ಪ್ರಿವಿಲೇಜ್‌ – ಸಮಾನ ಹಕ್ಕುಗಳನ್ನು ಅಸಮಾನಗೊಳಿಸುವ ಸೂತ್ರ  

Most read

ಫಮೀಲ ನನ್‌ ಪ್ರಾಣದ ಗೆಳತಿ. ಒಂದ್‌ ಸಾರಿ ಬಾರ್‌ ನಲ್ಲಿ ಕುಡೀತಾ ಕೂತಿರುವಾಗ ಹೇಳಿದ್ಲು “ನಾನು ಈ ಸಾಮಾನ್ಯ ಜನ ಬರೋ ಬಾರ್‌ ಗೆ ಸುಲಭವಾಗಿ ಬರೋಹಾಗೆ ನಿಂಗೆ ಬರಕ್ಕಾಗಲ್ಲ ಯಾಕೆ?”. ಆಗ ನಾನಿನ್ನೂ ನನ್ನದಲ್ಲದ ಜೆಂಡರ್‌ ನಲ್ಲಿ ಇನ್ನೂ ಸುಮತಿ ಆಗಿದ್ದೆ. ನಾನು ಹೇಳ್ದೆ “ನಮ್ಮಂಥ ಹೆಂಗಸರಿಗೆ ಎಲ್ಲಾ ಸ್ಪೇಸಸ್ಸೂ ಸುಲಭವಾಗಿ ಸಿಗುವುದಿಲ್ಲ”. ಫಮಿಲ ಜೋರಾಗಿ ನಕ್ಕು “ರಿಯಲಿ? ವಾಟ್‌ ಫನ್”‌ ಅಂದ್ಲು…… ನಾನು ಕಣ್‌ ಕಣ್‌ ಬಿಟ್ಟೆ….. ಅವಳು ಮುಂದುವರಿಸಿದಳು…… “ನಿಮ್‌ ಹೈ ಫೈ ಪಬ್‌ಗಳಿಗೆ ಇಲ್ಲಿರೋ ಜನ ಬರಕ್ಕಾಗುತ್ತಾ. ಅಲ್ಲಿ ನೋಡು, ಆ ಮುದಿ ಹೆಂಗ್ಸು ಇಲ್ಲಿಗೆ ಪ್ರತೀ ದಿನ ಬರ್ತಾಳೆ. ೯೦ ಹೊಡ್ಕೊಂಡು, ಅಲ್ಲಿ ಅಕ್ಕ ಪಕ್ಕದವರ ಜೊತೆ ಮಾತಾಡ್ಕೊಂಡು ಕುಡಿದು ಹೋಗ್ತಾಳೆ. ಅಲ್ಲಿ  ಗಂಡಸರೇ ಇರ್ತಾರೆ.  ಅವಳ ಕೆಲಸ ಏನೆಂದು ಗೊತ್ತಿಲ್ಲ. ಅಂಥ ಹೆಂಗಸರು ಇಲ್ಲಿ ಬರ್ತಾರೆ ಅಂದ್ರೆ ನಿಂಗೆ ಯಾಕೆ ಬರಕ್ಕೆ ಆಗಲ್ಲ?. ಒಂದ್‌ ಯೋಚ್ನೆ ಮಾಡು, ಈ ಹೆಂಗಸರು, ಹೆಂಗಸರು ಅಲ್ವ? ಯಾಕೆ ಯಾವಾಗ್ಲು ನಿಮ್ಮಂಥ ಹೆಂಗಸರು ಅಂತ ಹೇಳ್ತಿಯಾ?” ನಾನು ಏನ್‌ ಹೇಳ್ಬೇಕು ಅಂತ ಗೊತ್ತಾಗದೆ …..ಒಂದು ಸಿಪ್‌ ತೊಗೊಂಡು ಯೋಚನೆ ಮಾಡ್ದೆ, ಹೌದಲ್ವ, ನಾನು ಇಲ್ಲೂ ಹೇಗಾದ್ರು ಮಾಡಿ ಬರಬಹುದು ಮತ್ತೆ ಪಬ್‌ಗಳಿಗೂ ಹೋಗ್ಬೋದು.

ಇದು ಪರಂಪರಾನುಗತ ಅನುಕೂಲಗಳು ಅಂದ್ರೆ ಪ್ರಿವಿಲೇಜ್.‌  ಈ ಅನುಕೂಲಗಳು ಇವೆ ಅಂತ ಹೇಗೆ ಗೊತ್ತಾಗುತ್ತೆ? ನನ್ ಚಿಕ್‌ ವಯಸ್ಸಲ್ಲಿ ನಮ್‌ ಮನೇಲಿ ಒಂದ್‌ ವರ್ಷದಲ್ಲಿ 6 ತಿಥಿ ಮಾಡೋವ್ರು. ಯಾರ್ಯಾರಿಗೆ ಅಂತ ಗೊತ್ತಿಲ್ಲ. ಆದ್ರೆ ಒಂದೊಂದು ತಿಥಿ ಮಾಡುವಾಗ್ಲೂ ಮನೆ ತುಂಬಾ ಜನ ಪುತುಪುತುಪುತು ಅಂತ. ಕೆಟ್ಟದಾಗಿ ತೆಲುಗು ಮಾತಾಡ್ಕೊಂಡು “ಏಮೇ ವಸ್ತ್ವೇ ಮೇ, ಏಮ್‌ ಊರಗಾಯ್ಲು ಚೇಶಿನ್ನಾರೇ” ಅಂದ್ಕೊಂಡು. ಅಮ್ಮ ಮಾತ್ರ ಬೆಳಿಗ್ಗೆಯಿಂದ ಬರಿ ಹೊಟ್ಟೆಲಿ, ಯಾವ ಹೆಲ್ಪ್‌ ಇಲ್ದೆ, ಅಷ್ಟೂ ಜನಕ್ಕೆ ಅಷ್ಟೆಲ್ಲಾ ಅಡುಗೆ ಮಾಡಿ ಹಾಕ್ತಿದ್ಲು. ಆವತ್ತು ನಮ್‌ ಮನೆಗೆ ಕೆಲಸಕ್ಕೆ ಬರುವ ಹುಡುಗಿ ಮಾತ್ರ ಒಳಗೆ ಬಂದ್ರೂ ಅಡುಗೆ ಮನೆಗೆ ಹೋಗ್ಬಾರ್ದು, ಅವಳು ಪಾತ್ರೆ ತೊಳೆದ ಮೇಲೆ ಅದಕ್ಕೆ ಅಮ್ಮ ಮತ್ತು ಮಿಕ್ಕ ಸಂಬಂಧಿಕರು ನೀರು ಚುಮುಕಿಸಿ ಒಳಗೆ ತೆಗೊಳ್ತಿದ್ರು. ಅದು ಯಾಕೆ ಅಂತ ಕೇಳಿದ್ದಕ್ಕೆ ಅವ್ಳು ಕೆಲಸದವಳು ಶುದ್ಧ ಅಲ್ಲ ಅಂದ್ರು. ಅವತ್ತು ನಂಗೆ ಫರ್ಸ್ಟ್‌ ಅರ್ಥಾಗಿದ್ದು ಮನುಷ್ಯರಲ್ಲಿ ಶುದ್ಧ ಅಶುದ್ಧ ಅಂತ ನಮ್ಮನೇಲಿ ಮಾತ್ರ ಮಾಡ್ತಾರೆ ಅನ್ನೋದು. ನಂಗೆ ಆ ಹುಡ್ಗಿ ತುಂಬಾ ಒಳ್ಳೆ ಫ್ರೆಂಡ್.‌ ಹೀಗೆ ಮಾಡಿದ್ದಕ್ಕೆ ನಂಗೆ ತುಂಬಾ ಕೋಪಬಂದು ಕಂಕು ಹತ್ರ ಕೇಳ್ದೆ ಯಾಕೆ ಅವಳನ್ನು ನಮ್ಮನೇಲಿ ಅಶುದ್ಧ ಅಂತಾರೆ? ಅದು ತಪ್ಪಲ್ವ?. ಕಂಕು ಹೇಳ್ತು ನಮ್ಮನೇಲಿ ಮಾತ್ರ ಅಲ್ಲ, ನಂ ದೇಶದಲ್ಲಿ ಇರೋ ರೋಗ ಅದು ಅಂತ. ಆ ಟೈಮಿಗೆ ಕಾಸ್ಟ್‌ ಸಿಸ್ಟಂ ಬಗ್ಗೆ ಸ್ಕೂಲ್‌ನಲ್ಲೂ ಹೇಳಿದ್ರು. ಅಲ್ಲದೇ ಸ್ಕೂಲ್‌ನಲ್ಲಿ ನಂ ಪ್ರಿನ್ಸಿಪಾಲ್‌ ಒಂದು ದಿವ್ಸ ನನ್ನ ಕರೆದು ʼಕೃಷ್ಣ ಕಾಂಟೆಸ್ಟ್‌ ಅಂತ ಇದೆ ಅದಕ್ಕೆ ಹೋಗು. ನೀನು ಬ್ರಾಮಿನ್‌, ಕೃಷ್ಣನ ಬಗ್ಗೆ ಚೆನ್ನಾಗಿ ಗೊತ್ತಿರುತ್ತೆʼ ಅಂದ್ರು. ನಂಗೆ ಫುಲ್‌ ಕನ್‌ಫ್ಯೂಷನ್‌. ಬ್ರಾಮಿನ್‌ ಆದ್ರೆ ಕೃಷ್ಣನ ಬಗ್ಗೆ ಹೆಂಗೆ ಫುಲ್‌ ಗೊತ್ತಿರುತ್ತೆ?. ಆಗ್ಲೂ ಸೂಪರ್‌ ಆಗಿ ಆ ಟೆಸ್ಟ್‌ನಲ್ಲಿ ಫೇಲಾದೆ. ನಾನು ಇಂಥ ಜಾತಿ ಅಂತ ೮ನೇ ವಯಸ್ಸಿನಲ್ಲಿ ತಿಳಿಯೋದು ನನಗಿದ್ದ ಪರಂಪರಾಗತ ಅನುಕೂಲ. ಹಂಗಂತ ನನಗೆ ಜಾತೀಯತೆ ಇಲ್ಲ ಅಂತ ಅಲ್ಲ. ಅದು ಇದ್ದೇ ಇರುತ್ತೆ. ನಮ್‌ ಪ್ರಜ್ಞೆಯಲ್ಲಿ ಅದನ್ನ ಸೇರಿಸಿ ಬಿಡುತ್ತಾರೆ ಕುಟುಂಬದವರು. ಅದನ್ನು ಇಂಚು ಇಂಚಾಗಿ ಮೈಯಿಂದ ಕಿತ್ತಾಕ್ಬೇಕು. ನಾನು ಪ್ರಜ್ಞಾಪೂರ್ವಕವಾಗಿ ಇಲ್ಲ ಹೀಗೆ ಮಾಡ್ಬಾರ್ದು, ಹೀಗೆ ನಡ್ಕೊಬಾರ್ದು ಅಂತ ಜಾಗ್ರತೆಯಾಗಿದ್ದೇನೆ. ಅದರಲ್ಲಂತೂ ಸುನಿಲ ನಂಗೆ ಹೆಜ್ಜೆ ಹೆಜ್ಜೆಗೂ ರಿಮೈಂಡ್‌ ಮಾಡ್ತಾನೆ.

ಈ ಪ್ರಿವಿಲೇಜ್‌ ಇಲ್ಲದೇ ಇರೋದು ಶೋಷಿತ ಜಾತಿಯವರಿಗೆ ಚಿಕ್ಕ ವಯಸ್ಸಿನಲ್ಲೇ ತಿಳಿದುಬಿಡುತ್ತೆ. ಹಾಗೇ ಇಂಗ್ಲೀಷ್‌ ಸುಲಭವಾಗಿ ಮಾತಾಡಲು ಬೇಕಾಗಿರುವ ಶಿಕ್ಷಣ ಎಲ್ಲರಿಗೂ ಸುಲಭವಾಗಿ ಸಿಗಲ್ಲ. ಅದು ಎಲ್ಲಾ ತುಳಿತಕ್ಕೊಳಗಾದ ಸಮುದಾಯಗಳಲ್ಲಿ ಸತ್ಯ. ತಮ್ಮ ಪ್ರಿವಿಲೇಜ್‌ ತಿಳಿದುಕೊಂಡು, ಅದರ ಪ್ರಜ್ಞೆ ಇಟ್ಟುಕೊಂಡು ನಾವು ಎಷ್ಟು ಮಾತಾಡಬಹುದು, ಭಾಗವಹಿಸಬಹುದು, ತೀರ್ಮಾನಗಳನ್ನು ತೆಗೆದುಕೊಳ್ಳುವುದರಲ್ಲಿ ಪಾಲು ಎಷ್ಟಿರಬೇಕು  ಇಂಥೆಲ್ಲ ಅರಿವು ಅವರಿಗೆ ಬಹಳ ಮುಖ್ಯ.

ರೋಹಿತ್‌ ವೇಮುಲ ತೀರ್ಕೊಂಡ ದಿವಸ ಪ್ರತಿಭಟನೆಗೆ ಹೋಗಿದ್ದಾಗ ನೋಡಿ ತುಂಬಾ ಬೇಜಾರಾಯಿತು. ಪ್ರಗತಿಪರ ಜನ ಸಮೂಹಗಳಲ್ಲಿಯೂ ಈ ಅರಿವು ಇಲ್ಲ. ಅಲ್ಲದೇ ನಾವು ಅಲ್ಲಿ ಹೋಗಿದ್ದೂ ನಮ್ಮ ಕೋಪ ವ್ಯಕ್ತಪಡಿಸಲು. ಅಲ್ಲಿ ನೋಡಿದರೆ ಒಬ್ರಾದ್ಮೇಲೆ ಒಬ್ರು ಶೋಷಣೆ ಮಾಡುವ ಜಾತಿ ಗಂಡಸರು ಮಾತಾಡಿ ಮಾತಾಡಿ….. ಅಬ್ಬ…. ಆದ್ರೆ ನಮಗೆ ಆವತ್ತು ಬೇಕಿದ್ದು ಗಂಟಲು ಹರಿಯುವಂತೆ ಜಾತಿ ವ್ಯವಸ್ಥೆಯ ವಿರುದ್ಧ ಕೂಗಿ ಕೂಗಿ ರೋಷ ತೋರಿಸ ಬೇಕು ಅಂತ. ಒಂದ್‌ ಪ್ರತಿಭಟನೆಯಲ್ಲಿ ಯಾರು ಮಾತಾಡ್ತಾರೆ, ಎಷ್ಟು ಹೊತ್ತು ಮಾತಾಡ್ತಾರೆ ಅನ್ನುವುದರ ಪ್ರಜ್ಞೆ ಇರಬೇಕು. ಆ ಇಡೀ ಪ್ರತಿಭಟನೆಯಲ್ಲಿ ತುಂಬಾ ಹೃದಯಕ್ಕೆ ನಾಟುವ ಹಾಗೆ ಮಾತಾಡಿದ್ದು ನಂ ಕೆ ರಾಮಯ್ಯ ಸರ್.‌ ಅದು ನಂಗೆ ಇಂದಿಗೂ ನೆನಪಿದೆ.

ಇನ್ನೊಂದ್‌ ಸರ್ತಿ ಒಬ್ಬ ದಲಿತ ಮಹಿಳೆಯ ಬಲಾತ್ಕಾರವಾದಾಗ ಒಂದು ಪ್ರತಿಭಟನೆ ನಡೆಯಿತು. ಆಗ ಅದರ ವಿರುದ್ಧ ಒಬ್ಬರು ದಲಿತ ಮಹಿಳಾ ಕಾರ್ಯಕರ್ತರು ಮಾತನಾಡುತ್ತಿದ್ದರು ಮತ್ತು ನಡುನಡುವೆ ಅವರು ಸ್ಲೋಗನ್ಸ್‌ ಕೂಗಿಸುತ್ತಿದ್ದರು. ಅವರ ನಂತರ ಗಂಡಸರು ಒಬ್ಬರು ಮಾತನಾಡಲು ನಿಂತರು. ಅವರು ಶುರುಮಾಡಿದರು “ಹೆಣ್ಣು ಮಕ್ಕಳು ರಾತ್ರಿ ಹೊತ್ತು ಓಡಾಡುವ ರಿಸ್ಕ್‌ ತಗೋಬಾರ್ದು, ಅವರು ಸುರಕ್ಷಿತವಾಗಿ ಮನೇಲಿ ಇರ್ಬೇಕು.” ಅಂದಿದ್ದೇ ತಡ, ನಮ್‌ ಸುನಿಲ ಮತ್ತು ಜೀ ಇಬ್ರು ಅವರ ಮೈಕ್‌ ಕಿತ್ಕೊಂಡು “ಕನಿಷ್ಟ ಪ್ರಜ್ಞೆ ಬೇಡ್ವಾ ನಿಮಗೆ?, ಸರಿ, ಇನ್ಮೇಲೆ ನೀವು ಗಂಡಸರು ೬ ಗಂಟೆ ಮೇಲೆ ಆಚೆ ಬರ್ಬೇಡಿ. ಯಾಕಂದ್ರೆ ನಿಮ್ಗೆ ನಿಮ್‌ ಲೈಂಗಿಕ ಆಸೆಯನ್ನು ಕಂಟ್ರೋಲ್‌ ಮಾಡ್ಕೊಳಕ್ಕೆ ಆಗಲ್ಲಾಂದ್ರೆ ಯಾಕೆ ರಿಸ್ಕು? ಆಚೆ ಬರೋದು ಹುಡುಕಿ ಹುಡುಕಿ ಜಾತಿ, ಧರ್ಮ, ವರ್ಗ, ಸ್ಟೇಟಸ್‌ ನೋಡಿ ರೇಪ್‌ ಮಾಡದನ್ನ ನಿಲ್ಲಿಸಬಹುದಲ್ಲ?. ಶೋಷಣೆ ಮಾಡುವ ಗಂಡಸರಿಗೆ ಎಲ್ಲಾ ಹೆಣ್ಣು ದೇಹಗಳ ಮೇಲೆ ಅಧಿಕಾರ ಇದೆ ಅನ್ನೋದು ಅವರ ಒಂದು ಅನಿಸಿಕೆ”. ಆವತ್ತು ಆ ಗಂಡಸಿನ ಮುಂದೆ ನಾವೆಲ್ಲಾ ಜೋರಾಗಿ  ಕೂಗಿದ್ವಿ “ನಿಲ್ಲಿಸಿ ನಿಲ್ಲಿಸಿ ನಿಮ್ಮ ಹೀನಾಯ ಬುದ್ಧಿ ನಿಲ್ಲಿಸಿ, ಎಲ್ಲಾ ಹೆಣ್ಣು ದೇಹಗಳು ನಿಮ್ಮ ಹಕ್ಕಲ್ಲಾ”.

ಈಗ ನಂ ಮನೇಲಿ, ನನ್ನ ಪರಿಸರದಲ್ಲಿ ನಾನು ಸುನಿಲ್‌ ಒಂದು ತೀರ್ಮಾನ ಮಾಡಿದ್ವಿ……. ನಾವು ಯಾವ ರೀತಿಯ ತಾರತಮ್ಯವನ್ನೂ ಯಾವುದೇ ರೀತಿಯಲ್ಲಿ ಮಾಡಲ್ಲ, ಅದು ಯಾರಿಗೇ ಆದ್ರೂ ಮತ್ತೆ ಯಾರು ಬೇಕಾದ್ರೂ ಮನೆಗೆ ಬರಬಹುದು, ಇರಬಹುದು, ಯಾರಿಗೆ ಏನು ಆಸೆಯಾಗುವ ಊಟ ಬೇಕೋ ನಮಗೆ ಗೊತ್ತಿದ್ದರೆ ಮಾಡಿ ಕೊಡ್ತೀವಿ.

ನಮ್ಮ ಕನಸು ಮತ್ತು ದೃಢ ನಂಬಿಕೆ ನಮ್‌ ಮನೆ ಬಾಬಾ ಸಾಹೇಬರ ಸಂವಿಧಾನದ ಥರ ಮುಕ್ತ ಮನಸ್ಸು ಹೃದಯ ಹೊಂದಿ ಉಹೆಗೂ ಮೀರಿ ಸೀಮೆಗಳನ್ನು ಒಡೆದು ಎಲ್ಲರನ್ನೂ ಅಪ್ಪುವ, ಒಪ್ಪುವ, ಗೌರವಿಸುವ ಒಂದು ತಾಣವಾಗಿರಬೇಕು. ಸ್ವಾಗತಿಸಲು ನಮ್ಮ ಜೊತೆ ಬಾಬಾ ಸಾಹೇಬರು ಇರಬೇಕು. ಜೊತೆಗೆ ನಂ ಜೊಹ್ರ, ಗಂಗೂಬಾಯಿ, ಬೇಗಂ ಅಖ್ತರ್‌, ವಾದಿರಾಜ್‌ ಮಾಮ, ಮನ್ಸೂರರು, ಭೀಮಸೇನ ಜೋಶಿ, ರಾಮರಾಯರು ಮತ್ತು ನಾವು ಕೂಡಾ.

ರೂಮಿ ಹರೀಶ್

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು  ಕಳೆದ ಸುಮಾರು 2೫ ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ  ಮತ್ತು  ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.

ಇದನ್ನೂ ಓದಿ- ಮನೋರಮಾ ಥಿಯೇಟರಿನ ಒಡಲ ಕಥೆಗಳು – ಭಾಗ 4

More articles

Latest article