ಕನ್ನಡ ಭಾಷೆ ಪಾಲನೆ ಮಾಡುವಂತೆ ಮೈಸೂರು ಸ್ಯಾಂಡಲ್ಸ್‌ ಗೆ ನಿರ್ದೇಶನ ನೀಡಿ: ಕೈಗಾರಿಕಾ ಸಚಿವರಿಗೆ ಡಾ.ಪುರುಷೋತ್ತಮ ಬಿಳಿಮಲೆ ಆಗ್ರಹ

Most read

ಬೆಂಗಳೂರು: ರಾಜ್ಯದಲ್ಲಿ ತಯಾರಾಗುವ ಎಲ್ಲ ಕೈಗಾರಿಕೆ ಮತ್ತು ಗ್ರಾಹಕ ಉತ್ಪನ್ನಗಳ ಮೇಲೆ ಹೆಸರು ಮತ್ತು ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳನ್ನು ಕನ್ನಡದಲ್ಲಿಯೂ ಮುದ್ರಿಸುವಂತೆ ಹೊರಡಿಸಿರುವ ಆದೇಶವನ್ನು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (ಮೈಸೂರು ಸ್ಯಾಂಡಲ್ಸ್)‌ ಪಾಲನೆ ಮಾಡುತ್ತಿಲ್ಲ. ಆದ್ದರಿಂದ ಕೂಡಲೇ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಕೈಗಾರಿಕಾ ಸಚಿವರನ್ನು ಆಗ್ರಹ ಪಡಿಸಿದ್ದಾರೆ.

ಈ ಕುರಿತಂತೆ ಸಚಿವ ಎಂ.ಬಿ.ಪಾಟೀಲ್‌ ಅವರಿಗೆ ಪತ್ರ ಬರೆದಿರುವ ಬಿಳಿಮಲೆ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಉತ್ಪಾದಿಸುವ ಮೈಸೂರು ಸ್ಯಾಂಡಲ್‌ ಸೋಪು ಕನ್ನಡಿಗರ ಹೆಮ್ಮೆಯ ಪ್ರತೀಕವಾಗಿದ್ದು, ಇದು ದೇಶ-ವಿದೇಶಗಳನ್ನು ತಲುಪುವ ಮಾದರಿಯಲ್ಲಿ ಕನ್ನಡಿಗರ ಮನೆಮನಗಳನ್ನು ತಲುಪಿದೆ. ಆದರೆ ಈ ಸಂಸ್ಥೆಯು ತನ್ನ ಯಾವುದೇ ಉತ್ಪನ್ನಗಳ ಮೇಲೆ ಕನ್ನಡಕ್ಕೆ ಆದ್ಯತೆಯನ್ನು ನೀಡದಿರುವುದು ಆಕ್ಷೇಪಾರ್ಹವಾಗಿದ್ದು, ಕೈಗಾರಿಕಾ ಇಲಾಖೆಯೇ ಹೊರಡಿಸಿರುವ ಆದೇಶವನ್ನು ಉಲ್ಲಂಘಿಸುವ ಮೂಲಕ ನೆಲದ ಕಾನೂನನ್ನು ಅಗೌರವಿಸಿದೆ ಎಂದು ತಿಳಿಸಿದ್ದಾರೆ.

ಹಲವಾರು ಕನ್ನಡ ಪರ ಸಂಘಟನೆಗಳು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಈ ಕನ್ನಡ ವಿರೋಧಿ ಧೋರಣೆಯನ್ನು ಖಂಡಿಸಿ ಪ್ರಾಧಿಕಾರಕ್ಕೆ ಮನವಿಗಳನ್ನು ಸಲ್ಲಿಸಿದ್ದವು. ಈ ಬಗ್ಗೆ ಸುದೀರ್ಘವಾದ ಚರ್ಚೆಗಳನ್ನು ನಡೆಸಿ ಈ ಪತ್ರ ಬರೆಯಲಾಗಿದೆ ಎಂದಿರುವ ಬಿಳಿಮಲೆ, ಸಂಸ್ಥೆಯ ಎಲ್ಲ ಉತ್ಪನ್ನಗಳ ಮೇಲೆ ಕನ್ನಡದಕ್ಕೆ ಮೊದಲ ಪ್ರಾಶಸ್ತ್ಯವನ್ನು ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವ ಮೂಲಕ ಸರ್ಕಾರದ ಕುರಿತಾದ ಕನ್ನಡಿಗರ ವಿಶ್ವಾಸವನ್ನು ಮರುಸ್ಥಾಪಿಸುವ ಕಾರ್ಯವಾಗಬೇಕೆಂದು ಸಚಿವರನ್ನು ಕೋರಿದ್ದಾರೆ.

More articles

Latest article