ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ಪಡೆಯಲು ಆಗುತ್ತಿರುವ ಸಮಸ್ಯೆಗಳು ಮತ್ತು ನಾಡಕಚೇರಿಗಳಲ್ಲಿ ಪರಿಶಿಷ್ಟ ಜಾತಿ ಸಮುದಾಯದವರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ಕುರಿತು ನಾಳೆ ನವಂಬರ್ 20, ಗುರುವಾರದಂದು ಸಾರ್ವಜನಿಕ ಅಹವಾಲು ಸಭೆ ಹಮ್ಮಿಕೊಳ್ಳಲಾಗಿದೆ.
ಎಸ್ ಸಿ ಎಸ್ ಎ /ಟಿ ಎಸ್ ಎ ಜಾಗೃತಿ ವೇದಿಕೆ ಆಶ್ರಯದಲ್ಲಿ ಗಾಂಧಿ ಭವನದ ಬಾಪೂ ಸಭಾಂಗಣದಲ್ಲಿ ಅಂದು ಬೆಳಗ್ಗೆ 11.30 ರಿಂದ ಮಧ್ಯಾಹ್ನ 2 ಗಂಟೆವರೆಗೆ ಸಾರ್ವಜನಿಕ ಅಹವಾಲು ಸಭೆ ನಡೆಯಲಿದೆ.
ಈ ಸಭೆಗೆ ಸಮಾಜ ಕಲ್ಯಾಣ ಇಲಾಖೆಯೆ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ದಲಿತ ಸಂಘಟನೆಗಳ ಮುಖಂಡರು ಬಾಗವಹಿಸಲಿದ್ದಾರೆ. ಸಭೆಯಲ್ಲಿ ಸಮಸ್ಯೆಗಳಿಗೆ ಒಳಗಾಗಿರುವ ಸಮುದಾಯದವರು ವೈಯಕ್ತಿಕವಾಗಿ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲಿದ್ದಾರೆ.
ಈ ಸಭೆಗೆ ವಿವಿಧ ಸಂಘಟನೆಗಳು ಸಹಕಾರ ನೀಡಿವೆ. ಹಕ್ಕೊತ್ತಾಯಗಳು:
1.ಕೊಳಗೇರಿಗಳಲ್ಲಿ ಪರಿಶಿಷ್ಟ ಜಾತಿಯ ಅನೇಕರು ಒಂಟಿ ಮಹಿಳೆಯರು,ವಿಧವೆಯರು, ಗಂಡ ಬಿಟ್ಟ ಸ್ತ್ರೀಯರು, ಶೋಷಣೆಗೊಳಪಟ್ಟ ಹೆಣ್ಣು ಮಕ್ಕಳು, ವಿಚ್ಚೇದಿತ ಮಹಿಳೆಯರ ಮಕ್ಕಳಿಗೆ ಜಾತಿ ಪ್ರಮಾಣ ಪತ್ರ ನೀಡಲು ತಂದೆಯ ಶಾಲಾ ದಾಖಲಾತಿಗಳನ್ನು ಕೇಳಲಾಗುತ್ತಿದೆ. ಒಂಟಿಯಾಗಿ ಬದುಕುತ್ತಿರುವ ಹೆಣ್ಣು ಮಕ್ಕಳಿಗೆ ಇದನ್ನು ಒದಗಿಸುವುದು ಕಷ್ಟವಾಗಿದೆ.
2.ಪರಿಶಿಷ್ಟ ಜಾತಿ ಸಮುದಾಯದವರು ಜಾತಿ ಪ್ರಮಾಣ ಪತ್ರ ಪಡೆಯಲು ಶೈಕ್ಷಣಿಕ ದಾಖಲೆಗಳು ಮತ್ತು ಟಿಸಿ ಕೇಳುತ್ತಿರುವುದರಿಂದ ಅನಕ್ಷರಸ್ಥ ಕೊಳಗೇರಿ ನಿವಾಸಿಗಳಿಗೆ ಕಷ್ಟವಾಗುತ್ತಿದೆ ಮತ್ತು ಸರಕಾರದ ಆದೇಶದ ಪ್ರಕಾರ ಸ್ಥಳ ಮಹಜರು ಮಾಡಿ ಪ್ರಮಾಣ ಪತ್ರ ನೀಡಬೇಕೆನ್ನುವುದನ್ನು ಯಾವ ಅಧಿಕಾರಿಯೂ ಪಾಲಿಸುತ್ತಿಲ್ಲ. ಆದೇಶದ ಪ್ರಕಾರ ಅಧಿಕಾರಿಗಳಿ ಸ್ಥಳ ಮಹಜರು ಮಾಡಿ ಪ್ರಮಾಣ ಪತ್ರ ನೀಡಬೇಕಾಗಿರುತ್ತದೆ.
3.ಜಾತಿ ಪ್ರಮಾಣ ಪತ್ರದಲ್ಲಿ ಮೂಲ ಜಾತಿಗಳನ್ನು ಹಾಕದೇ ಇರುವ ಕಾರಣ ನಿಗಮಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಜಾತಿ ಪ್ರಮಾಣ ಪತ್ರದಲ್ಲಿ ಮೂಲ ಜಾತಿಯ ಹೆಸರನ್ನು ಕಡ್ಡಾಯವಾಗಿ ಹಾಕುವಂತೆ ಆದೇಶ ಹೊರಡಿಸಬೇಕು.
4.ಅನ್ಯ ಧರ್ಮೀಯ ಹೆಸರುಗಳನ್ನು ಇಟ್ಟುಕೊಂಡಿರುವ ಕಾರಣ ಜಾತಿ ಪ್ರಮಾಣ ಪತ್ರ ನೀಡಲು ನಿರಾಕರಿಸುತ್ತಿದ್ದಾರೆ. ಭಾರತ ಸಂವಿಧಾನದ ಪರಿಚ್ಚೇದದ 19ರಲ್ಲಿ ನೀಡಿರುವ ಧಾರ್ಮಿಕ ಸ್ವಾತಂತ್ರದ ಭಾಗವಾಗಿ ಕೊಳಗೇರಿಗಳಲ್ಲಿ ಕೆಲವರು ಅನ್ಯ ಧರ್ಮದ ಹೆಸರುಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಅವರ ಆಚಾರ ವಿಚಾರಗಳೆಲ್ಲವೂ ಮೂಲ ಜಾತಿಗೆ ಸೇರಿದ್ದಾಗಿರುತ್ತದೆ. ಆದ್ದರಿಂದ ಹೆಸರಿನ ಕಾರಣಕ್ಕೆ ಜಾತಿ ಪ್ರಮಾಣ ನೀಡಲು ನಿರಾಕರಿಸದಂತೆ ತಹಶೀಲ್ದಾರ್ ಅವರಿಗೆ ಸೂಚಿಸಬೇಕು.
5.ಮಕ್ಕಳ ಆದಾಯ ಪ್ರಮಾಣ ಪತ್ರವನ್ನು ಅವೈಜ್ಞಾನಿಕವಾಗಿ ನೀಡಲಾಗುತ್ತಿದೆ. ಆದ್ದರಿಂದ ಕುಟುಂಬದ ಮುಖ್ಯಸ್ಥರ ಆದಾಯವನ್ನು ಪರಿಗಣಿಸಿ ಶೈಕ್ಷಣಿಕ ಯೋಜನೆಗಳನ್ನು ನೀಡಬೇಕು.
6.ನಾಡ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ಸರತಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸುವವರಿಗೆ ಒಂದಲ್ಲಾ ಒಂದು ಕಾರಣ ನೀಡಿ ಅರ್ಜಿಯನ್ನು ತಿರಸ್ಕರಿಸುತ್ತಾರೆ. ಆದರೆ ದಾಖಲಾತಿಗಳು ಇಲ್ಲದೇ ಇದ್ದರೂ ಮಧ್ಯವರ್ತಿಗಳ ಅರ್ಜಿ ಪಡೆದು ಜಾತಿ ಪ್ರಮಾಣ ನೀಡಲಾಗುತ್ತಿದೆ, ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಪಲಾನುಭವಿಗಳಿಂದ ನೇರವಾಗಿ ಅರ್ಜಿ ಪಡೆದು ಪರಿಶೀಲಿಸಬೇಕು.

