ಹುಬ್ಬಳ್ಳಿ: ಇಸ್ಪೀಟ್ ದಂಧೆ ನಡೆಸುತ್ತಿದ್ದ ಪುಂಡರನ್ನು ಠಾಣೆಗೆ ಕರೆಯಿಸಿದ್ದ ಪೊಲೀಸರ ಮೇಲೆ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಷಿ ರೇಗಾಡಿದ ವಿಡಿಯೋ ವೈರಲ್ ಆಗಿದ್ದು, ಕೇಂದ್ರ ಸಚಿವರಿಗೆ ಇಸ್ಪೀಟ್ ಜೂಜುಕೋರರ ಮೇಲೆ ಯಾಕಿಷ್ಟು ಮೋಹ ಎಂಬ ಪ್ರಶ್ನೆ ಉದ್ಭವವಾಗಿದೆ.
ಹುಬ್ಬಳ್ಳಿಯಲ್ಲಿ ಇಸ್ಪೀಟ್ ಜೂಜಾಡುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ ಮಹಿಳಾ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಪುಂಡರಿಗೆ ಒಂದೆರಡು ಏಟೂ ಕೊಟ್ಟಿದ್ದರು. ವಿಷಯ ತಿಳಿದ ಪ್ರಹ್ಲಾದ್ ಜೋಷಿ ಇಸ್ಪೀಟ್ ಜೂಜುಕೋರರ ಪರವಹಿಸಿ ಪೊಲೀಸರ ವಿರುದ್ಧ ಕೂಗಾಡುವ ವಿಡಿಯೋ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪಕ್ಷ, ಹುಬ್ಬಳ್ಳಿಯಲ್ಲಿ ಕ್ರಿಮಿನಲ್ ಗಳ ಪರ ವಹಿಸಿ ಪೋಲಿಸರ ಮೇಲೆ ದರ್ಪ ದಬ್ಬಾಳಿಕೆ ನಡೆಸುವ ಸಂಸದ ಪ್ರಹ್ಲಾದ್ ಜೋಷಿ ಪೊಲೀಸರ ನೈತಿಕ ಸ್ಥೈರ್ಯವನ್ನು ಕಸಿಯುತ್ತಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಮೂಗು ತೂರಿಸುವ ಬಿಜೆಪಿ ನಾಯಕರಿಗೆ ಕಾನೂನು ಸುವ್ಯವಸ್ಥೆಯ ಬಗ್ಗೆ ಮಾತಾಡುವುದಕ್ಕೆ ನೈತಿಕತೆ ಇಲ್ಲ ಎಂದು ಕಿಡಿಕಾರಿದೆ.
ಹುಬ್ಬಳ್ಳಿಯ ಪುಂಡ ಪೋಕರಿಗಳನ್ನು ತಹಬದಿಗೆ ತರಲು ಮುಂದಾದ ಪೊಲೀಸರಿಗೆ ಪ್ರಹ್ಲಾದ್ ಜೋಷಿ ಕೆಲ ದಿನಗಳ ಹಿಂದೆ ಧಮಕಿ ಹಾಕಿದ್ದರು, ಪೊಲೀಸರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲು ಬಿಡದ ಜೋಶಿ ಬಿಜೆಪಿ ರೌಡಿ ಮೋರ್ಚಾದ ಪರವಾಗಿ, ಕ್ರಿಮಿನಲ್ ಗಳು, ಪೋಕರಿಗಳ ಪರವಾಗಿ ನಿಂತಿದ್ದು ನಾಚಿಕೆಗೇಡು, ರಾಜ್ಯದಲ್ಲೆಡೆ ಬಿಜೆಪಿ ಜನಪ್ರತಿನಿಧಿಗಳು ಪೊಲೀಸರಿಗೆ ಧಮಕಿ ಹಾಕುವ ಕೆಲಸ ಮಾಡುತ್ತಿದ್ದಾರೆ, ಇತ್ತ ಕಾನೂನು ಸುವ್ಯವಸ್ಥೆಯ ಬಗ್ಗೆ ಪಾಠ ಮಾಡಲು ಬರುತ್ತಾರೆ ಎಂದು ಪಕ್ಷ ಟೀಕಿಸಿದೆ.
ನಮ್ಮ ಸರ್ಕಾರ ಕ್ರಿಮಿನಲ್ ಗಳ ಜೊತೆಗೆ ಬಿಜೆಪಿಯ ಗೂಂಡಾ ರಾಜಕಾರಿಣಿಗಳನ್ನೂ ಹದ್ದುಬಸ್ತಿಗೆ ತರುವುದಕ್ಕೆ ಯಾವುದೇ ಮುಲಾಜು ನೋಡುವುದಿಲ್ಲ ಎಂದು ಎಕ್ಸ್ ಪೋಸ್ಟ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.