ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ ವ್ಯಾಪ್ತಿಯ ಆಸ್ತಿಗಳ ಮೇಲಿನ ತೆರಿಗೆಯನ್ನು ಪರಿಷ್ಕರಿಸಿದ್ದು ಶೇ. 20ರಿಂದ ಶೇ.45 ರವರೆಗೆ ಹೆಚ್ಚಿಸಿದೆ. ಬಿಡಿಎ ಅಭಿವೃದ್ಧಿಪಡಿಸಿರುವ ನಾಡಪ್ರಭು ಕೆಂಪೇಗೌಡ ಲೇ ಔಟ್, ಅರ್ಕಾವತಿ ಲೇಔಟ್, ಸರ್ ಎಂ.ವಿಶ್ವೇಶ್ವರಯ್ಯ ಲೇಔಟ್ ಸೇರಿ 9 ಬಡಾವಣೆಗಳು ಮತ್ತು ಅಪಾರ್ಟ್ ಮೆಂಟ್‌ಗಳ 1.22ಲಕ್ಷ ಗ್ರಾಹಕರಿಗೆ ಹೊರೆಯಾಗಲಿದೆ.
ಕೆಂಪೇಗೌಡ ಲೇಔಟ್ ನಲ್ಲಿ 30×40 ಅಳತೆಯ ನಿವೇಶನಕ್ಕೆ ರೂ.834 ಇದ್ದ ತೆರಿಗೆ ಈ ವರ್ಷದಿಂದ 1,208 ರೂ ಮತ್ತು 50×80 ಅಳತೆಯ ನಿವೇಶನಕ್ಕೆ ರೂ. 6,000 ಇದ್ದ ಆಸ್ತಿ ತೆರಿಗೆ ರೂ. 9,200 ರೂಗಳಿಗೆ ಹೆಚ್ಚಳವಾಗಿದೆ ಎಂದು ಅಲ್ಲಿನ ನಿವೇಶನ ಮಾಲೀಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಆದರೆ ಅರ್ಕಾವತಿ ಲೇಔಟ್ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ಆಸ್ತಿ ತೆರಿಗೆಯಲ್ಲಿ ಅಲ್ಪ ಪ್ರಮಾಣದ ಏರಿಕೆಯಾಗಿದೆ.
ತೆರಿಗೆ ಹೆಚ್ಚಳವನ್ನು ಸಮರ್ಥಿಸಿಕೊಂಡಿರುವ ಬಿಡಿಎ ಮಾರ್ಗಸೂಚಿ ದರದ ಅನ್ವಯ ಆಸ್ತಿ ತೆರಿಗೆಯನ್ನು ಏರಿಕೆ ಮಾಡಲಾಗಿದೆ. ಒಂದು ಬಡಾವಣೆಯ ಮಾರ್ಗಸೂಚಿ ದರ ಏರಿಕೆಯಾಗಿದ್ದರೆ ಸಹಜವಾಗಿಯೇ ತೆರಿಗೆಯೂ ಹೆಚ್ಚಳವಾಗಿದೆ ಎಂದು ಸ್ಪಷ್ಟನೆ ನೀಡಿದೆ. ಹೊಸ ಮಾರ್ಗಸೂಚಿ ದರ 2023 ಅಕ್ಟೋಬರ್ 1ರಿಂದ ಜಾರಿಗೆ ಬಂದಿದ್ದು, 2024-25 ರಿಂದ ಆಸ್ತಿ ತೆರಿಗೆ ಏರಿಕೆಯಾಗಿದೆ. ಕಳೆದ ವರ್ಷ 2024 ಮೇ ಜೂನ್ ತಿಂಗಳಲ್ಲಿ ಲೋಕಸಭಾ ಚುನಾವಣೆ ಇದ್ದ ಕಾರಣಕ್ಕೆ ಆಸ್ತಿ ತೆರಿಗೆಯಲ್ಲಿ ಬದಲಾವಣೆ ಮಾಡಿರಲಿಲ್ಲ. ಈ ವರ್ಷದಿಂದ ಜಾರಿಗೆ ಬಂದಿದೆ ಎಂದು ಬಿಡಿಎ ಅಧಿಕಾರಿಯೊಬ್ಬರು ಹೇಳುತ್ತಾರೆ.
ಕಳೆದ 8 ವರ್ಷಗಳಿಂದ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಬಿಡಿಎಗೆ ಮನವಿ ಸಲ್ಲಿಸುತ್ತಲೇ ಬಂದಿದ್ಧೇವೆ.
ಧಾನಮಂಡಲದ ಅರ್ಜಿ ಸಮಿತಿಗೂ ಮನವಿ ಕೊಟ್ಟಿದ್ದೇವೆ. ಈ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಎಂದು ಹಲವಾರು ನಿವೇಶನಗಳ ಮಾಲೀಕರು ಹೇಳುತ್ತಾರೆ. ಖಾಲಿ ನಿವೇಶನಗಳಿಂದ ಯಾವುದೇ ಆದಾಯ ಇರುವುದಿಲ್ಲ. ಆದ್ದರಿಂದ ತೆರಿಗೆ ಪಾವತಿಸುವುದು ಹೇಗೆ ಎಂದೂ ಪ್ರಶ್ನಿಸುತ್ತಾರೆ. ಒಂದು ವೇಳೆ ಆಸ್ತಿ ತೆರಿಗೆ ಏರಿಕೆಯಲ್ಲಿ ವ್ಯತ್ಯಾಸಗಳಿದ್ದರೆ ಬಿಡಿಎ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಬಿಡಿಎ ಆಯುಕ್ತ ಎನ್. ಜಯರಾಂ ತಿಳಿಸಿದ್ದಾರೆ.