ಬೆಂಗಳೂರು: ಟೀಕಿಸುವ ಭರದಲ್ಲಿ ತಮ್ಮನ್ನು “ರಾಜಕುವರ” ಎಂದು ಸಂಬೋಧಿಸಿರುವ ಬಿಜೆಪಿ ನಾಯಕರಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, “ನಿಮ್ಮ ಹುಟ್ಟಿನ ಬಗ್ಗೆ ನಿಮ್ಮಲ್ಲಿ ಅನುಮಾನಗಳಿದ್ದರೆ, ಬನ್ನಿ ನಾನು ನಿಮಗೆ ಉಚಿತ DNA ಪರೀಕ್ಷೆ ಮಾಡಿಸಲು ಮತ್ತೊಮ್ಮೆ ಆಹ್ವಾನಿಸುತ್ತಿದ್ದೇನೆ” ಎಂದು ಬಿಜೆಪಿ ಅಧಿಕೃತ “X” ಖಾತೆಗಳಾದ @BJP4India ಮತ್ತು @BJP4Karnataka ಗಳನ್ನು ಟ್ಯಾಗ್ ಮಾಡಿ ಉತ್ತರಿಸಿದ್ದಾರೆ.
ಚುನಾವಣಾ ಆಯೋಗದಿಂದ ಲೋಕಸಭಾ ಚುನಾವಣಾ ದಿನಾಂಕಗಳು ಪ್ರಕಟವಾದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಚಿವರು, “ಕಳೆದ ಬಾರಿಯಂತೆಯೇ ದೇಶಾದ್ಯಂತ ಮೋದಿ ತಮ್ಮ ಪ್ರಚಾರ ಕಾರ್ಯದ ಮೈಲೇಜ್ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಚುನಾವಣಾ ದಿನಾಂಕಗಳು ಘೋಷಣೆಯಾಗಿವೆ. ಬಿಜೆಪಿ ತಮ್ಮ ಸ್ಟಾರ್ ಪ್ರಚಾರಕರ ಓಡಾಟಕ್ಕೆ ಅನುಕೂಲವಾಗುವಂತೆ 7 ಹಂತದ ಮತದಾನ ಪ್ರಕ್ರಿಯೆ ನಿಗದಿಯಾಗಿದೆ. ಹೆಚ್ಚು ಭೌಗೋಳಿಕ ಹಿನ್ನೆಲೆಯ ಭಾರತದಲ್ಲಿ ಸೈನ್ಯದ ಹೊಂದಾಣಿಗೆ ಸುದೀರ್ಘ ಚುನಾವಣಾ ಪ್ರಕ್ರಿಯೆ ನಡೆಸುತ್ತಿರುವುದಾಗಿ ಚುನಾವಣಾ ಆಯೋಗ ಹೇಳಿದೆ. ಆದರೆ ಈ ದೇಶವು ಇಷ್ಟು ದೊಡ್ಡ ಪ್ರಮಾಣದ ಚುನಾವಣೆ ನಡೆಸುತ್ತಿರುವುದು ಇದು ಮೊದಲೇನಲ್ಲ. ಇದಕ್ಕೆ ನಾವೇನೂ ಮಾಡಲು ಸಾಧ್ಯವಿಲ್ಲ. ಆಯೋಗ ಘೋಷಿಸಿದ ದಿನಾಂಕಗಳೊಂದಿಗೆ ಚುನಾವಣೆ ಎದುರಿಸಲು ನಾವು ಸಿದ್ಧರಿದ್ದೇವೆ” ಎಂದು ಹೇಳಿದ್ದಾರೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿಯ ಐಟಿ ಸೆಲ್ ತನ್ನ @BJP4Karnataka “X” ಖಾತೆಯಲ್ಲಿ, ಸಚಿವರನ್ನು “ರಾಜಕುಮಾರ” ಎಂದು ಸಂಭೋಧಿಸಿ ನಿಮ್ಮಲ್ಲೂ ಇರುವ ಸ್ಟಾರ್ ಪ್ರಚಾರಕರನ್ನು ಬಳಸಿಕೊಂಡು ನಿಮ್ಮ ಪ್ರಚಾರದ ಮೈಲೇಜನ್ನು ಹೆಚ್ಚಿಸಿಕೊಳ್ಳಿ ಎಂದು ವ್ಯಂಗ್ಯವಾಗಿ ಬರೆದುಕೊಳ್ಳಲಾಗಿದೆ.
ಇದಕ್ಕೆ ಉತ್ತರಿಸಿರುವ ಸಚಿವ ಖರ್ಗೆ ಅವರು, “ನಿಮಗೆ ನಿಮ್ಮಲ್ಲಿರುವ ವಂಶಾವಳಿ ರಾಜಕಾರಣಿಗಳಿಗೆ ಈ ರಾಜಕುವರ ಅಥವಾ ರಾಜವಂಶಸ್ಥ ಎಂಬ ಪದ ಪ್ರಯೋಗ ಮಾಡುವ ಧೈರ್ಯವಿದೆಯೆ” ಎಂದು ಕೇಳಿದ್ದಾರೆ. ಇದನ್ನು ಹೇಳುವಾಗ ರಾಜ್ಯ ಬಿಜೆಪಿ ನಾಯಕರಾದ ಬಿ.ಎಸ್. ಯಡಿಯೂರಪ್ಪ, ಬಿ.ವೈ. ರಾಘವೇಂದ್ರ, ವಿಜಯೇಂದ್ರ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕೆ.ಎಸ್. ಈಶ್ವರಪ್ಪ, ತೇಜಸ್ವಿ ಸೂರ್ಯ, ಜಗದೀಶ ಶೆಟ್ಟರ, ಶಶಿಕಲಾ ಜೊಲ್ಲೆ, ಉಮೇಶ ಜಾಧವ, ಅರವಿಂದ ಬೆಲ್ಲದ ಸೇರಿದಂತೆ ಇತರ ಕರ್ನಾಟಕದ ನಾಯಕರನ್ನು ಟ್ಯಾಗ್ ಮಾಡಿದ್ದಾರೆ.
ನಿಮ್ಮ ಈ ಪದ ಬಳಕೆಯು ನಿಮ್ಮ ಐಟಿ ಸೆಲ್ ಎಷ್ಟು ಅಶಕ್ತತೆಯಿಂದ ಕೂಡಿದೆ ಎನ್ನುವುದನ್ನು ಪ್ರತಿಫಲಿಸುತ್ತಿದೆ. ನಮ್ಮ ಶಾಸನಬದ್ಧ ಆಯ್ಕೆಯನ್ನು ರಾಜವಂಶಸ್ತರು ಎಂದು ಟೀಕಿಸುವ ನೀವು, ನಿಮ್ಮ ವಂಶಾವಳಿ ಆಯ್ಕೆಯನ್ನು ನ್ಯಾಯಸಮ್ಮತ ಎಂದು ಹೇಗೆ ಒಪ್ಪಿಕೊಂಡಿದ್ದೀರಿ ಎಂದು ಟೀಕಿಸಿದ್ದಾರೆ.