ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಜ.10ಕ್ಕೆ ಮುಂದೂಡಿ ಆದೇಶಿಸಿದೆ.
ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇಂದು ವಿಚಾರಣೆ ನಡೆಸಿತು. ಪೋಕ್ಸೊ ಪ್ರಕರಣ ಮತ್ತು ಆನಂತರದ ನ್ಯಾಯಾಂಗ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಯಡಿಯೂರಪ್ಪ, ಪ್ರಕರಣದಲ್ಲಿ ಇತರೆ ಆರೋಪಿಗಳಾಗಿರುವ ವೈ.ಎಂ.ಅರುಣ,ಎಂ. ರುದ್ರೇಶ್ ಮತ್ತು ಜಿ.ಮರಿಸ್ವಾಮಿ ಅವರು ಸಲ್ಲಿಸಿದ್ದರು.
ಬಿ.ಎಸ್.ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿ, ಸಂತ್ರಸ್ತೆಯ ಹೇಳಿಕೆಯನ್ನಷ್ಟೇ ಪರಿಗಣಿಸಿದರೆ ತನಿಖೆಯ ಅಗತ್ಯ ಇಲ್ಲ. ಕೆಲವು ಸೆಕ್ಷನ್‌ಗಳು ಅನ್ವಯಿಸಿರುವುದಕ್ಕೆ ಯಾವುದೇ ವ್ಯಾಪ್ತಿ ಇಲ್ಲ. ಸಾಕ್ಷಿಗಳ ಹೇಳಿಕೆ ಪರಿಗಣಿಸಬೇಕು ಎಂದಾದರೆ, ಸಂತ್ರಸ್ತೆಯ ಹೇಳಿಕೆ ಪರಿಗಣಿಸಬೇಕಿದೆ ಎಂದರು. ಬಿಎಸ್‌ವೈ ತನ್ನನ್ನ ಕೊಠಡಿಗೆ ಕರೆದುಕೊಂಡು ಹೋದರು ಎಂದು ಸಂತ್ರಸ್ತೆ ಆರೋಪಿಸಿದ್ದರು ಎಂದು ನ್ಯಾಯಪೀಠ ಹೇಳಿದಾಗ, ತನಿಖೆ ನಡೆಸಿರುವ ಪೊಲೀಸರು ಕೆಲ ಸಾಕ್ಷಿಗಳ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ ಎಂದು ಆರೋಪಿಸಿದರು.
ಬಿಎಸ್‌ವೈ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ಸತ್ಯಾಸತ್ಯತೆ ಬಯಲು ಮಾಡಲು ತನಿಖೆ ನಡೆಸಲಾಗುತ್ತಿದೆ. ತನಿಖೆ ಪಕ್ಷಪಾತಿಯಾಗಿದ್ದು, ನ್ಯಾಯಯುತ ಮತ್ತು ಕಾನೂನು ಅನ್ವಯವಾಗಬೇಕು. ಇದು ಪೊಲೀಸರು ಸಲ್ಲಿಸಿರುವ ಬಿ ವರದಿಗೂ ಅನ್ವಯ ಆಗುತ್ತದೆ. ತನಿಖಾಧಿಕಾರಿ ಸಾಕ್ಷಿ ಸಂಗ್ರಹಿಸಬಹುದು, ಅವರು ಸಾಕ್ಷಿಯನ್ನು ಪ್ರತ್ಯೇಕಿಸಲಾಗದು. ಸಾಕ್ಷಿಯು ಒಪ್ಪಿತವೇ ಇಲ್ಲವೇ ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ. ದೂರು ದಾಖಲಿಸುವುದಕ್ಕೂ ಮುನ್ನ ದೂರುದಾರೆ (ಸಂತ್ರಸ್ತೆಯ ತಾಯಿ ಈಗ ಸಾವನ್ನಪ್ಪಿದ್ದಾರೆ) ಮತ್ತು ಸಂತ್ರಸ್ತೆಯು ಹಲವು ಬಾರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಿದರು.
ನೀವು ಉಲ್ಲೇಖಿಸುತ್ತಿರುವ ಸಾಕ್ಷಿಗಳ ಹೇಳಿಕೆಯನ್ನು ಪರಿಗಣಿಸಬೇಕು ಎಂದಾದರೆ ಸಂತ್ರಸ್ತೆಯ ಹೇಳಿಕೆಯನ್ನೂ ಪರಿಗಣಿಸಬೇಕಾಗುತ್ತದೆ. ಇಡೀ ಘಟನೆಯನ್ನು ಸಂತ್ರಸ್ತೆ ವಿವರಿಸಿದ್ದಾರೆ. ಇದು ಹೇಳಿಕೆ ವಿರುದ್ಧ ಹೇಳಿಕೆ ಆಗುವುದಿಲ್ಲವೇ? ವಿಚಾರಣೆ ನಡೆಯುವುದು ಸೂಕ್ತವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಸಹಾಯ ಕೋರಿ ಮಹಿಳೆಯೊಬ್ಬರು ತಮ್ಮ ಪುತ್ರಿಯೊಂದಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ಬಂದಿದ್ದರು. ಆ ಸಂದರ್ಭದಲ್ಲಿ ಅಪ್ರಾಪ್ತ ಯುವತಿಗೆ ಬಿಎಸ್‌ವೈ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬಾಲಕಿಯ ತಾಯಿ ಕಳೆದ ವರ್ಷ ಮಾ.14 ಸದಾಶಿನಗರ ಠಾಣೆಗೆ ದೂರು ನೀಡಿದ್ದರು. ದೂರನ್ನು ಆಧರಿಸಿ ಪೊಲೀಸರು ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದರು. ಇಂದು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಬಿಎಸ್‌ವೈ ಪರ ವಕೀಲ ಸಿ.ವಿ.ನಾಗೇಶ್ ಅವರು ವಾದ ಮಂಡನೆಗೆ ಮತ್ತೆ ಒಂದು ಗಂಟೆ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನ್ಯಾಯಾಲಯವು ಜ.10ಕ್ಕೆ ಮುಂದೂಡಿತು.
ಪ್ರಕರಣದಲ್ಲಿ ಸಂಜ್ಞೆಯನ್ನು ಸ್ವೀಕರಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶದಲ್ಲಿ ವಿವೇಚನೆ ಬಳಸಲಾಗಿಲ್ಲ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.