯುಕ್ತರ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸಲೂ ಕಾನೂನಿನಲ್ಲಿ ಅವಕಾಶ ಇಲ್ಲ. ಈ ಕಾನೂನನ್ನು 2023ರಲ್ಲಿ ಜಾರಿಗೊಳಿಸಲಾಗಿದೆ. 2023ರಲ್ಲಿಯೇ ಏಕೆ ಮಾಡಲಾಗಿದೆ ಎಂದರೆ ಮತಗಳನ್ನು ಕದಿಯುವ ಉದ್ದೇಶ ಬಿಜೆಪಿಗೆ ಇತ್ತು. ಈ ಕಾರಣಕ್ಕಾಗಿಯೇ ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇಂತಹ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ. ಕೇಸ್‌ ಹಾಕುವುದಿಲ್ಲ ಎಂಬ ಕಾರಣಕ್ಕೆ ಆಯೋಗ ಬಿಜೆಪಿಗೆ ಸಹಾಯ ಮಾಡುತ್ತಾ ಬಂದಿದೆ ಎಂದು ವಾಗ್ದಾಳಿ ನಡೆಸಿದರು.

ಅನೇಕ ರಾಜ್ಯಗಳ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಮತಗಳನ್ನು ಕದಿಯುತ್ತಾ ಮತದಾರರನ್ನು ವಂಚಿಸುತ್ತಾ ಬರಲಾಗಿದೆ ಎಂದೂ ರಾಹುಲ್‌ ಗಾಂಧಿ ಹೇಳಿದರು.

More articles

Latest article