ವಿದ್ಯುತ್‌ ವ್ಯತ್ಯಯ ಉಂಟಾಗಿ ಕತ್ತಲಲ್ಲಿ ಮುಳುಗಿದ ಸ್ಪೇನ್‌, ಪೋರ್ಚುಗಲ್‌

Most read

ಬಾರ್ಸಿಲೋನಾ: ಸ್ಪೇನ್‌ ಹಾಗೂ ಪೋರ್ಚುಗಲ್‌ ನಲ್ಲಿ ವಿದ್ಯುತ್‌ ಸಂಪರ್ಕದಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಮೆಟ್ರೊ ರೈಲು ಸಂಪರ್ಕ, ಫೋನ್‌ ಲೈನ್‌ಗಳು, ಸಂಚಾರ ದೀಪ ಹಾಗೂ ಎಟಿಎಂ ವಹಿವಾಟುಗಳು ಸ್ಥಗಿತಗೊಂಡಿದ್ದವು. ಇದರಿಂದ ಸಾರ್ವಜನಿಕರು ಆತಂಕಕ್ಕೀಡಾಗಿದ್ದರು.

ಇದೇ ಮೊದಲ ಬಾರಿಗೆ ಇಂತಹುದೊಂದು ಅಪರೂಪದ ವಿದ್ಯುತ್‌ ವ್ಯತ್ಯಯ ಪ್ರಕರಣ ಕಂಡು ಬಂದಿದೆ. ಐಬೇರಿಯನ್‌ ದ್ವೀಪ ಸೇರಿದಂತೆ ಹಲವು ಕಡೆಗಳಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗಿದ್ದು, ಪ್ರಕರಣ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಸ್ಪೇನ್‌ ನ ವಿದ್ಯುತ್‌ ಗ್ರಿಡ್‌ ಮೇಲ್ವಿಚಾರಣಾ ಕಂಪನಿ ‘ರೆಡ್‌ ಎಲೆಕ್ಟ್ರಿಕಾ’ ಮಾಹಿತಿ ನೀಡಿದೆ. ಸ್ಪೇನ್‌ ದೇಶದಲ್ಲಿ 5 ಕೋಟಿ ಜನಸಂಖ್ಯೆಯಿದ್ದು, ವಿದ್ಯುತ್‌ ವ್ಯತ್ಯಯದಿಂದ ಎಷ್ಟು ಮಂದಿ ತೊಂದರೆಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿಲ್ಲ.

ಸ್ಥಳೀಯ ಕಾಲಮಾನದಂತೆ, ಮಧ್ಯಾಹ್ನದ ನಂತರ ಏಕಾಏಕಿ ದೊಡ್ಡ ಪ್ರಮಾಣದ ವಿದ್ಯುತ್‌ ವ್ಯತ್ಯಯ ಉಂಟಾಯಿತು. ಇದರಿಂದ ಮ್ಯಾಡ್ರಿಡ್‌ ನಲ್ಲಿರುವ ಸಂಸತ್‌ ಕತ್ತಲಿನಲ್ಲಿ ಮುಳುಗಿತು. ದೇಶದಲ್ಲಿರುವ ಮೆಟ್ರೊ ಸಂಪರ್ಕ ಸಂಚಾರ ಕಡಿತಗೊಂಡು, ಜನರು ಕಗ್ಗತ್ತಲಿನಲ್ಲಿ ಪರದಾಡುವಂತಾಯಿತು ಎಂದು ಸ್ಪೇನ್‌ ನ ಸರ್ಕಾರಿ ಸುದ್ದಿ ವಾಹಿನಿ ವರದಿ ಮಾಡಿದೆ. 

ಸೋಮವಾರ ಮಧ್ಯಾಹ್ನ 12.15ರ ವೇಳೆ ದೇಶದಲ್ಲಿ ವಿದ್ಯುತ್‌ ಬಳಕೆಯು 25 ಸಾವಿರ ಮೆಗಾವಾಟ್‌ನಿಂದ 12 ಸಾವಿರ ಮೆಗಾವಾಟ್‌ಗೆ ಇಳಿಕೆಯಾಗಿತ್ತು ಎಂದು ಸ್ಪೇನ್‌ ನ ವಿದ್ಯುತ್‌ ಜಾಲದ ಜಾಲತಾಣದಲ್ಲಿ ದಾಖಲಾಗಿತ್ತು. ಕೆಲವು ಗಂಟೆಗಳ ನಂತರ ಸ್ಪೇನ್‌ನ ಉತ್ತರ ಹಾಗೂ ದಕ್ಷಿಣ ದ್ವೀಪಗಳಲ್ಲಿ ಮತ್ತೆ ವಿದ್ಯುತ್‌ ಪೂರೈಕೆ ಆರಂಭಗೊಂಡಿದೆ. ಇಡೀ ದೇಶದಲ್ಲಿ ನಿಧಾನವಾಗಿ ಮತ್ತೆ ವಿದ್ಯುತ್‌ ಪೂರೈಕೆಯನ್ನು ಪುನರ್‌ ಸ್ಥಾಪಿಸಲಾಗುವುದು’ ಎಂದು ತಿಳಿದು ಬಂದಿದೆ.  

1.6 ಕೋಟಿ ಜನಸಂಖ್ಯೆ ಹೊಂದಿರುವ ಪೋರ್ಚುಗಲ್‌ ನ ರಾಜಧಾನಿ ಲಿಸ್ಬನ್‌ ಸೇರಿದಂತೆ ಉತ್ತರ, ದಕ್ಷಿಣ ಪ್ರದೇಶಗಳಲ್ಲಿ  ವಿದ್ಯುತ್‌ ವ್ಯತ್ಯಯ ಉಂಟಾಯಿತು. ಸ್ಪೇನ್‌ನಿಂದ ಪೂರೈಕೆಯಾಗುವ ವಿತರಣಾ ಜಾಲದಲ್ಲಿ ಉಂಟಾದ ಸಮಸ್ಯೆಯಿಂದ ದೆಶಾದ್ಯಂತ ವಿದ್ಯುತ್‌ ವ್ಯತ್ಯಯ ಉಂಟಾಗಿದೆ ಎಂದು ಸಂಪುಟ ಸಚಿವ ಲಿಟೊ ಅಮರೊ ತಿಳಿಸಿದದ್ದಾರೆ. ಫ್ರಾನ್ಸ್‌ನ ಕೆಲವು ಭಾಗಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು ಎಂದು ಮೂಲಗಳು ತಿಳಿಸಿವೆ.

More articles

Latest article