545 ಪಿಎಸ್‌ಐ ಅಭ್ಯರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿದ ಸಚಿವ ಪ್ರಿಯಾಂಕ್‌ ಖರ್ಗೆ

Most read

“ನೀರಿಗಿಳಿದ ಮೇಲೆ ಚಳಿಯ ಚಿಂತೆಯೇಕೆ” ಎನ್ನುವಂತೆ ನ್ಯಾಯದ ಹೋರಾಟಕ್ಕೆ ಇಳಿದ ಮೇಲೆ ಬಿಜೆಪಿಗರ ದಾಳಿಗಳನ್ನು ಲೆಕ್ಕಿಸಲಿಲ್ಲ, ಲೆಕ್ಕಿಸುವ ಜಾಯಮಾನವೂ ನನ್ನದಲ್ಲ. ಇಂದು ನಮ್ಮ ಸರ್ಕಾರ ನಡೆಸಿದ 545 ಪಿಎಸ್ಐ ಹುದ್ದೆಗಳ ಪ್ರಾಮಾಣಿಕ ನೇಮಕಾತಿಯೇ ಬಿಜೆಪಿಗರಿಗೆ ನಾನು ಕೊಡಬಹುದಾದ ಅತ್ಯುತ್ತಮ ಉತ್ತರ ಎಂದು ಭಾವಿಸಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಬಿಜೆಪಿಯವರಿಗೆ ತಿರುಗೇಟು ಕೊಟ್ಟಿದ್ದಾರೆ.

ನಮ್ಮ ಸರ್ಕಾರ(ಕಾಂಗ್ರೆಸ್) ಪಿಎಸ್‌ಐ ಹಗರಣವನ್ನು ಬಿಚ್ಚಿಟ್ಟಾಗ ಅಂದಿನ ಬಿಜೆಪಿ ಸರ್ಕಾರದ ಗೃಹಸಚಿವರು ಬಿಜೆಪಿಯ ನಾಯಕರೆಲ್ಲರೂ ಸದನದಲ್ಲೇ “ಹಗರಣ ನಡೆದೇ ಇಲ್ಲ” ಎನ್ನುವ ಶತಮಾನದ ಹಸಿ ಸುಳ್ಳನ್ನು ಸತ್ಯದ ತಲೆಯ ಮೇಲೆ ಸುತ್ತಿಗೆಯಲ್ಲಿ ಹೊಡೆದಂತೆ ಹೇಳಿದ್ದರು ಎಂದು ಕಿಡಿಕಾರಿದ್ದಾರೆ.

2024ರ ಜನವರಿಯಲ್ಲಿ ನಡೆದ ಪಿಎಸ್‌ಐ 545 ಹುದ್ದೆಗಳ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಗೃಹ ಇಲಾಖೆ ಸೋಮವಾರ ಪ್ರಕಟಗೊಳಿಸದ ಬೆನ್ನಲ್ಲೆ, ʼಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟ ವ್ಯವಸ್ಥೆಯಿಂದಾಗಿ ಪ್ರತಿಭಾವಂತ ಪಿಎಸ್ಐ ಅಭ್ಯರ್ಥಿಗಳು ಕಟ್ಟಿಕೊಂಡಿದ್ದ ಕನಸು ಕಮರಿಹೋಗಿತ್ತು, PSI ನೇಮಕಾತಿಯ ಬೃಹತ್ ಹಗರಣವನ್ನು ಬಯಲಿಗೆಳೆಯುವ ನನ್ನ ಮೊದಲ ಹೆಜ್ಜೆಯಿಂದಲೇ ಪ್ರತಿಭಾವಂತರಿಗೆ ನ್ಯಾಯ ದೊರೆಯುವ ವಿಶ್ವಾಸವಿತ್ತು, ನಮ್ಮ ಹೋರಾಟದಲ್ಲಿ ಬದ್ಧತೆಯೂ ಇತ್ತು ಎಂದು ಟ್ವೀಟ್‌ ಮಾಡಿದ್ದಾರೆ.

ಮುಂದುವರೆದು, ʼಇಷ್ಟೂ ಸಾಲದೆಂಬಂತೆ, ನನ್ನ(ಪ್ರಿಯಾಂಕ್‌ ಖರ್ಗೆ) ಬಾಯಿ ಮುಚ್ಚಿಸಲು ಬಿಜೆಪಿಗರು ನಡೆಸಿದ ಕಸರತ್ತು ಒಂದೆರಡಲ್ಲ, ನನಗೆ CID ಪೊಲೀಸರ ಮೂಲಕ ಎರಡೆರಡು ಬಾರಿ ನೋಟಿಸ್ ನೀಡಿದ್ದರು, ಪ್ರಮುಖ ಆರೋಪಿ ಆರ್.ಡಿ ಪಾಟೀಲನೊಂದಿಗೆ ನನ್ನ ಹೆಸರು ತಳುಕು ಹಾಕಲು ಯತ್ನಿಸಿದ್ದರು, ನನ್ನ ವಿರುದ್ಧ ಬಿಜೆಪಿ ನಾಯಕರು ಸಾಲುಗಟ್ಟಿ ನಿಂತು ತಮ್ಮ ಕೊಳಕು ನಾಲಿಗೆಯ ಮೂಲಕ ಯುದ್ಧ ಸಾರಿದ್ದರು. “ಕಾನ್ವೆಂಟ್ ದಲಿತ್” ಎಂಬ ಬಿರುದನ್ನೂ ಕೊಟ್ಟಿದ್ದರು ಎಂದು ಬಿಜೆಪಿಗರ ವಿರುದ್ಧ ಟ್ವೀಟ್‌ನಲ್ಲಿ ದಾಳಿ ನಡೆಸಿದ್ದಾರೆ.

ಇಂದು ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ಮರುಪರೀಕ್ಷೆ ನಡೆಸಿ, ಅಂದು ಬಿಜೆಪಿ ಸರ್ಕಾರ ಲೂಟಿಗೆ ಬಳಸಿಕೊಂಡಿದ್ದ ಅದೇ 545 ಪಿಎಸ್ಐ ಹುದ್ದೆಗಳಿಗೆ ಪ್ರತಿಭಾವಂತ ಅಭ್ಯರ್ಥಿಗಳನ್ನು ನಿಯಮಾನುಸಾರ, ನ್ಯಾಯಸಮ್ಮತವಾಗಿ ಆಯ್ಕೆ ಮಾಡಿದೆ, ಆಯ್ಕೆ ಪ್ರಕ್ರಿಯೆ ವಿಳಂಬವಾದರೂ ಪಾರದರ್ಶಕವಾಗಿರಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು.

ಚುನಾವಣೆಯ ಪೂರ್ವದಲ್ಲಿ ನಾವು ನೀಡಿದ್ದ ಭರವಸೆಯಂತೆಯೇ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ಕೊಡಲಾಗಿದೆ, ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ, ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ವಿಫಲರಾದ ಅಭ್ಯರ್ಥಿಗಳು ನಿರಾಸೆಗೊಳ್ಳದೆ ತಮ್ಮ ಪ್ರಯತ್ನವನ್ನು ಮುಂದುವರೆಸಬೇಕು, ಪ್ರತಿಭೆಗೆ ತಕ್ಕ ಫಲ ಪಡೆಯುವ ವಿಫುಲ ಅವಕಾಶಗಳನ್ನು ಸರ್ಕಾರ ಮಾಡಿಕೊಡಲಿದೆ ಎಂದು ಭರವಸೆಯನ್ನು ನೀಡಿದ್ದಾರೆ.

ಆಯ್ಕೆಯಾದ ಅಭ್ಯರ್ಥಿಗಳೆಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಯುವ ಸಮುದಾಯದ ಜೊತೆಗಿದೆ, ನೊಂದವರಿಗೆ ನ್ಯಾಯ ನೀಡುವುದು, ಯುವಜನರಿಗೆ ಸುಭದ್ರ ಬದುಕು ರೂಪಿಸುವುದು ನಮ್ಮ ಆದ್ಯತೆ ಹಾಗೂ ಬದ್ಧತೆಯಾಗಿದೆ.

More articles

Latest article