ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿದ್ದ ಚುನಾವಣಾ ಕಾರ್ಯಗಾರದ ಸಂದರ್ಭದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾದ ಮಾಜಿ ಸಂಸದ ತೇಜಸ್ವಿನಿ ಸೂರ್ಯ ಅವರು ಪಕ್ಷದ ಕಾರ್ಯಕರ್ತರ ಸಹಾಯದಿಂದ ಅಲ್ಲಿಂದ ಪಲಾಯನ ಮಾಡಿದ್ದಾರೆ.
ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ಹಣ ಕಳೆದುಕೊಂಡ ಸಂತ್ರಸ್ತರ ಸಮಸ್ಯೆಯನ್ನು ಸ್ಥಳೀಯ ಸಂಸದರಾದ ತೇಜಸ್ವಿ ಸೂರ್ಯ ಒಂದು ದಿನವೂ ಕೇಳಿಲ್ಲ ಎನ್ನುವುದು ಸಾರ್ವಜನಿಕರ ಅಳಲಾಗಿತ್ತು. ಸಭೆಯಲ್ಲಿ ಹಿರಿಯ ನಾಗರಿಕರಾದಿಯಾಗಿ ಸಹಕಾರಿಯಲ್ಲಿ ಹಣ ಕಳೆದುಕೊಂಡವರು ಈ ಕುರಿತು ಏರುಧ್ವನಿಯಲ್ಲಿ ಸಂಸದರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಕಾರ್ಯಕರ್ತರು ಪಕ್ಕದಲ್ಲಿರುವ ಸಂಸದರ ಕಚೇರಿಗೆ ಹೋಗಿ ದೂರು ದಾಖಲಿಸುವಂತೆ ಸೂಚಿಸಿದ್ದಾರೆ. ಇದಕ್ಕೆ ಒಪ್ಪದ ಸಾರ್ವಜನಿಕರು ಇಲ್ಲೇ ಸೂರ್ಯ ಉತ್ತರಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಕುಪಿತರಾದ ತೇಜಸ್ವಿ ಸೂರ್ಯ ಸಾರ್ವಜನಿಕರ ಮೇಲೆ ವಾಗ್ದಾಳಿ ಮಾಡಿದ್ದಾರೆ. ಇದರ ನಡುವೆಯೇ ವೇದಿಕೆಯಿಂದ ಕೆಳಗಿಳಿದು ಬಿಜೆಪಿ ಕಾರ್ಯಕರ್ತರ ಸಹಾಯದಿಂದ ಅಲ್ಲಿಂದ ಹೊರ ನಡೆದಿರುವ ವಿಡಿಯೋ ಹರಿದಾಡುತ್ತಿದೆ. ಇದೇ ಸಂದರ್ಭದಲ್ಲಿ ತಮ್ಮ ಸಮಸ್ಯೆ ಕೇಳಲು ಮೇಲೆದ್ದ ಸಾರ್ವಜನಿಕರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆಗೆ ಪ್ರಯತ್ನಿಸಿರುವುದೂ ವಿಡಿಯೋದಲ್ಲಿ ದಾಖಲಾಗಿದೆ.
ತೇಜಸ್ವಿ ಕಾಲೆಳೆದ ಕಾಂಗ್ರೆಸ್
ಈ ಕುರಿತು ಕರ್ನಾಟಕ ಕಾಂಗ್ರೆಸ್ ತನ್ನ ಅಧಿಕೃತ @INCKarnataka ಖಾತೆಯ ಮೂಲಕ ಟ್ವೀಟ್ ಮಾಡಿ, ‘ಬಿಜೆಪಿಯ ತೇಜಸ್ವಿ ಸೂರ್ಯ ಮತ್ತೊಮ್ಮೆ “ಎಮರ್ಜೆನ್ಸಿ ಎಕ್ಸಿಟ್ ಡೋರ್” ಮೂಲಕ ಜನರಿಂದ ಎಸ್ಕೇಪ್ ಆಗಿದ್ದಾರೆ!’ ಎಂದು ಕಾಲೆಳೆದಿದೆ. ಚುನಾವಣೆಯ ಸಮಯದಲ್ಲಿ ಮತದಾರರ ಮೇಲೆಯೇ ಹಲ್ಲೆ, ನಿಂದನೆ ಮಾಡಲು ಮುಂದಾಗುವ ತೇಜಸ್ವಿ ಸೂರ್ಯನ ಪಟಾಲಂನ ದುರಹಂಕಾರ ಮಿತಿ ಮೀರಿದೆ, ಮತದಾರರು ಈ ಅಹಂಗೆ ಪಾಠ ಕಲಿಸುವ ಸಮಯ ಬಂದಿದೆ. ಎಲ್ಲಾ ಕಡೆಯೂ ಮತದಾರರಿಂದ @BJP4Karnataka ಅಭ್ಯರ್ಥಿಗಳು ಗೋಬ್ಯಾಕ್ ಎದುರಿಸುತ್ತಿದ್ದಾರೆ, ಈ ಜನಾಕ್ರೋಶಕ್ಕೆ ಬಿಜೆಪಿ ದೂಳಿಪಟ ಮಾಡುವುದು ನಿಶ್ಚಿತ ಎಂದು ಟ್ವೀಟ್ ಮೂಲಕ ತೇಜಸ್ವಿ ಸೂರ್ಯ ಅವರ ನಡೆಯನ್ನು ಕಾಂಗ್ರೆಸ್ ಖಂಡಿಸಿದೆ.