ಬಿಜೆಪಿಯ ದೇವರಾಜ್ ಗೆ ಬಿಟ್ಟರೆ ಯಾರಿಗೂ ವಿಡಿಯೋ ಕೊಟ್ಟಿಲ್ಲ: ಡ್ರೈವರ್ ಕಾರ್ತಿಕ್ ಹೇಳಿಕೆ

Most read

ಹಾಸನ: ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಪಟ್ಟ ವೀಡಿಯೋಗಳನ್ನು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ದೇವರಾಜ್ ಅವರಿಗೆ ಕೊಟ್ಟಿರುವುದು ಬಿಟ್ಟರೆ ಯಾವುದೇ ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರಿಗೆ ಕೊಟ್ಟಿಲ್ಲ ಎಂದು 15 ವರ್ಷಗಳ ಕಾಲ ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ ಕುಟುಂಬಕ್ಕೆ ಕಾರ್ ಡ್ರೈವರ್ ಆಗಿ ಕಾರ್ಯನಿರ್ವಹಿಸಿದ್ದ ಕಾರ್ತಿಕ್ ಸ್ಪಷ್ಟಪಡಿಸಿದ್ದಾರೆ.

ಅವರು ಎಸ್ಐಟಿಗೆ ವಿಚಾರಣೆ ಎದುರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೋಗಳನ್ನು ಕಾಂಗ್ರೆಸ್ ನಾಯಕರಿಗೆ ನೀಡಿದ್ದೇನೆ ಎನ್ನುವ ಆರೋಪವನ್ನು ತಳ್ಳಿ ಹಾಕಿದ್ದಾರೆ. 15 ವರ್ಷಗಳಿಂದ ರೇವಣ್ಣರ ಕುಟುಂಬದವರಿಗೆ ಡ್ರೈವರ್ ಆಗಿ ಕೆಲಸ ಮಾಡಿದ್ದೇನೆ. ರೇವಣ್ಣರ ಕುಟುಂಬ ನಮ್ಮ ಜಮೀನನ್ನು ನಮ್ಮಿಂದ ಬಲಾತ್ಕಾರವಾಗಿ ಕಿತ್ತುಕೊಂಡಿದೆ. ನನ್ನನ್ನು ಮತ್ತು ನನ್ನ ಹೆಂಡತಿಯನ್ನು ಹೊಡೆದು ಬಡೆದು ಜಮೀನು ವಶಪಡಿಸಿಕೊಂಡಿದ್ದಾರೆ. ಇದರಿಂದ ಬೇಸತ್ತ ನಾನು ಒಂದು ವರ್ಷದಿಂದ ಅವರಲ್ಲಿ ಕೆಲಸ ಮಾಡುವುದನ್ನು ಬಿಟ್ಟಿದ್ದೇನೆ.

ನನಗೆ ಆದ ಅನ್ಯಾಯವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕೆಂದು ಓಡಾಡುತ್ತಿದ್ದೆ. ಈ ವಿಷಯವಾಗಿ ಪ್ರಕರಣ ದಾಖಲಿಸಲು ಹೋದಾಗ ಕಾಂಗ್ರೆಸ್ ನವರು ನನ್ನ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಲು ಸಹಕಾರ ನೀಡಿದ್ದಾರೆ. ಇಂಥವರಿಂದ ನ್ಯಾಯ ಸಿಗಲ್ಲ ಎಂದುಕೊಂಡ ನಾನು ಹೊಳೆನರಸೀಪುರ ಕ್ಷೇತ್ರದ ಬಿಜೆಪಿ ನಾಯಕ, ಅಡ್ವೋಕೇಟ್ ದೇವರಾಜ್ ಬಳಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿ ಹೋಗಿದ್ದೆ. ಇದಕ್ಕೆ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಿದ ದೇವರಾಜ್ ಅವರು “ನಿನಗೆ ನ್ಯಾಯ ಕೊಡಿಸುವ ಸಂಬಂಧ ಎಲ್ಲ ರೀತಿಯಿಂದ ಸಹಕಾರ ನೀಡುತ್ತೇನೆ” ಎಂದು ಭರವಸೆ ನೀಡಿದ್ದರು. ಆಗ ನನ್ನ ಪ್ರಕರಣವನ್ನು ದೇವರಾಜ್ ತೆಗೆದುಕೊಂಡಿರಲಿಲ್ಲ.

ನಂತರ ಬೇರೊಬ್ಬ ವಕೀಲರ ಬಳಿ ನನ್ನ ಪ್ರಕರಣ ಕೊಡುವ ತಯಾರಿಯಲ್ಲಿದ್ದೆ. ಆಗ ದೇವರಾಜ್ ಅವರು ನನ್ನನ್ನು ಸಂಪರ್ಕಿಸಿ ನಿಮ್ಮ ಪ್ರಕರಣಕ್ಕೆ ನ್ಯಾಯಾಲಯದಲ್ಲಿ ನ್ಯಾಯ ಸಿಗುವುದು ಕಠಿಣ. ರೇವಣ್ಣ ಕುಟುಂಬದಿಂದ ನಿಮಗಾದ ಅನ್ಯಾಯದ ಕುರಿತು ಮಾಧ್ಯಮ ಹೇಳಿಕೆ ನೀಡಲು ಸೂಚಿಸಿ ನನ್ನಿಂದ ಹೇಳಿಕೆಗಳನ್ನೂ ಕೊಡಿಸಿದರು. ತಾವೂ ಜೊತೆಯಾಗಿ ರೇವಣ್ಣ ಕುಟುಂಬದ ವಿರುದ್ಧ ಮಾಧ್ಯಮದ ಮುಂದೆ ಹೇಳಿಕೆಗಳನ್ನು ನೀಡಿದರು.

ಇದಾದ ಬಳಿಕ ಪ್ರಜ್ವಲ್ ರೇವಣ್ಣ ಅವರಿಂದ ನನಗೆ ಸ್ಟೇ ಆರ್ಡರ್ ಒಂದು ಬಂತು. ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ, ಫೋಟೋ ಗಳನ್ನು ರಿಲೀಸ್ ಮಾಡದಂತೆ ಸ್ಟೇ ಆರ್ಡರ್ ನಲ್ಲಿ ಸೂಚಿಸಲಾಗಿತ್ತು. ಇದನ್ನು ತೆಗೆದುಕೊಂಡು ಮತ್ತೆ ದೇವರಾಜ್ ಅವರ ಬಳಿ ನಾನು ಹೋದೆ. ಆಗ ದೇವರಾಜ್ ಅವರು ನಿಮ್ಮ ಬಳಿ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಅಶ್ಲೀಲ ಫೋಟೋ, ವಿಡಿಯೋ ಇದೆ ಎನ್ನುವುದು ಈ ಆರ್ಡರ್ ಹೇಳುತ್ತಿದೆ. ಈ ಸ್ಟೇಯಿಂದ ನಿಮ್ಮನ್ನು ಹೊರತರಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ನಿಮ್ಮ ಬಳಿ ಇರುವ ಅಂತಹ ಎಲ್ಲ ವಿಡಿಯೋಗಳನ್ನು, ಫೋಟೋಗಳನ್ನು ನನ್ನ ಬಳಿ ತಂದು ಕೊಡಿ. ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಹೇಳಿದರು.

ಅದರಂತೆ ಇವರಿಂದ ನ್ಯಾಯ ಸಿಗುವ ಭರವಸೆಯೊಂದಿಗೆ ನನ್ನ ಬಳಿ ಇದ್ದ ಎಲ್ಲ ವಿಡೀಯೋ, ಫೋಟೋಗಳನ್ನು ತಂದು ಕೊಟ್ಟೆ. ಅವರನ್ನು ಹೊರತುಪಡಿಸಿ ಮತ್ತೆ ಯಾರಿಗೂ ನಾನು ವಿಡಿಯೋ, ಫೋಟೋ ಶೇರ್ ಮಾಡಿಲ್ಲ. ನನಗೆ ಅನ್ಯಾಯ ಆದಾಗ ಕಾಂಗ್ರೆಸ್ ನವರೇ ರೇವಣ್ಣ ಅವರ ಕುಟುಂಬದೊಂದಿಗೆ ನಿಂತು ನನ್ನ ಪ್ರಕರಣವನ್ನು ಬಿ ರಿಪೋರ್ಟ್ ಹಾಕಿಸಿದ್ದಾರೆ. ಅಂತವರನ್ನು ನಾನು ಸಂಪರ್ಕ ಮಾಡುತ್ತೇನೆಯೇ? ಬಿಜೆಪಿ ನಾಯಕ ದೇವರಾಜ್ ಗೌಡ ಅವರಿಗೆ ಬಿಟ್ಟು ನಾನು ಯಾರಿಗೂ ವಿಡಿಯೋಗಳನ್ನು ಶೇರ್ ಮಾಡಿಲ್ಲ. ಇದನ್ನೇ ನಾನು ಎಸ್ಐಟಿ ಮುಂದೆ ಹೇಳಿದ್ದೇನೆ ಎಂದರು.

More articles

Latest article