ಆಸ್ತಿ ತೆರಿಗೆ: ನ.30ಕ್ಕೆ ಕೊನೆಗೊಳ್ಳುವ ಒಟಿಎಸ್ ಯೋಜನೆಯ ಲಾಭ ಪಡೆದುಕೊಳ್ಳಿ; ಇಲ್ಲವಾದಲ್ಲಿ ನಿಮ್ಮ ಆಸ್ತಿ ಜಪ್ತಿಯಾದೀತು!

Most read

ಬೆಂಗಳೂರು: ಒಂದು ಬಾರಿ ಪರಿಹಾರ ಯೋಜನೆ (ಒಟಿಎಸ್) ಈ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದ್ದು, ತೆರಿಗೆ ಪಾವತಿಸದ 3.9 ಲಕ್ಷ ಸುಸ್ತಿದಾರರಲ್ಲಿ 2 ಲಕ್ಷ ತೆರಿಗೆದಾರರು ಇನ್ನೂ ಆಸ್ತಿ ತೆರಿಗೆಯನ್ನು ಪಾವತಿಸಿಲ್ಲ. ಈ ಎರಡು ಲಕ್ಷ ತೆರಿಗೆದಾರರು ಸುಮಾರು 373 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಈಗಾಗಲೇ ಹಲವಾರು ಬಾರಿ ಗಡುವನ್ನು ವಿಸ್ತರಿಸಿದ್ದು, ನ.30ರ ನಂತರ ಗಡುವುನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೂಲಗಳು ಖಚಿತಪಡಿಸಿವೆ. ಆಸ್ತಿ ತೆರಿಗೆ ಪಾವತಿ ಮಾಡದವರಿಗೆ ಡಿ.1ರಿಂದ ದಂಡ ಮತ್ತು ಬಡ್ಡಿಯನ್ನು ವಿಧಿಸಲಾಗುತ್ತದೆ. ಆದ್ದರಿಂದ ಇನ್ನೂ 9 ದಿನಗಳು ಬಾಕಿ ಉಳಿದಿದ್ದು, ಸುಸ್ತಿದಾರರು ಕೂಡಲೇ ಬಾಕಿ ಪಾವತಿಸುವುದು ಕ್ಷೇಮ. ಆನ್ ಲೈನ್ ಮೂಲಕ ದಂಡ ಪಾವತಿಸುವುದು ತುಂಬಾ ಸರಳೀಕರಣವಾಗಿದೆ.

ಸುಸ್ತಿದಾರರ ಅನುಕೂಲಕ್ಕಾಗಿ ಒಟಿಎಸ್ (ಒನ್ ಟೈಮ್ ಸೆಟ್ಲ್ ಮೆಂಟ್) ಯೋಜನೆಯನ್ನು 2024ರ ಫೆಬ್ರವರಿಯಲ್ಲಿ ಜಾರಿಗೊಳಿಸಲಾಗಿತ್ತು. ನಂತರ ಗಡುವನ್ನು ಹಲವಾರು ಬಾರಿ ವಿಸ್ತರಿಸಲಾಗಿತ್ತು. ಇದೀಗ ಡಿಸೆಂಬರ್ 1ರಿಂದ ಬಾಕಿ ವಸೂಲಿಗೆ ಪಾಲಿಕೆ ಕಠಿಣ ಕ್ರಮಗಳನ್ನು ಅನುಸರಿಸಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಒಟಿಎಸ್ ಪ್ರಯೋಜನ ಪಡೆಯಲು ಸುಸ್ತಿದಾರರಿಗೆ ಇದು ಕೊನೆಯ ಅವಕಾಶ. ಡಿಸೆಂಬರ್ 1ರಿಂದ ಬಾಕಿಯ ಬಡ್ಡಿ ದಂಡ ಸೇರಿ ಬಾಕಿ ತೆರಿಗೆಯ ಎರಡು ಮೂರು ಪಟ್ಟು ಹೆಚ್ಚಳವಾದರೂ ಆಗಬಹುದು. ಬಡ್ಡಿ ಮತ್ತು ದಂಡ ಮನ್ನಾದ ಸಂಪೂರ್ಣ ಪ್ರಯೋಜನ ಪಡೆಯಲು ಸುಸ್ತಿದಾರರಿಗೆ ಇದು ಸುವರ್ಣಾವಕಾಶವಾಗಿದ್ದು, ಆನ್ ಲೈನ್ ಮೂಲಕ ತೆರಿಗೆ ಪಾವತಿಸಬಹುದಾಗಿದೆ.

ದಂಡದ ಸ್ವರೂಪ ಹೇಗಿರುತ್ತದೆ?

ಒಟಿಎಸ್ ಮೂಲಕ ಅವಕಾಶ ನೀಡಲಾಗಿದ್ದು, ದಂಡ ಮತ್ತು ಬಡ್ಡಿಗೆ ವಿನಾಯಿತಿ ನೀಡಲಾಗಿದೆ. ಈ ಅವಕಾಶ ಮತ್ತೆ ಒದಗಿಬರುವುದಿಲ್ಲ. ಕೊನೆಯ ಕ್ಷಣದಲ್ಲಿ ಎರಡು ದಿನ ಅವಕಾಶ ಕೇಳಿದರೂ ಸಿಗುವುದಿಲ್ಲ. ನಂತರ ಬಡ್ಡಿ ದಂಡ ಸೇರಿ ದುಪ್ಪಟ್ಟು ಪಾವತಿಸಬೇಕಾಗುತ್ತದೆ. ಉದಾಹರಣೆಗೆ ಒಟಿಎಸ್ ಅಡಿಯಲ್ಲಿ 25 ಸಾವಿರ ರೂ. ಬಾಕಿ ಇದ್ದರೆ ಯೋಜನೆ ಅವಧಿ ಮುಗಿದ ಬಳಿಕ ಕನಿಷ್ಠ 63,000 ರೂ ಪಾವತಿಸಬೇಕಾಗುತ್ತದೆ. ಆದ್ದರಿಂದ ಈಗಲೇ ಆಸ್ತಿ ತೆರಿಗೆ ಪಾವತಿಸಿ ಹೆಚ್ಚಿನ ಹೊರೆಯನ್ನು ತಗ್ಗಿಸಿಕೊಳ್ಳುವಂತೆ ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

More articles

Latest article