ನೆನಪು
ಸುಮಾರು ಬೆಳಗ್ಗೆ ನಾಲ್ಕೂವರೆಗೆ ಒಬ್ಬ ಆಪ್ತರಿಂದ ಫೋನ್ ಕರೆ ಬಂತು. ಮಲಗಿದ್ದವನು ರಿಂಗ್ ಟೋನ್ ಶಬ್ದಕ್ಕೆ ಎಚ್ಚರವಾಗಿ ಕರೆ ಎತ್ತಿದೆ. ಪ್ರೊಫೆಸರ್ ಅಗಲಿದ ಸುದ್ದಿ ಕೇಳಿ ನಿದ್ದೆಯ ಜೊಂಪು ಮಾಯವಾಗಿ ಎದೆ ಭಾರವಾಗಿ, ದುಗುಡ ಹೆಚ್ಚಾಯಿತು. ಅಪ್ಪ ಸತ್ತಾಗ ಹತ್ತಿರದ ಈ ಕಲ್ಲು ಹೃದಯ ಅಸ್ಸಾದಿ ಸರ್ ಅಗಲಿದ ಸುದ್ದಿಗೆ ಘಂಟೆಗಳ ಕಾಲ ಕಣ್ಣೀರು ಹಾಕಿತು.
ನನ್ನ ನೆಚ್ಚಿನ ಗುರುಗಳ ಸಾಲಿನಲ್ಲಿ ಡಾಕ್ಟರ್ ಮುಜಾಫರ್ ಅಸ್ಸಾದಿ ಪ್ರಮುಖರಾಗುತ್ತಾರೆ. ನನಗೆ ಅವರೊಂದಿಗೆ ತರಗತಿಯಲ್ಲಿ ಬಹಳ ಕಾಲ ಸಮಯ ಕಳೆಯಲು ಅವಕಾಶ ಸಿಗಲಿಲ್ಲ. ಆದರೆ ತರಗತಿಯಿಲ್ಲದ ಸಮಯದಲ್ಲಿ ಅವರೊಂದಿಗೆ ಇದ್ದ ಒಡನಾಟ, ನಡೆಸಿದ ಸಂವಾದವು ನಮಗೆ ಒಬ್ಬ ಶಿಕ್ಷಕ ವಿದ್ಯಾರ್ಥಿಗಳೊಂದಿಗೆ ಸಹ ವಿದ್ಯಾರ್ಥಿಯಾಗಿ ಬೆರೆತು ನೀಡಿದ ಸವಿ ನೆನಪಾಗಿ ಸದಾ ನೆನಪಿನ ಬುತ್ತಿಯಾಗಿದೆ.
ನಾನು ರಾಷ್ಟ್ರ ಮಟ್ಟದ ನಾಯಕತ್ವದ ಶಿಬಿರಕ್ಕೆ ಆಯ್ಕೆಯಾಗಿ ಗುರುಗಳಿಗೆ ಹೇಳದೆ ಕೇಳದೆ ಕಾಲೇಜು ಬಿಟ್ಟು ಹೋಗಿದ್ದೆ. ಅದನ್ನು ತಿಳಿದ ಮೇಲೆ ಅವರು ಕೋಪ ಮಾಡಿಕೊಂಡು ಮಾತಾಡಿಸಬೇಡ ಅಂತ ಹೇಳಿ ಸುಮಾರು ಎರಡು ತಿಂಗಳು ಮಾತು ಬಿಟ್ಟಿದ್ದರು. ಫೋನ್ ಮಾಡಿದ್ರು ಎತ್ತುತ್ತಿರಲಿಲ್ಲ. ಕಾರಣ ಅವರು ನನ್ನನ್ನು UPSC ಪರೀಕ್ಷೆ ಬರೆದು ಐಎಎಸ್, ಐಪಿಎಸ್ ಅಧಿಕಾರಿಯಾಗಿ ನೋಡಬೇಕೆಂದು ಕೊಂಡಿದ್ದರು. ಆದರೆ ನಾನು ದಿಸೋಮ್ ನಾಯಕತ್ವ ಫೆಲೋಶಿಪ್ ಮೂಲಕ ದೇಶ ಸಂಚರಿಸುತ್ತಾ ಕಲಿಯುತ್ತಿದ್ದ ಅನುಭವಗಳ ಲೇಖನಗಳನ್ನು ಬರೆದಾಗ ಅದನ್ನು ಹೆಮ್ಮೆಯಿಂದ ಕಾಲೇಜು ಕಾರ್ಯಕ್ರಮದಲ್ಲಿ ಹೇಳುತ್ತಿದ್ದರು, ನನ್ನ ಉದಾಹರಣೆ ಕೊಡುತ್ತಿದ್ದರು ಎಂಬುದು ಜ್ಯೂನಿಯರ್ ವಿದ್ಯಾರ್ಥಿಗಳಿಂದ ತಿಳಿಯಿತು. ಆಮೇಲೆ ಸರ್ ನಾನು ಮತ್ತೆ ಸ್ನೇಹಿತರಾದೆವು. ಇದು ಅವರ ಮೇರು ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ನನ್ನ ವಿದ್ಯಾರ್ಥಿ ಉನ್ನತ ಸ್ಥಾನಕ್ಕೆ ಹೋಗಬೇಕು, ಸಮಾಜಕ್ಕೆ, ಸಮುದಾಯಕ್ಕೆ ಕೊಡುಗೆ ನೀಡಬೇಕು ಎಂಬುದು ಅವರ ಮಹದಾಸೆ ಆಗಿತ್ತು. ಅವರಿಗೆ ಹೇಳದೆ ಹೋಗಿದ್ದು ಅವರಿಗೆ ಆತಂಕವಾಗಿರಬೇಕು. ಎಲ್ಲಿ ದಾರಿ ತಪ್ಪಿದನೋ ಎಂದು ನೊಂದು ಕೊಂಡಿರಬೇಕು. ಅದಕ್ಕೆ ನನ್ನೊಂದಿಗೆ ಅವರು ಮಾತು ಬಿಟ್ಟಿದ್ದರು. ಈ ಘಟನೆ ಅವರಿಗೆ ವಿದ್ಯಾರ್ಥಿಗಳ ಮೇಲಿದ್ದ ಅಪಾರವಾದ ಪ್ರೀತಿ, ಕಾಳಜಿ ತೋರಿಸುತ್ತೆ.
ನಾನು ಆರಂಭದಲ್ಲಿ UPSC ಓದುವ ಇಚ್ಛೆ ತಿಳಿಸಿದ್ದೆ. ಅವರು ಕೂಡ ಎಲ್ಲ ತರಹದ ಸಹಾಯವನ್ನು, ಅಧ್ಯಯನಕ್ಕೆ ತಗಲುವ ಖರ್ಚು ವೆಚ್ಚವನ್ನು ತಮಗೆ ಗೊತ್ತಿರುವ ಸಮಾಜಮುಖಿ ಜನರೊಂದಿಗೆ ಹೇಳಿ ಸಹಾಯ ಮಾಡಿಸ್ತೀನಿ ಅಂತ ಹೇಳಿ ಪ್ರೋತ್ಸಾಹ ನೀಡಿದ್ದರು. ಕಾಲಾಂತರದಲ್ಲಿ ನಾನು ರಾಜಕೀಯದಲ್ಲಿ ಮುಂದುವರೆಯುತ್ತೇನೆಂದು ಹೇಳಿದಾಗ ಬಹಳ ಪ್ರಾಯೋಗಿಕ ಸಲಹೆಗಳನ್ನು ನೀಡಿ ನನ್ನ ಆತ್ಮ ವಿಶ್ವಾಸವನ್ನು, ಧೈರ್ಯವನ್ನು ನೂರ್ಮಡಿ ಗೊಳಿಸಿದ್ದರು. ಚುಣಾವಣೆಯಲ್ಲಿ ಸ್ಪರ್ಧೆ ಮಾಡಿದ ಮೇಲೆ ಎಲ್ಲೇ ಸಿಕ್ಕರೂ ಬನ್ನಿ ನಾಯಕರೇ ಎಂದು ಕರೆಯುತ್ತಿದ್ದರು. ನನಗೆ ಆ ಮಾತು ಕೇಳಿದಾಗಲೆಲ್ಲ ಹೆಮ್ಮೆ ಅನಿಸುತ್ತಿತ್ತು, ಇನ್ನೂ ಸಾಧಿಸುವ ಛಲ ಹೆಚ್ಚಾಗಿತ್ತು.
ನಾನು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಸ್ಸಾದಿ ಗುರುಗಳ ವಿದ್ಯಾರ್ಥಿಯಾಗಿದ್ದೆ. ಅದು ನನ್ನ ಹೆಮ್ಮೆ. ಬೇರೆ ಯಾವುದೇ ವಿಶ್ವವಿದ್ಯಾಲಯದ ಪ್ರೊಫೆಸರ್ ಗಳ ಜೊತೆ ಮಾತಾಡುವಾಗ ಅಸ್ಸಾದಿ ಸರ್ ವಿದ್ಯಾರ್ಥಿ ಎಂದರೆ ಸಿಗುತ್ತಿದ್ದ ಗೌರವವೇ ಬೇರೆ. ಅಷ್ಟೊಂದು ವಿದ್ವತ್ ಮತ್ತು ಆತ್ಮೀಯತೆಯನ್ನು ಎಲ್ಲರೊಂದಿಗೆ ಅವರು ಹೊಂದಿದ್ದರು.
ಅನೇಕ ಕಾಲೇಜು ಸಂಘರ್ಷಗಳಲ್ಲಿ ವಿದ್ಯಾರ್ಥಿಗಳ ನಡೆ ಸರಿ ಇದ್ದಾಗ ನೇರವಾಗಿ ಯಾ ಪರೋಕ್ಷವಾಗಿ ವಿದ್ಯಾರ್ಥಿಗಳ ಜೊತೆಗೆ ಗಟ್ಟಿಯಾಗಿ ಅವರು ನಿಂತಿದ್ದರ ನೆನಪು ಎಂದೂ ಮಾಸದು.
ಕಾಲ ಕಳೆಯಬಹುದು ವ್ಯಕ್ತಿ ಮಾಯಬಹುದು ಆದರೆ ವ್ಯಕ್ತಿ ಕಲಿಸಿದ ವಿಚಾರಗಳು, ಸದ್ಗುಣ ವ್ಯಕ್ತಿಯ ಸನ್ನುಡಿ ಎಂದಿಗೂ ಮಾಯುವುದಿಲ್ಲ. ನನ್ನಂತೆ ಅದೆಷ್ಟೋ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಅವರು ನೀಡಿದ ಸಹಕಾರ, ಮಾಡಿದ ಉಪಕಾರ ಕೇವಲ ಈ ಸಾಲುಗಳಲ್ಲಿ ಹೇಳಿ ಮುಗಿಸಲು ತೀರದು.
ಇದನ್ನೂ ಓದಿ- ನುಡಿ ನಮನ |ಅಗಲಿದ ಸಂಗಾತಿಗಳ ಸಾಲಿಗೆ ಮತ್ತೊಬ್ಬರು…
ಅಸ್ಸಾದಿ ಸರ್ ಕೇವಲ ಒಬ್ಬ ಪ್ರೊಫೆಸರ್ ಆಗಿರದೆ, ಸಮಾಜದಲ್ಲಿನ ಆಗು ಹೋಗುಗಳಿಗೆ ಸ್ಪಂದಿಸುವವರಾಗಿದ್ದರು. ಅವರ ಸೂಕ್ಷ್ಮತೆಯ ಲೇಖನಗಳು, ಹೃದಯ ಮೆದುಳಿನ ಆಳವನ್ನು ಹೊಕ್ಕು ವೈಚಾರಿಕವಾಗಿ ಸಮಾಜವನ್ನು ಕಣ್ಣಿಂದಲೂ ಹೃದಯದಿಂದಲೂ ನೋಡುವಂತೆ ಮಾಡಿವೆ.
ಅದಕ್ಕೆ ಪ್ರತಿಕ್ರಿಯೆ ಎಂಬಂತೆ ನಿಮ್ಮ ಕಾಳಜಿಗಳನ್ನು ಇಂದಲ್ಲ ನಾಳೆ ಪ್ರಾಯೋಗಿಕವಾಗಿ ಸಮಾಜದಲ್ಲಿ ಬಿತ್ತುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆಂದು ಈ ಸಂದರ್ಭದಲ್ಲಿ ಮಾತು ಕೊಡುವೆ ಗುರುಗಳೇ. ನಿಮ್ಮ ಅಗಲಿಕೆ ಎಷ್ಟು ಒಂಟಿತನ ನೀಡಿದೆಯೋ ಅಷ್ಟೇ ಜವಾಬ್ದಾರಿಯನ್ನೂ ಹೆಚ್ಚಿಸಿದೆ.
MK ಸಾಹೇಬ್ ನಾಗೇಶನಹಳ್ಳಿ (ಕೊಪ್ಪಳ)
ಅಸ್ಸಾದಿಯವರ ವಿದ್ಯಾರ್ಥಿ
ಇದನ್ನೂ ಓದಿ- ಮುಜಾಫರ್ ಅಸ್ಸಾದಿ | ವಿದ್ವತ್ತಿನ, ಬಹುತ್ವದ ಪ್ರತೀಕ