ಬೆಂಗಳೂರು: ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ 4 ವರ್ಷ. ಅಭಿಮಾನಿಗಳು ಮತ್ತು ಕುಟುಂಬ ವರ್ಗದವರ ಪ್ರೀತಿಯ ಅಪ್ಪುವಿನ 4ನೇ ಪುಣ್ಯ ಸ್ಮರಣೆ ಅಂಗವಾಗಿ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಅವರ ಸ್ಮರಣೆಗೆ ಅವರ ಅಭಿಮಾನಿಗಳು ಮಧ್ಯರಾತ್ರಿಯಿಂದಲೇ ಸಮಾಧಿ ಸ್ಥಳಕ್ಕೆ ಆಗಮಿಸುತ್ತಿದ್ದಾರೆ.
ಅಪ್ಪು ಸಮಾಧಿಯನ್ನು ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಲಾಗಿತ್ತು. ಅಭಿಮಾನಿಗಳು ರಾಜ್ಯದ ಅನೇಕ ಜಿಲ್ಲೆಗಳಿಂದ ತಂಡೋಪ ತಂಡವಾಗಿ ಆಗಮಿಸುತ್ತಿದ್ದು, ಪುನೀತ್ ಸ್ಮಾರಕಕ್ಕೆ ನಮಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಅನೇಕ ನಟ ನಟಿಯರು ಸೇರಿದಂತೆ ಚಂದನವನದ ಖ್ಯಾತನಾಮರು ಅಪ್ಪುವಿಗೆ ನಮನ ಸಲ್ಲಿಸಿದರು.
2021 ಅಕ್ಟೋಬರ್ 29 ರಂದು ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ನಿಧನರಾದರು. ಇಂದು ಸಮಾಧಿ ಸ್ಥಳದಲ್ಲಿ ಅವರ ಅಭಿಮಾನಿಗಳು ಅನ್ನದಾನ, ರಕ್ತದಾನ ನೇತ್ರದಾನ ಶಿಬಿರ ಹಮ್ಮಿಕೊಂಡಿದ್ದಾರೆ.

