ಕೈದಿಗಳಿಗೆ ಕಾನೂನು ಉಲ್ಲಂಘನೆ ಮಾಡಲು ಅವಕಾಶ ಮಾಡಿಕೊಡುವ ಹಾಗೂ ನಿಷೇಧಿತ ವಸ್ತುಗಳ ಸರಬರಾಜು ಮತ್ತು ಬಳಕೆಗೆ ಸಹಕರಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕರ್ತವ್ಯ ಲೋಪ ಹಾಗೂ ಭ್ರಷ್ಟಾಚಾರದ ಆರೋಪದಲ್ಲಿ ಬಂಧಿಸಿ, ಕಾಲಮಿತಿಯಲ್ಲಿ ತೀವ್ರ ವಿಚಾರಣೆ ನಡೆಸಿ ತಪ್ಪಿತಸ್ಥರು ಎಂದು ಸಾಬೀತಾದರೆ ಶಿಕ್ಷೆಗೆ ಒಳಪಡಿಸಬೇಕಿದೆ ಹಾಗೂ ಸರಕಾರಿ ನೌಕರಿಯಿಂದ ಶಾಶ್ವತವಾಗಿ ಬಿಡುಗಡೆ ಮಾಡಬೇಕಿದೆ. ಅಕ್ರಮವಾಗಿ ಸಂಪಾದಿಸಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಿದೆ – ಶಶಿಕಾಂತ ಯಡಹಳ್ಳಿ, ಪತ್ರಕರ್ತರು.
ನಟ ದರ್ಶನ್ ಪರಪ್ಪನ ಅಗ್ರಹಾರ ಸೇರಿದಾಗಿನಿಂದ ಈ ಸೆಂಟ್ರಲ್ ಜೈಲು ಭಾರೀ ಸುದ್ದಿಯಲ್ಲಿದೆ. ಕಾರಾಗೃಹದೊಳಗಿನ ಕರಾಳ ಲೋಕದ ಕರಾಮತ್ತುಗಳು ಬಯಲಾಗುತ್ತಿವೆ.
ಬಂಧಿಖಾನೆ ಎನ್ನುವುದು ಬಾಹ್ಯ ಪ್ರಪಂಚಕ್ಕೆ ನಿಗೂಢ ಲೋಕವಿದ್ದಂತೆ. ಜೈಲೆಂಬ ಭದ್ರ ಕೋಟೆಯ ಒಳಗೆ ಏನೇನೆಲ್ಲಾ ನಡೆಯುತ್ತವೆ ಎಂಬುದನ್ನು ಊಹಿಸಬಹುದಷ್ಟೇ. ಅಸಮಾನ ವ್ಯವಸ್ಥೆಯಲ್ಲಿ ಇರಬಹುದಾದ ಎಲ್ಲಾ ರೀತಿಯ ತಾರತಮ್ಯ ಬಂಧಿಖಾನೆಯಲ್ಲೂ ಆಚರಣೆಯಲ್ಲಿದೆ. ಹಣಬಲ, ಭುಜಬಲ, ಜನಬಲ, ನಾಮಬಲ, ಪ್ರಭಾವ ಇರುವ ಕೈದಿಗಳಿಗೆ ಕಾರಾಗೃಹದಲ್ಲಿ ದೊರೆಯುವ ಸವಲತ್ತುಗಳಲ್ಲಿ ಹಾಗೂ ಇವುಗಳೆಲ್ಲಾ ಇಲ್ಲದಿರುವ ಬಂಧಿಗಳಿಗೂ ಇರುವ ಅನನುಕೂಲಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಈ ಅಸಮಾನತೆಯನ್ನು ಜೈಲುಗಳಲ್ಲಿ ಅಜರಾಮರವನ್ನಾಗಿಸಲು ಬಂಧಿಖಾನೆಯ ಅಧಿಕಾರಿಗಳು ಸದಾ ಸಿದ್ಧರಾಗಿರುತ್ತಾರೆ, ಸಿಬ್ಬಂದಿಗಳೇ ನಿಷೇಧಿತ ವಸ್ತುಗಳನ್ನು ಹಣಕ್ಕಾಗಿ ಸರಬರಾಜು ಮಾಡುವ ಕೆಲಸವನ್ನು ಮಾಡುತ್ತಾ ಸಿಕ್ಕಷ್ಟು ದಕ್ಕಿಸಿಕೊಳ್ಳುತ್ತಾರೆ.
ಖದೀಮರಿಗೂ ಕಾವಲುಗಾರರಿಗೂ ಒಂದು ರೀತಿಯ ಅನೈತಿಕ ಹೊಂದಾಣಿಕೆ ಬಂಧಿಖಾನೆಯ ಅಘೋಷಿತ ನಿಯಮವಾಗಿದೆ. ಈ ನಾಡಿನಲ್ಲಿ ಎಲ್ಲವೂ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ. ಸರಕಾರಗಳು, ಸಚಿವರುಗಳು, ಅಧಿಕಾರಿಗಳು ಬದಲಾಗುತ್ತಲೇ ಇರುತ್ತಾರೆ. ಆದರೆ ಬಂಧಿಖಾನೆಗಳ ಒಳಗಿನ ವ್ಯವಸ್ಥೆ ಮಾತ್ರ ಬದಲಾಗುವ ಲಕ್ಷಣಗಳಿಲ್ಲ.
ನಟ ದರ್ಶನ್ ಕೇಸಲ್ಲಿ ಆದಂತೆ ಯಾವುದಾದರೂ ಜೈಲು ನಿಯಮಗಳು ಉಲ್ಲಂಘನೆ ಆದದ್ದು ಬಹಿರಂಗವಾದರೆ ರಾಜಕೀಯ ಪಕ್ಷಗಳವರ ಆರೋಪ ಪ್ರತ್ಯಾರೋಪಗಳು ಶುರುವಾಗುತ್ತವೆ. ಗೃಹ ಸಚಿವರ ತಲೆದಂಡಕ್ಕೆ ಆಗ್ರಹಿಸಲಾಗುತ್ತದೆ. ಮುಖ್ಯ ಮಂತ್ರಿಗಳ ರಾಜಿನಾಮೆ ಕೇಳಲಾಗುತ್ತದೆ. ನಾಲ್ಕಾರು ಜೈಲಿನ ಅಧಿಕಾರಿಗಳು ಇಲ್ಲವೇ ಹತ್ತಾರು ಜೈಲು ಸಿಬ್ಬಂದಿಗಳ ಅಮಾನತ್ತು ಇಲ್ಲವೇ ವರ್ಗಾವಣೆ ನಡೆಯುತ್ತದೆ. ಆದರೆ ಯಾವುದೇ ಸರಕಾರ, ಯಾವುದೇ ಗೃಹ ಸಚಿವ, ಯಾವುದೇ ಅಧಿಕಾರಿ ಬಂದರೂ, ಬದಲಾದರೂ ಕಾರಾಗೃಹದೊಳಗಿನ ವ್ಯವಸ್ಥೆ ಬದಲಾಗುವುದಿಲ್ಲ !. ಅಲ್ಲಿಯ ಅಕ್ರಮಗಳಿಗೆ ಕೊನೆಮೊದಲಿಲ್ಲ.
ಆಗಾಗ ಜೈಲಿನ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡುತ್ತಲೇ ಇರುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಅದೆಷ್ಟೇ ಪರಿಶೀಲನೆ ಮಾಡಿದರೂ ಯಾವುದೇ ನಿಷೇಧಿತ ವಸ್ತುಗಳು ಸಿಕ್ಕುವುದಿಲ್ಲ. ದಾಳಿಗೆ ಬಂದ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲವೆಂದು ತೆರಳುತ್ತಾರೆ. ಅವರು ಅತ್ತ ಹೋಗುತ್ತಿದ್ದಂತೆ ಇತ್ತ ಕೈದಿಗಳು ಎಲ್ಲೆಲ್ಲೋ ಅಡಗಿಸಿಟ್ಟಿದ್ದ ನಿಷೇಧಿತ ವಸ್ತುಗಳು ಮತ್ತೆ ಹೊರಗೆ ಬರುತ್ತವೆ. ಅರೆ ಇದೆಲ್ಲಾ ಹೇಗೆ ಸಾಧ್ಯ?
ಇಲ್ಲಿ ಎಲ್ಲವೂ ಸಾಧ್ಯ? ಯಾಕೆಂದರೆ ಜೈಲಿನ ಮೇಲೆ ರೇಡ್ ಆಗುವ ವಿಷಯ ಜೈಲಾಧಿಕಾರಿಗಳಿಗೆ ಮೊದಲೇ ಅದು ಹೇಗೋ ಗೊತ್ತಾಗಿರುತ್ತದೆ. ಅವರೇ ಖೈದಿಗಳಿಗೆ ತಿಳಿಸಿ ಎಲ್ಲವನ್ನೂ ಬಚ್ಚಿಡಲು ಎಚ್ಚರಿಸುತ್ತಾರೆ. ಸಿಸಿಬಿ ಇರಲಿ ಇಲ್ಲವೇ ಯಾವುದೆ ತನಿಖಾ ಸಂಸ್ಥೆಗಳಿರಲಿ ಜೈಲಿನ ಮೇಲೆ ದಿಢೀರ್ ದಾಳಿ ಮಾಡಲು ಬಂದರೆ ಜೈಲೊಳಗೆ ಹೋಗಲು ಕೆಲವು ನಿಯಮಾವಳಿಗಳನ್ನು ಪಾಲಿಸಬೇಕಾಗುತ್ತದೆ ಹಾಗೂ ಅದಕ್ಕೆ ಅರ್ಧ ಗಂಟೆ ಸಮಯ ಬೇಕಾಗುತ್ತದೆ. ನಿಷೇಧಿತ ವಸ್ತುಗಳನ್ನು ಮಾಯಮಾಡಲು ಖೈದಿಗಳಿಗೆ ಹಾಗೂ ಜೈಲು ಸಿಬ್ಬಂದಿಗಳಿಗೆ ಇಷ್ಟು ಸಮಯ ಸಾಕು. ಆಗ ಅಲ್ಲಿ ಎಲ್ಲವೂ ಕ್ಲೀನ್ ಮತ್ತು ನಾರ್ಮಲ್. ಇದಕ್ಕೆ ಲೇಟೆಸ್ಟ್ ಉದಾಹರಣೆ ಆಗಸ್ಟ್ 24 ರಂದು ಸಿಸಿಬಿ ಪೊಲೀಸರು ಕೈದಿಗಳ ಎಲ್ಲಾ ಬ್ಯಾರಕ್ ಗಳನ್ನು ಶೋಧಿಸಿದರೂ ಯಾವೊಂದು ನಿಯಮಬಾಹಿರ ವಸ್ತುಗಳು ದೊರೆಯಲೇ ಇಲ್ಲ. ಅದೇ ದಿನ ಜೈಲುವಾಸಿ ದರ್ಶನ್ ಸಿಗರೇಟು ಸೇದುತ್ತಾ ನಟೋರಿಯಸ್ ಕ್ರಿಮಿನಲ್ ಗಳ ಜೊತೆ ಕೂತು ಕಾಫಿ ಕುಡಿಯುತ್ತಿದ್ದ ಫೋಟೋ ಹಾಗೂ ವಿಡಿಯೋ ಕಾಲ್ ಮಾಡಿದ ಸಂಗತಿ ಬಹಿರಂಗವಾಗಿತ್ತು. ಆ ಕೂಡಲೇ ಸಕ್ರಿಯರಾದ ಸಿಸಿಬಿ ಪೊಲೀಸ್ ಅಧಿಕಾರಿಗಳು ಜೈಲ್ ಮೇಲೆ ದಾಳಿ ಮಾಡಿದರಾದರೂ ಕೈದಿಗಳು ಹಾಗೂ ಸಿಬ್ಬಂದಿಗಳಿಗೆ ಮೊದಲೇ ಮಾಹಿತಿ ಸಿಕ್ಕಿದ್ದರಿಂದಾಗಿ ಯಾವುದೇ ನಿಷೇಧಿತ ವಸ್ತುಗಳು ಸಿಕ್ಕಿರಲಿಲ್ಲ. ರೇಡ್ ಗೆ ಬಂದ ಸಿಸಿಬಿ ಅಧಿಕಾರಿಗಳನ್ನು ಗಂಟೆಗಳ ಕಾಲ ಜೈಲೊಳಗೆ ಜೈಲಧಿಕಾರಿಗಳು ಬಿಟ್ಟಿರಲಿಲ್ಲ. ಬಚ್ಚಿಡುವ ಕಾರ್ಯ ಸಂಪನ್ನವಾದ ನಂತರ, ಸಿಬ್ಬಂದಿಗಳೇ ನಿಷೇಧಿತ ವಸ್ತುಗಳನ್ನು ಜೈಲಿನಿಂದ ಹೊರಗೆ ಸಾಗಿಸಿದ ಮೇಲೆ ಪೊಲೀಸರು ಶೋಧಕಾರ್ಯ ಮಾಡಿದರೂ ಪ್ರಯೋಜನವಾಗಲಿಲ್ಲ.
ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ದರ್ಶನ್ ಮತ್ತು ಇತರರನ್ನು ಬೇರೆ ಬೇರೆ ಜೈಲುಗಳಿಗೆ ವರ್ಗಾಯಿಸಿ ಸರಕಾರ ನಿಟ್ಟುಸಿರು ಬಿಟ್ಟಿತ್ತು. ದರ್ಶನ್ ಗೆ ಸಂಕಷ್ಟ ಹೆಚ್ಚಿಸಿದ ವಿಲ್ಸನ್ ಗಾರ್ಡನ್ ನಾಗನನ್ನು ಮಾತ್ರ ಪರಪ್ಪನ ಅಗ್ರಹಾರ ಜೈಲಲ್ಲೇ ಇಟ್ಟುಕೊಳ್ಳಲಾಗಿತ್ತು. ಅದ್ಯಾವ ರಾಜಕೀಯ ಪ್ರಭಾವ ಈ ನಟೋರಿಯಸ್ ರೌಡಿಯನ್ನು ಬೇರೆ ಜೈಲಿಗೆ ಶಿಫ್ಟ್ ಆಗದಂತೆ ತಡೆದಿತ್ತೋ ಗೊತ್ತಿಲ್ಲ. ಆದರೆ..
ಜೈಲಿನೊಳಗಿನ ಖೈದಿಗಳು ಹಾಗೂ ಸಿಬ್ಬಂದಿಗಳ ಕಳ್ಳಾಟವನ್ನು ಗ್ರಹಿಸಿದ್ದ ಸಿಸಿಬಿ ತನಿಖಾ ತಂಡದ ಡಿಸಿಪಿ ಸಾರಾ ಫಾತಿಮಾ ನೇತೃತ್ವದ 30 ಜನರ ಪೊಲೀಸ್ ತಂಡ ಯಾವುದೇ ಮಾಹಿತಿ ಕೊಡದೇ ಸೆಂಟ್ರಲ್ ಜೈಲ್ ಮೇಲೆ ಸೆಪ್ಟಂಬರ್ 15 ರಂದು ರಹಸ್ಯ ದಾಳಿ ಮಾಡಿ ಶೋಧಕಾರ್ಯ ಮಾಡಿತು. ಅಚ್ಚರಿ ಎಂಬಂತೆ ರೌಡಿ ಎಲೆಮೆಂಟ್ ನಾಗನ ಬ್ಯಾರಕ್ ಸೇರಿದಂತೆ ಇತರ ಬ್ಯಾರಕ್ ಗಳಲ್ಲಿ ಸ್ಮಾರ್ಟ್ ಫೋನ್‌ಗಳು, ಚಾರ್ಜರ್ ಗಳು, ಈಯರ್ ಫೋನ್‌ಗಳು, ಪೆನ್ ಡ್ರೈವ್ ಗಳು, ಬೀಡಿ ಸಿಗರೇಟ್, ಚಾಕುಗಳು ಅಷ್ಟೇ ಅಲ್ಲ ಆರೇಳು ಎಲೆಕ್ಟ್ರಿಕ್ ಸ್ಟೋವ್ ಗಳು ಮತ್ತು ನಗದು ಹಣ ಸಹ ಪತ್ತೆಯಾದವು.
ದರ್ಶನ್ ಜೈಲು ವಿಶೇಷಾತಿಥ್ಯದ ಫೋಟೋ ಬಹಿರಂಗವಾದ ನಂತರ ಸರಕಾರ 9 ಜನ ಜೈಲಿನ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದೆ. 40 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿದೆ. ಆದರೆ ಪರಿಣಾಮ ಮಾತ್ರ ಶೂನ್ಯ. ಜೈಲೊಳಗೆ ನಿಷೇಧಿತ ವಸ್ತುಗಳ ಬಳಕೆ ಅವ್ಯಾಹತವಾಗಿ ಬಳಕೆಯಾಗುತ್ತಲೇ ಇದೆ. ಅಷ್ಟೊಂದು ಅಧಿಕಾರಿ ಸಿಬ್ಬಂದಿಗಳನ್ನು ಜೈಲಿನಿಂದ ಹೊರಹಾಕಿದ ನಂತರವೂ ಸಿಕ್ಕ ಅಕ್ರಮ ವಸ್ತುಗಳೇ ಅದಕ್ಕೆ ಪುರಾವೆಯಾಗಿವೆ. ಅದಕ್ಕೆ ಹೇಳಿದ್ದು ಯಾರು ಬದಲಾದರೂ ಜೈಲೊಳಗಿನ ಅವ್ಯವಸ್ಥೆ ಬದಲಾಗದು ಎಂದು.
ಜುಲೈ 8 ರಂದು ಗೃಹ ಸಚಿವರಾದ ಮಾನ್ಯ ಪರಮೇಶ್ವರರು ಮಾಧ್ಯಮಗಳ ಮುಂದೆ “ಸೆಂಟ್ರಲ್ ಜೈಲಲ್ಲಿ 800 ಮೀಟರ್ ವರೆಗೆ ಮೊಬೈಲ್ ಸಿಗ್ನಲ್ ನಿರ್ಬಂಧಿಸುವ ಆಧುನಿಕ ತಂತ್ರಜ್ಞಾನದ ಹೈ-ರೆಸೊಲ್ಯೂಶನ್ ಜಾಮರ್ ಹಾಕಿಸಲಾಗಿದೆ” ಎಂದು ಹೇಳಿದ್ದರು. ಅಂತಹ ಜಾಮರ್ ಹಾಕಿಸಿದ ನಂತರವೇ ಆಗ ದರ್ಶನ್ ವೀಡಿಯೋ ಕಾಲ್ ಮಾಡಿ ಸಿಕ್ಕಾಕಿಕೊಂಡಿದ್ದು. ಈಗ ಸಿಸಿಬಿ ದಾಳಿಯಲ್ಲಿ 15 ಕ್ಕೂ ಹೆಚ್ಚು ಮೊಬೈಲ್ ಗಳು ಪತ್ತೆಯಾಗಿದ್ದು, ಯಾಕೆ ಅತ್ಯಾಧುನಿಕ ಜಾಮರ್ ಕೆಲಸ ಮಾಡ್ತಾ ಇಲ್ವಾ? ಗೃಹ ಸಚಿವರು ಹೇಳಿದ್ದೇ ಸುಳ್ಳಾ? ಜಾಮರ್ ಬೇಧಿಸುವ ಟೆಕ್ನಾಲಜಿ ಕೈದಿಗಳು ಕಂಡುಕೊಂಡಿದ್ದಾರಾ?
ಜೈಲಲ್ಲಿ ಜಾಮರ್ ಇದೆ. ಬೇಕಾದಾಗ ಜಾಮರ್ ಪವರ್ ಹಾಗೂ ವ್ಯಾಪ್ತಿಯನ್ನು ಹೆಚ್ಚು ಕಡಿಮೆ ಮಾಡುವ ಕೌಶಲವನ್ನು ಜೈಲಿನ ಅಧಿಕಾರಿಗಳು ರೂಢಿಸಿ ಕೊಂಡಿದ್ದಾರೆ. ಸರಕಾರ ಚಾಪೆ ಕೆಳಗೆ ತೂರಿದರೆ ಜೈಲಧಿಕಾರಿಗಳು ರಂಗೋಲಿ ಕೆಳಗೆ ನುಸುಳುತ್ತಾರೆ ಹಾಗೂ ಕೈದಿಗಳು ನೆಲದಡಿಯೇ ಅಕ್ರಮಗಳಿಗೆ ದಾರಿ ಮಾಡಿಕೊಳ್ಳುತ್ತಾರೆ. ಅಧಿಕಾರಿಗಳು ಹಾಗೂ ನೌಕರರು ಖೈದಿಗಳ ಅಕ್ರಮ ಚಟುವಟಿಕೆಗಳಿಗೆ ಸಹಕರಿಸುತ್ತಾರೆ ಹಾಗೂ ಅದಕ್ಕೆ ತಕ್ಕ ಪ್ರತಿಫಲವನ್ನೂ ಪಡೆದು ಕೊಳ್ಳುತ್ತಿದ್ದಾರೆ. ಜೈಲಾಡಳಿತದ ಭ್ರಷ್ಟ ವ್ಯವಸ್ಥೆಯೇ ಹೀಗೆ ಹದಗೆಟ್ಟಿರುವಾಗ ಜೈಲಿನ ಸುಧಾರಣೆ ಹೇಗೆ ಸಾಧ್ಯ?
ಬಂಧಿಖಾನೆಯಲ್ಲಿ ಇಷ್ಟೆಲ್ಲಾ ಅಕ್ರಮ ಕೃತ್ಯಗಳಿಗೆ ಪ್ರೋತ್ಸಾಹ ಕೊಡುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕಾನೂನಿನ ಭಯ ಇಲ್ವಾ? ಅದು ಇದ್ದಿದ್ದರೆ ಇಷ್ಟೊಂದು ಕಾನೂನು ಉಲ್ಲಂಘನೆ ಜೈಲಲ್ಲಿ ಸಾಧ್ಯವಿರಲಿಲ್ಲ. ಹೆಚ್ಚೆಂದರೆ ಜೈಲಿನ ಅಧಿಕಾರಿಗಳನ್ನು ಸರಕಾರ ಅಮಾನತ್ತು ಮಾಡುತ್ತದೆ ಹಾಗೂ ಕೆಲವೇ ತಿಂಗಳಲ್ಲಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಸಿಬ್ಬಂದಿಗಳನ್ನು ಬೇರೆ ಜೈಲುಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಅವರು ಅಲ್ಲಿಯೂ ಹೋಗಿ ಅದೇ ಭ್ರಷ್ಟತೆಯನ್ನು ಮುಂದುವರೆಸುತ್ತಾರೆ. ಹೀಗಾಗಿ ಯಾವುದೇ ಜೈಲಧಿಕಾರಿ ಹಾಗೂ ಸಿಬ್ಬಂದಿಗೆ ಕಾನೂನು ಕ್ರಮದ ಭಯವೇ ಇಲ್ಲವಾಗಿದೆ. ಕೈದಿಗಳಿಗೆ ಕಾನೂನು ಉಲ್ಲಂಘನೆ ಮಾಡಲು ಅವಕಾಶ ಮಾಡಿಕೊಡುವ ಹಾಗೂ ನಿಷೇಧಿತ ವಸ್ತುಗಳ ಸರಬರಾಜು ಮತ್ತು ಬಳಕೆಗೆ ಸಹಕರಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕರ್ತವ್ಯ ಲೋಪ ಹಾಗೂ ಭ್ರಷ್ಟಾಚಾರದ ಆರೋಪದಲ್ಲಿ ಬಂಧಿಸಿ, ಕಾಲಮಿತಿಯಲ್ಲಿ ತೀವ್ರ ವಿಚಾರಣೆ ನಡೆಸಿ ತಪ್ಪಿತಸ್ಥರು ಎಂದು ಸಾಬೀತಾದರೆ ಶಿಕ್ಷೆಗೆ ಒಳಪಡಿಸಬೇಕಿದೆ ಹಾಗೂ ಸರಕಾರಿ ನೌಕರಿಯಿಂದ ಶಾಶ್ವತವಾಗಿ ಬಿಡುಗಡೆ ಮಾಡಬೇಕಿದೆ. ಅಕ್ರಮವಾಗಿ ಸಂಪಾದಿಸಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಿದೆ.
ಹೀಗೆ, ಶಿಕ್ಷೆಯ ಭಯ ಇದ್ದಲ್ಲಿ ಮಾತ್ರ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾನೂನಿಗೆ ಹೆದರಿಕೊಂಡಾದರೂ ಭ್ರಷ್ಟಾಚಾರದಿಂದ ಆದಷ್ಟು ದೂರವಾಗಿರಲು ಸಾಧ್ಯವಿದೆ. ಕೇವಲ ತಾತ್ಕಾಲಿಕ ಅಮಾನತ್ತು ಹಾಗೂ ವರ್ಗಾವಣೆಗಳಿಂದ ಈ ಅಧಿಕಾರಶಾಹಿಗಳನ್ನು ಪ್ರಾಮಾಣಿಕರನ್ನಾಗಿ ಮಾಡಲು ಸಾಧ್ಯವೇ ಇಲ್ಲ. ಮೊದಲು ಬೇಲಿಯನ್ನು ಭದ್ರಗೊಳಿಸಿದ ನಂತರವೇ ಹೊಲದೊಳಗಿನ ಬೆಳೆ ರಕ್ಷಿಸಿ ಕಳೆ ನಿಯಂತ್ರಿಸಲು ಸಾಧ್ಯ. ಬಂಧಿಖಾನೆಗಳನ್ನು ಮನಪರಿವರ್ತನಾ ಕೇಂದ್ರಗಳನ್ನಾಗಿ ಮಾಡಲು ಸಾಧ್ಯ. ಬೇಲಿಯೇ ಎದ್ದು ಕಳೆ ಕಸಗಳಿಗೆ ನೀರೆರೆದು ಪೋಷಿಸಿದರೆ ಅಂತಹ ತೋಟವನ್ನು ಯಾವ ಸರಕಾರ ಬಂದರೂ ನಿಯಂತ್ರಿಸುವುದು ಅಸಾಧ್ಯ.
ಶಶಿಕಾಂತ ಯಡಹಳ್ಳಿ
ಪತ್ರಕರ್ತರು, ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ವಿನಾಶದತ್ತ ಭಜರಂಗದಳ : ಈದ್ ಮಿಲಾದ್ ಊರುಗೋಲು !