ಜಿಲ್ಲೆಯೊಂದರ ಬಾಲ ನ್ಯಾಯ ಮಂಡಳಿಯ ಪ್ರಧಾನ ನ್ಯಾಯಿಕ ದಂಡಾಧಿಕಾರಿಯಾಗಿ ಕರ್ತವ್ಯದಲ್ಲಿದ್ದಾಗ ನಡೆದ ಘಟನೆಯನ್ನು ನಿವೃತ್ತ ನ್ಯಾಯಾಧೀಶರಾದ ಶಫೀರ್ ಎ .ಎ ಅವರು ಇಲ್ಲಿ ತೆರೆದಿಟ್ಟಿದ್ದಾರೆ.
ರೌಡಿಯೊಬ್ಬನನ್ನು ಚೂರಿಯಿಂದ ಇರಿದು ಕೊಲೆಗೈದ ಆರೋಪದ ಮೇಲೆ ಇಬ್ಬರು ಪಿಯುಸಿ ವಿದ್ಯಾರ್ಥಿಗಳನ್ನು ಬಂಧಿಸಿ ಪೊಲೀಸರು ನನ್ನ ಮುಂದೆ ಹಾಜರು ಪಡಿಸಿದರು. ಹದಿನೇಳು ವರ್ಷ ಪ್ರಾಯದ ಆ ಇಬ್ಬರು ಹುಡುಗರು ಹತ್ತನೇ ತರಗತಿಯಲ್ಲಿ ಉತ್ತಮ ಅಂಕಗಳೊಂದಿಗೆ ಉತೀರ್ಣಗೊಂಡು ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆದಿದ್ದರು.
ಆ ಬಾಲಕರ ವಿರುದ್ಧ ಸಲ್ಲಿಕೆಯಾದ ಪ್ರಥಮ ವರ್ತಮಾನ ವರದಿಯನ್ನು ಓದುತ್ತಿದ್ದಂತೆ ಗಾಬರಿಯಿಂದ ಮೈ ನಡುಗಿತು. ಇನ್ನೂ ಮೀಸೆ ಚಿಗುರದ, ಯಾವುದೇ ಅಪರಾಧಿಕ ಹಿನ್ನಲೆ ಇಲ್ಲದ, ಮಧ್ಯಮ ವರ್ಗಕ್ಕೆ ಸೇರಿದ ಮತ್ತು ಓದಿನಲ್ಲಿ ಚುರುಕಿರುವ ಇಬ್ಬರು ಮಕ್ಕಳು ಒಬ್ಬ ಕುಖ್ಯಾತ ರೌಡಿಯನ್ನು ಭೀಕರವಾಗಿ ಹತ್ಯೆ ಮಾಡುತ್ತಾರೆಂದರೆ ನಂಬಲು ಹೇಗೆ ಸಾಧ್ಯ.
ಪ್ರಥಮ ವರ್ತಮಾನ ವರದಿಯಲ್ಲಿದ್ದ ಆರೋಪ ಏನೆಂದರೆ ಆ ಇಬ್ಬರು ಬಾಲಕರ ಪೈಕಿ ಒಬ್ಬಾತ ಕದ್ದು ಮುಚ್ಚಿ ಸಿಗರೇಟ್ ಸೇದುವ ಅಭ್ಯಾಸ ಬೆಳೆಸಿಕೊಂಡಿದ್ದ. ಒಂದು ದಿನ ಆತ ತನ್ನ ಮನೆಯ ಸಮೀಪದ ಓಣಿಯಲ್ಲಿ ಸಿಗರೇಟ್ ಸೇದುತ್ತಾ ನಿಂತಿದ್ದಾಗ ಅಚಾನಕ್ಕಾಗಿ ಆತ ಆ ಕುಖ್ಯಾತ ರೌಡಿಯ ಕಣ್ಣಿಗೆ ಬೀಳುತ್ತಾನೆ. ಪಾನ ಮತ್ತಾಗಿ ಬೀದಿಯಲ್ಲಿ ಕಂಡ ಕಂಡವರನ್ನು ಹಿಡಿದು ಥಳಿಸುವುದು, ದುಡ್ಡು ಕಿತ್ತುಕೊಳ್ಳುವುದು ಮತ್ತು ಬೆದರಿಸುವುದು ಇವುಗಳನ್ನೇ ಕಾಯಕ ಮಾಡಿಕೊಂಡ ಆ ರೌಡಿಗೆ ಸಿಗರೇಟ್ ಸೇದುತ್ತಿದ್ದ ಬಾಲಕ ತನಗೆ ಬೇಕಾದಾಗೆಲ್ಲ ದುಡ್ಡು ದೋಚಲು ಒಳ್ಳೆಯ ಎಟಿಎಂ ನಂತೆ ಕಂಡುಬರುತ್ತಾನೆ. ಬಾಲಕ ಸಿಗರೇಟ್ ಸೇದುತ್ತಿದ್ದ ವಿಚಾರವನ್ನು ಆತನ ಪೋಷಕರಿಗೆ ತಿಳಿಸುತ್ತೇನೆ ಎಂದು ಆ ರೌಡಿ ಹೆದರಿಸಲು ಶುರು ಮಾಡುತ್ತಾನೆ. ಹಾಗೆ ಪೋಷಕರಿಗೆ ಹೇಳಬಾರದು ಎಂದಿದ್ದರೆ ಹೆಂಡ ಕುಡಿಯಲು ತನಗೆ ದುಡ್ಡು ಕೊಡಬೇಕು ಎಂದು ಬ್ಲಾಕ್ ಮೇಲ್ ಮಾಡುತ್ತಾನೆ. ಹೆದರಿದ ಹುಡುಗ ಕಿಸೆಯಲ್ಲಿದ್ದ ಇನ್ನೂರು ರೂಪಾಯಿ ತೆಗೆದು ಕೊಡುತ್ತಾನೆ.
ಆ ನಂತರದಲ್ಲಿ ಆ ಬೀದಿ ರೌಡಿ ಪ್ರತಿನಿತ್ಯ ಬಾಲಕನನ್ನು ಹುಡುಕಿಕೊಂಡು ಮನೆಯ ಬಳಿ ಮತ್ತು ಕಾಲೇಜಿನ ಬಳಿ ಬರತೊಡಗುತ್ತಾನೆ. ಬ್ಲಾಕ್ ಮೇಲ್ ಮಾಡುತ್ತಾ ಪ್ರತಿ ದಿನ ದುಡ್ಡು ಕೀಳುತ್ತಾ ಹೋಗುತ್ತಾನೆ. ಈ ವಿಷಯ ಬಾಲಕ ತನ್ನ ಗೆಳೆಯನ ಬಳಿ ಹೇಳುತ್ತಾನೆ. ಗೆಳೆಯ ಆತನಿಗೆ ಖತರ್ನಾಕ್ ಐಡಿಯ ಕೊಡುತ್ತಾನೆ. ಹೇಗೋ ಮಾಡಿ ಆ ರೌಡಿಯ ಗೆಳೆತನ ಸಂಪಾದಿಸುವುದು. ನಂತರ ಅವನನ್ನು ಬಳಸಿಕೊಂಡು ಕಾಲೇಜಿನಲ್ಲಿ ಉಳಿದ ಮಕ್ಕಳ ಮುಂದೆ ದಾದಾಗಿರಿ ಮಾಡುವುದು.
ಹೀಗೆ ಪ್ಲಾನ್ ಮಾಡಿ ಗೆಳೆಯರಿಬ್ಬರು ರೌಡಿಯನ್ನು ಭೇಟಿಯಾಗಿ ಡೀಲ್ ಕುದುರಿಸುತ್ತಾರೆ. ಆತನಿಗೆ ಪ್ರತಿ ದಿನ ಹೆಂಡ ಕೊಡಿಸುವ ಜವಾಬ್ದಾರಿಯನ್ನು ಬಾಲಕರಿಬ್ಬರು ಹೊತ್ತು ಕೊಳ್ಳುತ್ತಾರೆ. ಅದಕ್ಕೆ ಪ್ರತಿಯಾಗಿ ಬಾಲಕರಿಬ್ಬರಿಗೆ ಕಾಲೇಜಿನಲ್ಲಿ ದಾದಾಗಿರಿ ಮಾಡಲು ರೌಡಿಯ ನೆರವು ಖಾತರಿಯಾಗುತ್ತದೆ. ಇದು ಹೀಗೆಯೇ ಮುಂದುವರೆಯುತ್ತಿದ್ದಾಗ ಒಂದು ದಿನ ಮೊದಲನೆಯ ಬಾಲಕನ ಬಳಿ ರೌಡಿ ಇಪ್ಪತೈದು ಸಾವಿರ ರೂಪಾಯಿಯ ಬೇಡಿಕೆ ಇಡುತ್ತಾನೆ. ಈ ಬೇಡಿಕೆ ಕೇಳಿ ಬೆಚ್ಚಿಬಿದ್ದ ಬಾಲಕ ಅಷ್ಟೊಂದು ಹಣ ಹೊಂದಿಸಲು ತನ್ನಿಂದ ಸಾಧ್ಯ ಇಲ್ಲ ಎಂದು ಅಳಲು ಶುರು ಮಾಡುತ್ತಾನೆ. ಆಗ ರೌಡಿಯ ಬ್ಲಾಕ್ ಮೇಲ್ ಮತ್ತೆ ಶುರುವಾಗುತ್ತೆ. ಎಲ್ಲಾ ವಿಚಾರಗಳನ್ನು ಕಾಲೇಜಿನ ಪ್ರಾಂಶುಪಾಲರಿಗೆ ತಿಳಿಸುತ್ತೇನೆ ಎಂದು ಆತ ಹೊಸ ಬೆದರಿಕೆ ಶುರು ಮಾಡುತ್ತಾನೆ. ಹೆದರಿಕೆಯಿಂದ ದಿಕ್ಕೇ ತೋಚದಾದ ಬಾಲಕರು ಈ ಕಗ್ಗಂಟ್ಟಿನಿಂದ ಪಾರಾಗಲು ದಾರಿ ಹುಡುಕುತ್ತಾರೆ. ಉಪಾಯದಿಂದ ರೌಡಿಯನ್ನು ಮುಗಿಸಿ ಬಿಟ್ಟರೆ ಶಾಶ್ವತವಾಗಿ ಸಮಸ್ಯೆ ಪರಿಹಾರವಾಗ ಬಹುದು ಎಂಬ ದುರಾಲೋಚನೆ ಬಾಲಕರ ಎಳೆ ಬುದ್ದಿಗೆ ಹೊಳೆಯುತ್ತದೆ.
ಕೊನೆಗೊಂದು ದಿನ ಮುಸ್ಸಂಜೆಯ ವೇಳೆ ಹಣ ಮತ್ತು ಹೆಂಡದ ಆಮಿಷವೊಡ್ಡಿ ಉಪಾಯದಿಂದ ಬಾಲಕರು ರೌಡಿಯನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಳ್ಳುತ್ತಾರೆ. ಅಲ್ಲಿ ರಾತ್ರಿ 11 ಗಂಟೆಯವರೆಗೂ ಆತನಿಗೆ ಕಂಠ ಪೂರ್ತಿ ಹೆಂಡ ಕುಡಿಸುತ್ತಾರೆ. ನಶೆ ಏರಿ ಎದ್ದು ನಿಲ್ಲಲೂ ಕೂಡ ಆಗದಷ್ಟು ಬಳಲಿದ ಆತನನ್ನು ಇಬ್ಬರು ಸೇರಿ ಮೊದಲೇ ತಂದಿದ್ದ ಚೂರಿಯಿಂದ ಕುತ್ತಿಗೆ ಮತ್ತು ಹೊಟ್ಟೆಗೆ ಇರಿದು ಇರಿದು ಕೊಲೆ ಮಾಡುತ್ತಾರೆ. ಆ ನಂತರ ಚೂರಿಯನ್ನು ದೂರ ಬಿಸಾಕಿ ರಕ್ತ ಸಿಕ್ತ ಕೈಗಳನ್ನು ತೊಳೆದು ಬಾಲಕರಿಬ್ಬರು ಅಲ್ಲಿಂದ ಕಾಲ್ಕೀಳುತ್ತಾರೆ.
ಕೇರಿಯ ಎಲ್ಲರಿಗು ಉಪಟಳ ಕೊಡುತ್ತಿದ್ದ ರೌಡಿ ಬರ್ಬರವಾಗಿ ಹತ್ಯೆಯಾಗಿ ನಿರ್ಜನ ಪ್ರದೇಶದಲ್ಲಿ ಆತನ ಮೃತದೇಹ ಪತ್ತೆಯಾಗಿರುವ ಸುದ್ದಿ ಮರುದಿನ ಪೊಲೀಸ್ ಠಾಣೆ ಮುಟ್ಟುತ್ತದೆ. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಅಪರಾಧಿಗಳನ್ನು ಪತ್ತೆ ಹಚ್ಚುವುದು ಹರ ಸಾಹಸವಾಗಿ ಪರಿಣಮಿಸಿರುತ್ತದೆ.
ಅಷ್ಟರಲ್ಲಿ ಒಂದು ದಿನ ಬೆಳಗ್ಗಿನ ಹೊತ್ತು ಹತ್ತು ಗಂಟೆ ಸುಮಾರಿಗೆ ಕಾಲೇಜು ಸಮವಸ್ತ್ರದಲ್ಲಿ ಒಬ್ಬ ಬಾಲಕ ಪ್ರಕರಣ ದಾಖಲಾದ ಪೊಲೀಸ್ ಠಾಣೆಗೆ ಬಂದು ಅಪರಾಧವನ್ನು ಒಪ್ಪಿಕೊಂಡು ಶರಣಾಗುತ್ತಾನೆ. ಆತ ಕೊಟ್ಟ ಮಾಹಿತಿಯಂತೆ ಪೊಲೀಸರು ಕಾಲೇಜಿಗೆ ಹೋಗಿ ಆತನ ಗೆಳೆಯನನ್ನೂ ಕೂಡ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುತ್ತಾರೆ. ರೌಡಿಯ ಕೊಲೆ ಮಾಡಿದ ಆರೋಪಿಗಳು ಇವರೇ ಎಂದು ಖಾತ್ರಿಯಾದಾಗ ತನಿಖಾಧಿಕಾರಿಯು ಕಾನೂನು ಪ್ರಕಿಯೆ ಮುಗಿಸಿ ಇಬ್ಬರನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರು ಪಡಿಸುತ್ತಾರೆ.
ಇದಿಷ್ಟು ಆದ ನಂತರ, ಬಾಲಕರ ಮೇಲಿದ್ದ ಆರೋಪಗಳು ಘೋರ ಅಪರಾಧಗಳಾದ್ದರಿಂದ ಇಬ್ಬರನ್ನು ಸರ್ಕಾರೀ ವೀಕ್ಷಣಾಲಯದ ಅಭಿರಕ್ಷೆಗೆ ಒಪ್ಪಿಸಿ ನಂತರ ಘಟನೆಯ ಸತ್ಯಾಸತ್ಯತೆಯನ್ನು ಬಾಲಕರ ಬಾಯಲ್ಲೇ ಕೇಳಿ ತಿಳಿಯುವ ಕುತೂಹಲದಿಂದ ಮರುದಿನ ವೀಕ್ಷಣಾಲಯಕ್ಕೆ ತೆರಳಿ ಇಬ್ಬರೂ ಬಾಲಕರನ್ನು ಮನೋವೈದ್ಯರು ಮತ್ತು ಆಪ್ತ ಸಮಾಲೋಚಕರ ಸಮಕ್ಷಮ ಸಮಾಲೋಚನೆಗೆ ಒಳಪಡಿಸಿದೆ. ಬಾಲಕ ಸಿಗರೇಟ್ ಸೇದಿದ ವಿಚಾರದಲ್ಲಿ ನಡೆದ ಬ್ಲಾಕ್ ಮೇಲ್ ಆ ಕೊಲೆಗೆ ಕಾರಣ ಎಂಬುದನ್ನು ಒಪ್ಪಿಕೊಳ್ಳಲು ನನಗೆ ಯಾಕೋ ಕಷ್ಟವಾಗುತ್ತಿತ್ತು. ರೌಡಿಯ ಕೊಲೆಗೆ ಬೇರೆಯದೇ ಕಾರಣಗಳು ಇದ್ದಿರಬೇಕು ಎಂದು ನನ್ನ ಮನಸ್ಸು ಹೇಳುತ್ತಿತ್ತು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಸತ್ಯ ಬಾಯಿ ಬಿಡಲು ಬಾಲಕರು ಸಿದ್ಧರಿರಲಿಲ್ಲ.
ಕೊನೆಗೆ ಕೊಲೆಯ ರಹಸ್ಯ ಹುಡುಕಲು ಬೇರೆಯದೇ ದಾರಿಯನ್ನು ಹುಡುಕಿದೆ. ಬಾಲಕರು ಕಲಿಯುತ್ತಿದ್ದ ಕಾಲೇಜಿನ ಪ್ರಾಂಶುಪಾಲರು ಮತ್ತು ಅಧ್ಯಾಪಕರನ್ನು ಕರೆದು ವಿಚಾರಿಸಿದೆ. ಬಾಲಕರ ಕೆಲವು ಸಹಪಾಠಿಗಳ ಜೊತೆಗೂ ಮಾತನಾಡಿದೆ. ಬೇರೆ ಬೇರೆ ಮೂಲಗಳಿಂದ ಸಹ ಮಾಹಿತಿ ಕಲೆ ಹಾಕಿದೆ. ಕೊನೆಗೆ ನನ್ನ ಊಹೆ ನಿಜ ವಾಯಿತು. ಅಪ್ರಾಪ್ತ ವಯಸ್ಕರನ್ನು ಬಳಸಿಕೊಂಡು ನಡೆಯುತ್ತಿದ್ದ ಮಾದಕ ಪದಾರ್ಥಗಳ ಮಾರಾಟ, ಅಪ್ರಾಪ್ತ ಬಾಲಕರ ಮಾದಕ ಪದಾರ್ಥಗಳ ಸೇವನೆಯ ಚಟ, ಅಪ್ರಾಪ್ತರ ಪ್ರೇಮ ಕಥೆ, ದಾದಾ ಗಿರಿ, ಹುಡುಗಿಯನ್ನು ಸುತ್ತಾಡಿಸಲು ರೌಡಿಯ ಬೈಕ್ ಮತ್ತು ನೆರವು ಬಳಕೆ, ಕೊನೆಗೆ ಬಾಲಕನ ಪ್ರೇಯಸಿಯನ್ನು ಲೈಂಗಿಕವಾಗಿ ಬಳಸಲು ರೌಡಿಯಿಂದ ಯತ್ನ, ಇದರಿಂದ ವಿಚಲಿತರಾದ ಬಾಲಕರು ಸಂಚು ರೂಪಿಸಿ ಮಾಡುವ ರೌಡಿಯ ಬರ್ಬರ ಹತ್ಯೆ, ಹೀಗೆ ಬೆಚ್ಚಿ ಬೀಳಿಸುವ ಹಲವು ರಹಸ್ಯಗಳು ಬಯಲಾದವು.
ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ಪೋಷಣೆ) ಕಾಯಿದೆ 2015 ಅನುಸಾರ 18 ವರ್ಷಕ್ಕಿಂತ ಕೆಳಗಿನವರು ಅಪರಾಧ ಎಸಗಿದರೆ ಅಂತಹ ಮಕ್ಕಳನ್ನು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಅಥವಾ ಬಾಲಕಿ ಎಂದು ಪರಿಗಣಿಸಲಾಗುತ್ತದೆ. ಅಪರಾಧಗಳ ಸ್ವರೂಪ ಮತ್ತು ಶಿಕ್ಷೆಯ ಪ್ರಮಾಣವನ್ನು ಆಧರಿಸಿ ಬಾಲನ್ಯಾಯ ಮಂಡಳಿಯ ಮುಂದಿನ ಪ್ರಕರಣಗಳನ್ನು ಲಘು, ಗಂಭೀರ ಮತ್ತು ಘೋರ ಪ್ರಕರಣ ಎಂದು ವಿಂಗಡಿಸಿ ವಿಚಾರಣೆ ನಡೆಸಲಾಗುತ್ತದೆ. ಅಪರಾಧಿಕ ಕಾನೂನಿನಡಿ ಮೂರು ವರ್ಷಗಳ ವರೆಗಿನ ಅವಧಿಯ ಜೈಲು ಶಿಕ್ಷೆ ನಿಗದಿಪಡಿಸಲಾದ ಅಪರಾಧಗಳನ್ನು ಲಘು ಅಪರಾಧ ಎಂದು ಕರೆಯಲಾಗುತ್ತೆದೆ. ಇಂತಹ ಪ್ರಕರಣಗಳಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಸಾಮಾನ್ಯವಾಗಿ ಆಪ್ತ ಸಮಾಲೋಚನೆಗೆ ಒಳಪಡಿಸಿ ನಂತರ ಪೋಷಕರಿಗೆ ದಂಡ ವಿಧಿಸಿ ಪ್ರಕರಣ ಮುಕ್ತಾಯಗೊಳಿಸಲಾಗುತ್ತದೆ. ಕಳ್ಳತನ, ಹಲ್ಲೆ ಮುಂತಾದ ಪ್ರಕಾರಗಳು ಲಘು ಅಪರಾಧಗಳ ವ್ಯಾಪ್ತಿಗೆ ಬರುತ್ತವೆ.
ಅಪರಾಧಿಕ ಕಾನೂನಿನ ಅಡಿಯಲ್ಲಿ ಕನಿಷ್ಠ ಮೂರಕ್ಕಿಂತ ಹೆಚ್ಚು ವರ್ಷಗಳ ಕಾರಾಗೃಹ ವಾಸ ಶಿಕ್ಷೆಗೆ ಗುರಿಪಡಿಸ ಬಹುದಾದ ಅಪರಾಧಗಳನ್ನು ಗಂಭೀರ ಅಪರಾಧಗಳೆಂದು ಕರೆಯಲಾಗುತ್ತದೆ. ಕೊಲೆ ಯತ್ನ, ಸುಲಿಗೆ, ವಂಚನೆ ಮುಂತಾದ ಅನೇಕ ಅಪರಾಧಗಳು ಈ ಕೆಟಗರಿಯಲ್ಲಿ ಬರುತ್ತವೆ.
ಅಪರಾಧಿಕ ಕಾನೂನಿನ ಅಡಿಯಲ್ಲಿ ಕನಿಷ್ಠ ಏಳು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಕಾರಾಗೃಹ ವಾಸದ ಶಿಕ್ಷೆ ನಿಗದಿಯಾಗಿರುವ ಅಪರಾಧಗಳನ್ನು ಘೋರ ಅಪರಾಧಗಳು ಎಂದು ಪರಿಗಣಿಸಲಾಗುತ್ತದೆ. ಕೊಲೆ, ಅತ್ಯಾಚಾರ ಮುಂತಾದ ಕೆಲವಾರು ಅಪರಾಧಗಳು ಘೋರ ಅಪರಾಧದ ವ್ಯಾಪ್ತಿಗೆ ಬರುತ್ತದೆ.
ಘೋರ ಅಪರಾಧ ಪ್ರಕರಣಗಳಲ್ಲಿ ಅಪರಾಧ ಎಸಗಿದ ದಿನದಂದು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಅಥವಾ ಬಾಲಕಿಯ ವಯಸ್ಸು 16 ರಿಂದ 18 ರ ಒಳಗಿದ್ದ ಸಂದರ್ಭದಲ್ಲಿ ಬಾಲಕ ಅಥವಾ ಬಾಲಕಿಯ ಮನೋ ದೈಹಿಕ ಸಾಮರ್ಥ್ಯವನ್ನು ಅಳೆಯಲು ಪ್ರಾಥಮಿಕ ಮೌಲ್ಯ ಮಾಪನ ನಡೆಸಬೇಕಾಗುತ್ತದೆ. ಇದಕ್ಕಾಗಿ ನುರಿತ ಮನೋವೈದ್ಯರುಗಳ ಸಹಾಯ ಪಡೆಯಲಾಗುತ್ತದೆ. ಮೌಲ್ಯಮಾಪನದ ನಂತರ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಅಥವಾ ಬಾಲಕಿ ಅಪರಾಧ ಎಸಗುವ ಸಮಯದಲ್ಲಿ ಅಪರಾಧ ಕೃತ್ಯದ ಗಂಭೀರತೆ ಮತ್ತು ಪರಿಣಾಮಗಳ ಬಗ್ಗೆ ಗ್ರಹಿಸುವಷ್ಟು ಬುದ್ಧಿಮತ್ತೆ ಮತ್ತು ಭಾವನಾತ್ಮಕ ಸದೃಢತೆ ಹೊಂದಿದ್ದನು ಅಥವಾ ಹೊಂದಿದ್ದಳು ಎಂದು ಬಾಲನ್ಯಾಯ ಮಂಡಳಿಗೆ ಕಂಡು ಬಂದರೆ ಅಂತಹ ಬಾಲಕ ಅಥವಾ ಬಾಲಕಿಯನ್ನು ವಯಸ್ಕ ಅಪರಾಧಿಯ ರೀತಿಯಲ್ಲೇ ವಿಚಾರಣೆಗೆ ಒಳಪಡಿಸುವ ಸಲುವಾಗಿ ಜಿಲ್ಲಾ ನ್ಯಾಯಾಲಯಕ್ಕೆ (Childrens’ court) ಕಳುಹಿಸಿ ಕೊಡಲಾಗುತ್ತದೆ. ಲಘು ಮತ್ತು ಗಂಭೀರ ಅಪರಾಧ ಪ್ರಕರಣಗಳಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ಆಪ್ತ ಸಮಾಲೋಚನೆಯ ಮೂಲಕ ಮನ ಪರಿವರ್ತಿಸಿ, ದಂಡ ವಿಧಿಸಿ ಹಾಗು ಎಚ್ಚರಿಕೆ ನೀಡಿ ಪ್ರಕರಣ ಮುಕ್ತಾಯಗೊಳಿಸಲಾಗುತ್ತದೆ. ಘೋರ ಪ್ರಕರಣಗಳಲ್ಲಿ ಹದಿನಾರು ವರ್ಷ ವಯಸ್ಸು ಮೇಲ್ಪಟ್ಟ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ವಯಸ್ಕ ಅಪರಾಧಿಯ ರೀತಿಯಲ್ಲೇ ವಿಚಾರಣೆಗೆ ಒಳಪಡಿಸಿ ಶಿಕ್ಷೆಗೆ ಗುರಿಪಡಿಸುವ ಅಧಿಕಾರವನ್ನು ಮಕ್ಕಳ ನ್ಯಾಯಾಲಯ ಹೊಂದಿದೆ.
ಮೇಲಿನ ಕೊಲೆ ಪ್ರಕರಣದಲ್ಲಿ ಮೂರು ತಿಂಗಳ ಕಾಲ ನಿರಂತರ ನಿಗಾ, ಆಪ್ತ ಸಮಾಲೋಚನೆ, ಚಿಕಿತ್ಸೆ ಮತ್ತು ತರಬೇತಿಯ ನಂತರ ಇಬ್ಬರೂ ಬಾಲಕರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಪೋಷಕರ ವಶಕ್ಕೆ ಒಪ್ಪಿಸಲಾಯಿತು. ನಾನು ಆ ಊರಿನಿಂದ ಬರುವವರೆಗೂ ಪ್ರಕರಣದ ವಿಚಾರಣೆ ಪ್ರಗತಿಯಲ್ಲಿತ್ತು. ಪ್ರತಿ ವಿಚಾರಣಾ ದಿನಾಂಕಗಳಂದು ಮಂಡಳಿಯ ಮುಂದೆ ಬಂದು ಕೈ ಕಟ್ಟಿ ನಿಲ್ಲುತ್ತಿದ್ದ ಆ ಬಾಲಕರು ಮತ್ತು ಅವರ ಅಸಹಾಯಕ ಪೋಷಕರ ಮುಖಗಳನ್ನು ನೆನೆಸಿ ಕೊಂಡರೆ ಈಗಲೂ ಸಹ ಮನಸ್ಸಿನಲ್ಲಿ ಗಾಢವಾದ ವಿಷಾದ ಆವರಿಸುತ್ತದೆ.
ಶಫೀರ್ ಎ .ಎ
ಕಳೆದ ಹತ್ತು ವರ್ಷಗಳಿಂದ ಕರ್ನಾಟಕದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ತಾವೇ ನಿವೃತ್ತಿಯನ್ನು ಪಡೆದು ಮತ್ತೆ ವಕೀಲರಾಗಿ ಸಕ್ರಿಯರಾಗಿದ್ದಾರೆ. ಸದಾ ಸಮಾಜಮುಖಿ ಚಿಂತನೆ,ಬರೆಹಗಳಲ್ಲಿ ತೊಡಗಿರುವ ಇವರು ಪ್ರತಿ ಶುಕ್ರವಾರ ಕನ್ನಡ ಪ್ಲಾನೆಟ್.ಕಾಂ ಗೆ ʼನ್ಯಾಯ ನೋಟʼ ಅಂಕಣ ಬರೆಯಲಿದ್ದಾರೆ.
ಇದನ್ನೂ ಓದಿ-http://ರಕ್ತದ ಬಣ್ಣ ಕೆಂಪೇ, ಆದರೆ…….https://kannadaplanet.com/world-blood-donor-day/