ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪಿಎಚ್.ಡಿ ಅಧ್ಯಯನ ಮಾಡಲು ಸಮಾಜ ಕಲ್ಯಾಣ ಇಲಾಖೆಯಿಂದ SC -ST ಸಂಶೋಧನಾ ವಿದ್ಯಾರ್ಥಿಗಳಿಗಾಗಿ ‘ಪ್ರಬುದ್ಧ’ ಯೋಜನೆಯಡಿ ನೀಡುತ್ತಿದ್ದ ಸಹಾಯಧನವನ್ನು ರಾಜ್ಯ ಸರ್ಕಾರ ರದ್ದುಪಡಿಸಿದ ಬೆನ್ನಲ್ಲೇ ವ್ಯಾಪಕ ಟೀಕೆ ಎದುರಿಸಿದ ಬೆನ್ನಲ್ಲೇ ಈ ರದ್ದತಿಯನ್ನು ವಾಪಸ್ ಪಡೆದ ಯೋಜನೆ ಮುಂದುವರೆಸುವುದಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್‌ಸಿ ಮಹದೇವಪ್ಪ ಹೇಳಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದ phd ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನಕ್ಕೆ ನೀಡುವ ಹಣದಲ್ಲಿ ಕನಿಷ್ಠ ಇಬ್ಬರು ಅಥವಾ ಮೂವರು ಅಭ್ಯರ್ಥಿಗಳಿಗೆ ವಿದೇಶದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಬಹುದು’ ಎಂದು ಉಲ್ಲೇಖಿಸಿ ಈ ಯೋಜನೆಯನ್ನು ರದ್ದುಪಡಿಸಿತ್ತು.
ಚಿಕ್ಕಮಗಳೂರು ಜಿಲ್ಲೆ ನೇಹ ಎಂಬ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿನಿ 2024-25ನೇ ಶೈಕ್ಷಣಿಕ ವರ್ಷದಲ್ಲಿ ವಿದೇಶದಲ್ಲಿ PhD ಮಾಡಲು ಅವಕಾಶ ದೊರಕಿದ್ದು, ಸಹಾಯ ಧನಕ್ಕೆ ಪ್ರಬುದ್ಧ ಯೋಜನೆಯಡಿ ಅರ್ಜಿ ಹಾಕಲು ಹೋದಾಗ, ಈ ಯೋಜನೆ ರದ್ದು ಪಡಿಸಿರುವುದಾಗಿ ತಿಳಿದುಬಂದಿತ್ತು.
ಈ ಕುರಿತು ನೇಹ ಕನ್ನಡ ಪ್ಲಾನೆಟ್ ಜೊತೆ ಮಾತನಾಡಿದ್ದು, ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಆರ್ಥಿಕ ಬಿಕ್ಕಟ್ಟುಗಳ ನಡುವೆ ಓದುವ ಅವಕಾಶ ಸಿಗುವುದಿಲ್ಲ. ಅಂತಹದರಲ್ಲಿ ಬೆರಳೆಣಿಕೆಯಷ್ಟು ಮಂದಿಗೆ ಈತರದ ಅವಕಾಶ ಸಿಗುತ್ತದೆ. ಸಿಕ್ಕಾಗ ನಮ್ಮ ಇಲಾಖೆಯೇ ನಮ್ಮನ್ನು ಬೆಂಬಲಿಸಲ್ಲ ಎಂದರೆ ಈ ಸಮಾಜ ಕಲ್ಯಾಣ ಇಲಾಖೆ ಇರುವುದಾದರು ಯಾಕೆ?. ಈ ಯೋಜನೆ ನನ್ನ ವಿದ್ಯಾಭ್ಯಾಸಕ್ಕೆ ಮಾತ್ರ ತೆರೆಯುವುದಲ್ಲ. ನನ್ನ ಸಮುದಾಯದ ಇತರೆ ವಿದ್ಯಾರ್ಥಿಗಳಿಗಾಗಿ ಇದನ್ನು ಮತ್ತೆ ಶುರು ಮಾಡಬೇಕು ಎಂದು ಆಗ್ರಹಿಸಿದ್ದರು.
ಇದಾದ ಬೆನ್ನಲ್ಲೇ ಹಲವು ಹೋರಾಟಗಾರರು, ದಲಿತ ಚಿಂತಕರು, ನೇಹ ಅವರ ಕುಟುಂಬಸ್ತರು ಇಲಾಖೆ ಮುಖ್ಯಸ್ಥರು ಹಾಗೂ ಸಚಿವರನ್ನು ಭೇಟಿ ಮಾಡಿ ಮನವಿ ಕೂಡ ಸಲ್ಲಿಸಿದ ನಂತರ ಸಚಿವರು ಈ ಯೋಜನೆ ರದ್ದತಿಯನ್ನು ವಾಪಸ್ ಪಡೆದಿದ್ದಾರೆ.
ಈ ಕುರಿತು ಸಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಅವರು, ಪ್ರಬುದ್ಧ ಯೋಜನೆಯಡಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ವಿದೇಶದಲ್ಲಿ ಪಿಹೆಚ್ ಡಿ ಅಧ್ಯಯನ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಗೊಂದಲಗಳು ಉಂಟಾಗಿದ್ದು ಸರ್ಕಾರವು ಈ ಹಿಂದಿನ ರೀತಿಯಲ್ಲೇ ಈ ಯೋಜನೆಯನ್ನು ಮುಂದುವರೆಸಲಿದೆ.
ಪರಿಶಿಷ್ಟ ಸಮುದಾಯದ ಜನರು ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಿದಾಗ ಮಾತ್ರ ಅವರು ಘನತೆಯುತ ಸ್ಥಾನಗಳಿಗೆ ಏರಲು ಸಾಧ್ಯ ಎಂಬ ಬಾಬಾ ಸಾಹೇಬರ ಆಶಯಗಳನ್ನು ಸಾಕಾರಗೊಳಿಸುವುದು ನಮ್ಮ ಜವಾಬ್ದಾರಿಯೇ ಆಗಿದೆ.
ಈ ಯೋಜನೆಯನ್ನು ಮುಂದುವರೆಸುವ ಕುರಿತು ನಮ್ಮ ಇಲಾಖೆಯ ಅಧಿಕಾರಿಗಳಿಗೆ ನಾನು ಸೂಚನೆ ನೀಡಿದ್ದು
ಸಮುದಾಯದ ಬಂಧುಗಳು ಈ ವಿಷಯದಲ್ಲಿ ಗೊಂದಲಗಳಿಗೆ ಎಡೆ ಮಾಡಿಕೊಡಬಾರದೆಂದು ಈ ಮೂಲಕ ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.
ಕಳೆದ ಮೂರು ವರ್ಷದಲ್ಲಿ ಪಿಎಚ್.ಡಿ ಅಧ್ಯಯನಕ್ಕೆ ಆಯ್ಕೆಯಾದವರ ಮಾಹಿತಿಯನ್ನು ದಾಖಲಿಸಿರುವ ಇಲಾಖೆ, *9 ಅಭ್ಯರ್ಥಿಗಳ ತಲಾವಾರು ವೆಚ್ಚ ₹95,66,731 ಆಗಿದ್ದು, ಒಂದು ವರ್ಷದ ಸ್ನಾತಕೋತ್ತರ ಕೋರ್ಸ್‌ಗೆ ಸರಾಸರಿ ₹35 ಲಕ್ಷದಿಂದ ₹40 ಲಕ್ಷ ವೆಚ್ಚವಾಗುತ್ತದೆ. ಎರಡು ವರ್ಷಕ್ಕೆ ₹50 ಲಕ್ಷದಿಂದ ₹60 ಲಕ್ಷವಾಗುತ್ತದೆ’ ಎಂದಿದೆ.