ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಜನಗಣತಿಗಾಗಿ ಮನೆಗಳ ಪಟ್ಟಿ ಮಾಡುವ ಕಾರ್ಯಾಚರಣೆ (ಎಚ್ ಎಲ್ ಒ) 2026ರ ಏಪ್ರಿಲ್ 1 ರಿಂದ ಪ್ರಾರಂಭವಾಗಲಿದೆ ಎಂದು ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ತಿಳಿಸಿದ್ದಾರೆ. ಮನೆ ಪಟ್ಟಿ ಕಾರ್ಯಾಚರಣೆಯ ಜತೆಗೆ ಜನಗಣತಿಯ ಮೊದಲ ಹಂತಕ್ಕೆ ಚಾಲನೆ ದೊರೆಯಲಿದೆ ಎಂದೂ ಅವರು ಹೇಳಿದ್ದಾರೆ.
ಈ ಸಂಬಂಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಅವರು ಮೊದಲ ಹಂತದ ಆರಂಭಕ್ಕೂ ಮುನ್ನ ಗಣತಿದಾರರು ಮತ್ತು ಮೇಲ್ವಿಚಾರಕರ ನೇಮಕಾತಿ ಹಾಗೂ ಅವರಿಗೆ ಕೆಲಸದ ಹಂಚಿಕೆಯನ್ನು ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾಡಳಿತದ ಸಹಕಾರದೊಂದಿಗೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಎರಡು ಹಂತಗಳಲ್ಲಿ ಜನಗಣತಿ ನಡೆಯಲಿದ್ದು, ಮೊದಲ ಹಂತದಲ್ಲಿ ಮನೆ ಪಟ್ಟಿ ನಡೆಸಲಾಗುತ್ತದೆ. ಈ ಹಂತದಲ್ಲಿ ದೇಶದ ಪ್ರತಿಯೊಂದು ಕಟ್ಟಡಕ್ಕೆ ಭೇಟಿ ನೀಡಿ ಕಟ್ಟಡಗಳು ಮತ್ತು ಮನೆಗಳ ಗುಣಲಕ್ಷಣಗಳನ್ನು ದಾಖಲಿಸಲಾಗುತ್ತದೆ. ಪ್ರತಿ ಮನೆಯಲ್ಲಿರುವ ಸ್ವತ್ತುಗಳ ದತ್ತಾಂಶವನ್ನೂ ಸಂಗ್ರಹಿಸಲಾಗುತ್ತದೆ. ಎರಡನೇ ಹಂತದಲ್ಲಿ ಜನಸಂಖ್ಯಾ ಗಣತಿ ನಡೆಯಲಿದ್ದು, ಈ ಹಂತದಲ್ಲಿ ಪ್ರತಿಯೊಬ್ಬರ ವೈಯಕ್ತಿಕ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತದೆ ಎಂದಿದ್ದಾರೆ.
ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ಜನಗಣತಿಯ ಜತೆಗೆ ಜಾತಿ ಗಣತಿಯನ್ನೂ ನಡೆಸಲು ಕೇಂದ್ರ ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ.
ಜನಗಣತಿ ಪ್ರಕ್ರಿಯೆಗೆ 34 ಲಕ್ಷ ಗಣತಿದಾರರು ಮತ್ತು ಮೇಲ್ವಿಚಾರಕರು ಹಾಗೂ 1.3 ಲಕ್ಷ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ. ದೇಶದಲ್ಲಿ ಮೊದಲ ಡಿಜಿಟಲ್ ಜನಗಣತಿಯಾಗಲಿರುವ ಈ ಪ್ರಕ್ರಿಯೆಯು ನಾಗರಿಕರಿಗೆ ಸ್ವಯಂ-ಗಣತಿಗೆ ಒಳಪಡಲು ಅವಕಾಶ ನೀಡುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಜನಗಣತಿ ಪ್ರಕ್ರಿಯೆಗಾಗಿ ಎಲ್ಲ ಗ್ರಾಮಗಳು ಮತ್ತು ಪಟ್ಟಣಗಳನ್ನು ಏಕರೂಪದ ಬ್ಲಾಕ್ ಗಳಾಗಿ ವಿಂಗಡಿಸಲಾಗುತ್ತದೆ. ಎಣಿಕೆಯ ಸಮಯದಲ್ಲಿ ಲೋಪ ಅಥವಾ ಪುನರಾವರ್ತನೆ ಆಗುವುದನ್ನು ತಪ್ಪಿಸಲು ಪ್ರತಿ ಬ್ಲಾಕ್ಗೆ ಒಬ್ಬ ಗಣತಿದಾರರನ್ನು ನಿಯೋಜಿಸಲಾಗುತ್ತದೆ. ನಿಯಮಗಳ ಪ್ರಕಾರ ಜಿಲ್ಲೆಗಳು ಉಪ ವಿಭಾಗಗಳು ತಾಲ್ಲೂಕುಗಳು ಮತ್ತು ಪೊಲೀಸ್ ಠಾಣೆಗಳಂತಹ ಆಡಳಿತಾತ್ಮಕ ಪ್ರದೇಶಗಳ ಗಡಿ ಮಿತಿಗಳನ್ನು ಅಂತಿಮಗೊಳಿಸಿದ ಮೂರು ತಿಂಗಳ ನಂತರವೇ ಜನಗಣತಿ ನಡೆಸಬಹುದಾಗಿದೆ. ಜನಗಣತಿ ನಡೆಯುವ 2026ರ ಜ.1 ರಿಂದ 2027ರ ಮಾರ್ಚ್ 31ರ ವರೆಗೆ ಆಡಳಿತಾತ್ಮಕ ಪ್ರದೇಶಗಳ ಗಡಿಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಲಾಗಿದೆ.