ಹೀಗೆ ಸುಮ್ಮನೆ… ಕೊನೆಗೂ ನಾನು ಕುಂಭ ಮೇಳಕ್ಕೆ ಹೋಗಿಲ್ಲ.. ಹಲವು ಬಾರಿ ಹೋಗೋಣ ಅನ್ನೋ ಯೋಚನೆ ಬಂದಿತ್ತು. ಪ್ರತಿ ದಿನ ಯಾರು ಸ್ನೇಹಿತರು, ನೆಂಟರೂ ಸಿಕ್ಕಿದ್ರೂ .. ನೀನು ಈಗಾಗಲೇ ಹೋಗಿ ಆಗಿರಬಹುದಲ್ವಾ..? ಅಂತಾ ಕೇಳ್ತಾ ಇರೋ ಕಾರಣಕ್ಕಾದರೂ ಹೋಗೋಣ ಅಂತಾ ಮನಸ್ಸಿಗೆ ಬರ್ತಿತ್ತು. ಅಲ್ಲದೇ ಕಾರಲ್ಲಿ ಈ ಕಡೆಯಿಂದ ಹೋದ ಬಹಳ ಜನ ಸ್ನೇಹಿತರು, ದಾರಿ, ಹೋಟೇಲು ವಗೈರೆ ನನ್ನತ್ರವೇ ಕೇಳ್ತಾ ಇದ್ದ ಕಾರಣವೂ ಉತ್ಸಾಹ ಬಂದಿತ್ತು. ಆದರೆ ಒಂದೇ ಜಾಗ ನೋಡಲು ಅಷ್ಟು ದೂರ ಹೋಗಬೇಕೇ ಅನ್ನೋ ಪ್ರಶ್ನೆ.
ಇದಕ್ಕಿಂತ ಪ್ರಮುಖ ಕಾರಣವೂ ಇದೆ. ನಾನು ಬಹಳ ಬಾರಿ ಪ್ರಯಾಗ್ ರಾಜ್ ಗೆ ಹೋಗಿದ್ದೇನೆ. ಆದರೆ ಸಾಮಾನ್ಯವಾಗಿ ಅಲ್ಲಿ ಹಾಗೂ ಕಾಶಿಯಲ್ಲಿ ನೀರಲ್ಲಿ ಸ್ನಾನ ಮಾಡಲ್ಲ. ಕಾರಣ ಆ ನೀರು ಸ್ನಾನಕ್ಕೆ ಯೋಗ್ಯ ಅಲ್ಲ ಅಂತಾ ಮಾಮೂಲು ದಿನಗಳಲ್ಲೇ ಪ್ರಚಲಿತ ಇದೆ. ಹತ್ತು ವರ್ಷದ ಮೊದಲು ನನ್ನ ತಂದೆಯವರು ಅವರ ತಂದೆಯ ಶ್ರಾದ್ಧ ಮಾಡಬೇಕು ಅಂದಿದ್ದಕ್ಕೆ ಕಾಶಿಗೆ ಕರಕೊಂಡು ಹೋಗಿದ್ದೆ. ಅಲ್ಲಿನ ಪುರೋಹಿತರು ನಿಮಗೆ ಬೇಕಿದ್ರೆ ಮಣಿಕರ್ಣಿಕಾದಲ್ಲಿ ಗಂಗೆಯಲ್ಲಿ ಮುಳುಗಿ ತಂಬಿಗೆ ನೀರು ತರಬಹುದು. ನಾವೆಲ್ಲ ಅದನ್ನು ತರಲ್ಲ. ನಾವೂ ಏನಿದ್ರೂ ನಳ್ಳಿ ನೀರಲ್ಲಿ ಶ್ರಾದ್ಧ ಮಾಡೋದು ಅಂದಿದ್ರು. ಘಾಟ್ ನ ಮೆಟ್ಟಿಲಿನ ಬಲ ಬಾಗದಲ್ಲೇ ಪೇಟೆಯ ಸೀವೇಜ್ ಪೈಪಿಂದ ನೀರು ನದಿ ಸೇರೋದನ್ನ ನೀವೂ ನೋಡಿರಬಹುದು.
ಅಲ್ಲದೇ ನಾನು ಕಟ್ಟರ್ ಭಾಜಪಾ ಆದ್ರೂ ನಾನು ಬಹಳ ಧಾರ್ಮಿಕ ವ್ಯಕ್ತಿ ಅಲ್ಲ. ಆದರೆ ನಾನು ತಿಳಿದಂತೆ ಸ್ವಲ್ಪ ಪ್ರಬುದ್ಧರು ಅನಿಸಿದ ನಾಯಕರುಗಳೇ ಪ್ರಯಾಗದಲ್ಲಿ ಮುಳುಕು ಹಾಕಿ, ಸೂರ್ಯನಿಗೆ ಅರ್ಗ್ಯ ಬಿಡುವ ಪೋಸ್ ಕೊಟ್ಟು ಆ ಮೇಲೆ ಅಲ್ಲೇ ಆಚಮನ ಮಾಡೋದನ್ನು ನೋಡಿದಾಗ ಬಹಳಾಶ್ಚರ್ಯ ಆಗಿದೆ.
ಹಾಗಂತ ಯಾರಾದರೂ ಅದು ನಂಬಿಕೆಯ ವಿಶ್ಯ ಅಂತಾ ಹೇಳ್ತಾ ಅಲ್ಲಿ ನೀರಲ್ಲಿ ಸ್ನಾನ ಮಾಡಿದರೆ ನನ್ನದೇನೂ ತಕರಾರು ಇಲ್ಲ.
ಹಿಂದೂ ಸಮಾಜದ ಒಂದು ಕೊರತೆ ಏನೆಂದರೆ ಅದರಲ್ಲಿ ಆಧುನಿಕತೆ ಹಾಗೂ ವೈಜ್ನಾಕತೆ ಅಂದರೆ ಅದು ಯುರೋಪಿಯನ್ ಮಾನಸಿಕತೆ ಅಂತಿದೆ. ವಾಸ್ತವದಲ್ಲಿ scientific temper ಅನ್ನೋದು ಯಾರಪ್ಪನ ಸೊತ್ತೂ ಅಲ್ಲ. ಯಾರಿಗೆ ಪ್ರಬುದ್ದತೆ ಇದೆಯೋ ಅವರು ಅದನ್ನು ಹೊಂದಿಯೇ ಹೊಂದ್ತಾರೆ. ಕುಂಬ ಮೇಳ ಅಂತಲ್ಲ ನಮ್ಮ ದೇಶದ ಹೆಚ್ಚಿನ ನದಿಗಳ ನೀರು ಕುಡಿಯೋದಕ್ಕೆ ಸೂಕ್ತ ಅಂತಾ ಅಲ್ಲಾ ವಿಜ್ನಾನದೊಳಗೆ ಯೋಚನೆ ಮಾಡೋರು ಹೇಳ್ತಾರೆ. ವಿಶ್ವಸಂಸ್ಥೆಯೇ ಅದರ ಬದಲಿಗೆ ಅನಿವಾರ್ಯವಾಗಿ ನಮ್ಮಲ್ಲಿ ಹಾಗೂ ಆಫ್ರಿಕಾದ ದೇಶಗಳಲ್ಲಿ ಕುಡಿಯುವ ನೀರನ್ನು ಶುದ್ದೀಕರಿಸಿ ನಳ್ಳಿಯ ಮೂಲಕ ಕೊಡಿ ಅಂತಾ ಒತ್ತಡ ಹಾಕಿದ್ದಕ್ಕೆ ನಾವು ಇಂದು ಜಲಜೀವನ ಮಿಶನ್ ಅನ್ನು ಕೈಗೆತ್ತಿಕೊಂಡಿರೋದು. ನಮ್ಮಲ್ಲಿ ನದಿ ಯಾಕೆ..? ಹಳ್ಳಿಗಳ ಕೆರೆಗಳಲ್ಲಿ ಒಂದು ಕಡೆ ಎಮ್ಮೆಗಳು ತೇಲಾಡ್ತಿವೆ, ಇನ್ನೊಂದು ಕಡೆ ಕಸ್ತೂರಿ ಸೋಪ್ ಹಾಕಿ ಸ್ನಾನ ನಡೀತಾ ಇರ್ತದೆ. ಹಾಗೂ ಹೆಂಗಸರು ಇನ್ನೊಂದು ಕಡೆ ತಂಬಿಗೆಯಲ್ಲಿ ನೀರು ಹೊತ್ತು ಕೊಂಡೋಗ್ತಾರೆ. ಇದನ್ನು ಅರ್ಥಶಾಸ್ತ್ರಿ, ಅಭಿಜಿತ್ ಬ್ಯಾನರ್ಜಿಯವರು ಸಾಕ್ಷಾತ್ ಮೋದಿಯವರಿಗೇ ವಿವರಿಸಿ ಹೇಳಿದ್ದಾರೆ.
ಇನ್ನು ಗಂಗೆ/ಯಮುನೆಯ ನೀರು ಏಕೆ ಅಶುದ್ದ ಅಂದರೆ ಕಾನ್ಪುರದಿಂದ ಆಗ್ರಾದ ವರೆಗೂ ಎಲ್ಲ ನಗರಗಳಲ್ಲಿ ದನ ಹಾಗೂ ಎಮ್ಮೆಯ ಚರ್ಮವನ್ನು ಸುಲಿದು ಲೆದರ್ ಕಾರ್ಖಾನೆಗಳು ಕೆಲಸ ಮಾಡ್ತಿವೆ. ಅವುಗಳು ದೇಹದ ಉಳಿಕೆ ಭಾಗ ಹಾಗೂ ಚರ್ಮವನ್ನು ಕೊಳೆಸಿ ಬಿಡುವ ತ್ಯಾಜ್ಯ ನೀರನ್ನು ಎಗ್ಗಿಲ್ಲದೇ ಇದೇ ನದಿಗೆ ಬಿಡ್ತಾರೆ. ಅದಕ್ಕಾಗಿ 20 ವರ್ಷ ಮೊದಲು WHO ಸರಕಾದ ಬಳಿ ಈ ಬಗ್ಗೆ ಕ್ರಮ ಕೈಗೊಳ್ಳಿ ಅಂತಾ ಹೇಳಿದ್ದಕ್ಕೆ ಆ ಸಮಯದಲ್ಲಿ ಸರಕಾರ ಅವರಿಗೆ ಕಠಿಣ ಕ್ರಮಗಳನ್ನು ತಂದಿತ್ತು. ಆದರೆ ಆ ಉದ್ದಿಮೆಯವರ ಪ್ರಭಾವ ಎಷ್ಟಿದೆ ಅಂದರೆ ಅದರ ಪರವಾಗಿದ್ದ ಸರಕಾರಗಳೇ ಬಿದ್ದು ಹೋದವು. ಹಾಗಾಗಿ ಈವಾಗ ಸರಕಾರ ಈ ಕಾನೂನುಗಳನ್ನು ನಿಧಾನ ಮಾಡಿದೆ.
ಇನ್ನು ಗಂಗಾ ತಪ್ಪಲು ಪ್ರದೇಶದಲ್ಲಿ ಬಹಳ ನೀರು ಇರುವ ಕಾರಣಕ್ಕಾಗಿ ವ್ಯಾಪಕ ಕೃಷಿ ನಡೆದಿದೆ.ಅದಕ್ಕೆ ಟನ್ ಗಟ್ಟಲೆ ರಾಸಾಯನಿಕಗಳನ್ನು ಸುರಿಯಲಾಗಿದೆ. ಆ ಕಾರಣಕ್ಕಾಗಿ ಅಲ್ಲಿನ ಸಾಕಷ್ಟು ಬಾವಿಗಳ ನೀರು ಕೂಡಾ ಕುಡಿಯಲು ಸೂಟೆಬಲ್ ಅಲ್ಲಾಂತಾ ರಾಜ್ಯ ಸರಕಾರಗಳೇ ಘೋಷಣೆ ಮಾಡಿವೆ.
ಹಿಂದುಗಳು ಆಧುನಿಕ ಆಗಬೇಕು ಅಂತಾ ವಿವೇಕಾನಂದರು, ಅರವಿಂದರು ಎಂದೋ ಕರೆ ಕೊಟ್ಟಿದ್ದಾರೆ. ಆಧುನಿಕತೆಯ ಒಂದು ಭಾಗ ಶುಚಿತ್ವ. ಅದನ್ನು ನಮ್ಮ ನದಿಗಳಲ್ಲಿ, ದೇವಸ್ಥಾನಗಳ ಪರಿಸರದಲ್ಲಿ ತರುವ ಪ್ರಯತ್ನ ನಮ್ಮ ಕಡೆಯಿಂದ ಆಗಿಲ್ಲವಾದರೆ ಬೇರಾರು ಮಾಡಲು ಸಾಧ್ಯ.? ಇಡೀ ಜಗತ್ತು ಬದಲಾಗುವಾಗ ನಾವೂ ಅದರ ಜತೆ ಹೆಜ್ಜೆ ಹಾಕಬೇಕು ತಾನೇ..?
ನೀವು ಹಿಮಾಲಯದ ದುರ್ಗಮ ಜಾಗದಲ್ಲಿನ ಬೌದ್ಧ ಮಂದಿರಗಳಿಗೆ ಹೋಗಿ. ಆ ಊರಿನ ಅತೀ ಶುಭ್ರವಾದ ಜಾಗ ಅವರ ದೇವಸ್ಥಾನ ಆಗಿರ್ತದೆ. ರಾಜಸ್ಥಾನದ ಯಾವುದೇ ಜೈನ ಮಂದಿರಕ್ಕೆ ಹೋಗಿ ಅಷ್ಟು ಶುಚಿಯಾಗಿ ಆ ಕಾಲದಲ್ಲೇ ಇಸ್ಕಾನ್ ಮಾದರಿಯ ಶುಬ್ರ ದೇವಾಲಯ ಅವರದ್ದು. ಕ್ರೈಸ್ಥರ ಚರ್ಚುಗಳು ಸಾಮಾನ್ಯವಾಗಿ ಬಹಳ ಶುಚಿಯಾಗಿ ಶಾಂತವಾಗಿ ಇರುತ್ತೆ. ಗುರುದ್ವಾರಗಳಂತೂ ಶುಚಿತ್ವಕ್ಕೆ ಇನ್ನೊಂದು ಹೆಸರು.
ಮುಸ್ಲಿಮರ ನಾನು ಬೇಟಿ ನೀಡಿದ ಅಜ್ಮೀರ್ ದರ್ಗಾ ಬಹಳ ಗಲೀಜಾಗಿತ್ತು. ಕಳೆದ ವರ್ಷ ಕೂಡಾ ಪ್ರವಾಸದಲ್ಲಿ ಅವರ ಯಾವುದೋ ಮಸೀದಿಗೆ ಉತ್ತರದಲ್ಲಿ ನಾವು ಹೋಗಿದ್ದೆವು. ಅಲ್ಲಿನ ಗಲೀಜು ನೋಡಿ ನನ್ನ ಮಗಳು ಚಾಂದಿನಿಯೇ ಇಲ್ಲಿಂದ ಹೋಗೋಣ ಅಂದಿದ್ಳು.
ಹಿಂದುಗಳು ಇದನ್ನು ನೋಡಿ ಸಮಾಧಾನ ಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಬದಲಿಗೆ ಮೇಲ್ಪಂಕ್ತಿ ಹಾಕಿರೋ ಇತರರು ನಮಗೆ ಆದರ್ಶ ಆಗಲಿ. ವರ್ಷಗಳ ಮೊದಲು ಗಯಾದ ವಿಷ್ಣುಪಾದ ದೇವಸ್ಥಾನಕ್ಕೆ ಹೋದಾಗ ಅದರ ಪ್ರಾಂಗಣದಲ್ಲೇ ನಾಯಿಗಳು ಕಕ್ಕ ಮಾಡಿರೋದನ್ನು ದಾಟಿ ಹೋಗಬೇಕಿತ್ತು. ನೀವು ಕಾಶಿಯ ಹೊಸ ಕಾರಿಡಾರ್ ಬಿಟ್ಟು ಇತರ ಯಾವುದೇ ದಾರಿಯಲ್ಲಿ ಹೋದರೆ ಅಸಾಧ್ಯ ಅನ್ನುವಷ್ಟು ಗಂಜಲ ಗಲೀಜುಗಳನ್ನು ದಾಟಿ ಹೋಗಬೇಕಾಗ್ತದೆ.ಕೋಲ್ಕತ್ತಾದ ಕಾಳಿ ಮಂದಿರಕ್ಕೆ ಒಂದು ಸುತ್ತ ಬರಬೇಕಾದರೆ ಕರ್ಚೀಫ್ ಮೂಗಿಗೆ ಇಟ್ಟೇ ಹೋಗಬೇಕು. ಆದರೆ ಅದರ ಸನಿಹದಲ್ಲೇ ಇರುವ ದಕ್ಷಣೇಶ್ವರದ ಮಠ ಬಹಳ ಶುಚಿಯಾಗಿರುತ್ತೆ.
ದೂರ ಯಾಕೆ..? ಪಕ್ಕದ ಕುಕ್ಕೆ ಸುಬ್ರಮಣ್ಯದ ಒಳ ಹೊಕ್ಕುವ ದಾರಿಯ ಎದುರೇ ಹರಿಯುವ ನದಿ ನೀರಲ್ಲಿ ಪ್ಲಾಸ್ಟಿಕ್ ತೊಟ್ಟೆ, ಬಾಟಲ್ ಗಳನ್ನು ತೇಲಾಡುವುದನ್ನು ನೋಡಿದರೆ ಅದಕ್ಕೆ ಕಾಲು ಹಾಕಬೇಕೇ ಅನ್ನುವ ಪ್ರಶ್ನೆ ನಮ್ಮಂತ ಸುಶಿಕ್ಷಿತ ಜಿಲ್ಲೆಯಲ್ಲೇ ಇದೆಯಾದರೆ ಇದು ಎಚ್ಚರಿಕೆಯ ಕರೆಗಂಟೆ ಅಲ್ಲವೇ..?
ನಿನ್ನೆ ಪ್ರಯಾಗದ ಗಲೀಜಿನ ಬಗ್ಗೆ ಯಫ್. ಬಿ. ಯಲ್ಲಿ ಯಾರೋ ಬರೆದಾಗ ನೀವು ಹಿಂದುಗಳ ನಂಬಿಕೆಯನ್ನು ಅವಮಾನ ಮಾಡ್ತೀರಿ ಅಂತಾ ಒಂದಷ್ಟು ಜನ ಭಕ್ತರು ದಾಳಿ ಮಾಡಿದ್ರು. ಆವಾಗ ಅವರು ನಂಬಿಕೆ ಅಂದರೆ ಏನು…? ಹೇಲು ಅಂದರೆ ಹೇಲೇ ಆಗಿರುತ್ತೆ. ಅದು ನೀವು ಹೇಗೆ ನಂಬಿದ್ರು ಹೇಲೇ ಅಲ್ವಾ ಅಂತಾ ಕೇಳಿದ್ರು.
ಧರ್ಮ ನಿರಂತರ ಆಗಬೇಕಾದರೆ ಅದು ನಿತ್ಯ ನೂತನ ಆಗಬೇಕು. ಅದು ಇತರ ಧರ್ಮದ ಎದುರು ಸವಾಲು ಹಾಕೋ ಒಂದೇ ಕಾರಣಕ್ಕೆ ವೃದ್ದಿ ಆಗಲ್ಲ. ನಮ್ಮಲ್ಲಿನ ಆಂತರಿಕ ಸ್ವಚ್ಚತೆ ಯ ಮೂಲಕ ಸಮಾಜದ ಅಸಮಾನತೆಯನ್ನು ತೊಲಗಿಸಿದಾಗ, ಬಾಹ್ಯ ಸ್ವಚ್ಚತೆಯ ಮೂಲಕ ನಮ್ಮ ದೇವಸ್ಥಾನಗಳು ಹಾಗೂ ನದಿಗಳ ಸಹಿತ ಪೂರ್ಣ ಪರಿಸರವನ್ನುಶುಚಿಗೊಳಿಸಿದರೆ ಯಾವ ಧರ್ಮವೂ ನಮ್ಮನ್ನ ಮುಟ್ಟುವುದ ಅಸಾಧ್ಯ. ಪರಿಸರವೇ ನಮ್ಮ ಶಕ್ತಿ. ಶಕ್ತಿಯೇ ನಮ್ಮ ಮೂಲ ದೇವತೆ ದುರ್ಗೆ ಅಂತಾ ಹಿರಿಯರು ವೇದಕಾಲದಲ್ಲೇ ಹೇಳಿದ್ದನ್ನು ನೆನಪಿಸೋಣ.