ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯದ ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಐಡಿಯ ಎಸ್‌ಐಟಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಎರಡನೇ ದೋಷಾರೋಪ ಪಟ್ಟಿ ಸಲ್ಲಿಸಿದೆ. 60 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ವಿಡಿಯೋ ಮಾಡಿಕೊಂಡಿದ್ದ ಆರೋಪ ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧ 1,652 ಪುಟಗಳ ಆರೋಪಪಟ್ಟಿ ಸಲ್ಲಿಸಲಾಗಿದೆ.
ಸಿಆರ್‌ಪಿಸಿ 164ರ ಅಡಿ ಸಂತ್ರಸ್ತೆ ಹಾಗೂ ಪ್ರಮುಖ ಸಾಕ್ಷಿದಾರರ ಹೇಳಿಕೆಯನ್ನು ನ್ಯಾಯಾಧೀಶರ ಎದುರು ದಾಖಲಿಸಲಾಗಿದೆ. 113 ಮಂದಿ ಸಾಕ್ಷಿದಾರರು ಹಾಗೂ ಡಿಜಿಟಲ್ ಸಾಕ್ಷ್ಯಾಧಾರ, ಎಫ್‌ಎಸ್‌ಎಲ್ ವರದಿಯನ್ನು ನ್ಯಾಯಾಲಯಕ್ಕೆ ನೀಡಲಾಗಿದೆ ಎಂದು ಎಸ್‌ಐಟಿ ತಿಳಿಸಿದೆ.
ಆರೋಪಿ ಪ್ರಜ್ವಲ್, ಹೊಳೆನರಸೀಪುರದಲ್ಲಿ ಮನೆ ಕೆಲಸಕ್ಕೆ ಬರುತ್ತಿದ್ದ 60 ವರ್ಷದ ಸಂತ್ರಸ್ತೆಯನ್ನು ಬೆದರಿಸಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿರುವುದು ತನಿಖೆಯಲ್ಲಿ ಧೃಡಪಟ್ಟಿದೆ. ಆರೋಪಿ ಕೃತ್ಯ ಎಸಗುವಾಗ ತನ್ನದೇ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದ ವಿಚಾರವೂ ರುಜುವಾತಾಗಿದೆ ಎಂದು ಎಸ್‌ಐಟಿ ಮೂಲಗಳು ಹೇಳಿವೆ.
‘ಸಂತ್ರಸ್ತೆ ಕೈ ಮುಗಿದು ಬೇಡಿಕೊಂಡು ನಿಮ್ಮ ತಾತ ಹಾಗೂ ತಂದೆಗೆ ಊಟ ಬಡಿಸಿದ್ದೇನೆ. ನನ್ನ ಬಿಟ್ಟು ಬಿಡು’ ಎಂದು ಅಂಗಲಾಚಿದರೂ ಪ್ರಜ್ವಲ್ ದೌರ್ಜನ್ಯ ಎಸಗಿದ್ದ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ವೈರಲ್ ಬಳಿಕ ಮೇ 5ರಂದು ಎಸ್‌ಐಟಿ ಸಂತ್ರಸ್ತೆ ಹೇಳಿಕೆ ಆಧರಿಸಿ ಪ್ರಜ್ವಲ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ ತನಿಖೆ ನಡೆಸಿತ್ತು.