ಶಿವಮೊಗ್ಗ: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣನ ಕಾಮಕಾಂಡ ಬಯಲಾಗುತ್ತಿದ್ದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದಲ್ಲಿ ತಲ್ಲಣ ಉಂಟಾಗಿದ್ದು, ಪೆನ್ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿನಂತಿಸಿದ್ದಾರೆ.
ಶಿವಮೊಗ್ಗದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೇವಣ್ಣ ಕುಟುಂಬದಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸಿದರು.
ಇದರಲ್ಲಿ ಎಚ್. ಡಿ. ದೇವೇಗೌಡರ ಹೆಸರು ಏಕೆ ತರುತ್ತೀರಿ? ನನ್ನ ಹೆಸರನ್ನು ಏಕೆ ಎಳೆದುತರುತ್ತೀರಿ ಎಂದ ಅವರು ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು ಎಂದು ಪುನರುಚ್ಚರಿಸಿದರು.
ಈ ಹಗರಣದಿಂದ ನನಗಷ್ಟೇ ಮುಜುಗರವಾಗೋದಿಲ್ಲ, ಇಡೀ ಸಮಾಜಕ್ಕೆ ಮುಜುಗರವಾಗುತ್ತದೆ ಎಂದು ಹೇಳಿದ ಅವರು ಇದರಲ್ಲಿ ಯಾರನ್ನೂ ವಹಿಸಿಕೊಳ್ಳಲು ಹೋಗಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದರು.
ಎಫ್ ಐ ಆರ್ ಆಗಿದೆ, ಸತ್ಯಾಂಶ ಹೊರಬರಲಿ. ಎಸ್ ಐಟಿ ತನಿಖೆ ಮಾಡಿ ವರದಿಯನ್ನು ನೀಡಲಿ. ಹಾಸನದಲ್ಲಿ ಪೆನ್ ಡ್ರೈವ್ ಬಿಟ್ಟವರು ಯಾರು? ಪೆನ್ ಡ್ರೈವ್ ಹಿಂದೆ ಯಾರಿದ್ದಾರೆ ಗೊತ್ತಾಗಲಿ ಎಂದು ಅವರು ಹೇಳಿದರು.