ಹರಿಯಾಣ ಚುನಾವಣೆಯ ಉದಾಹರಣೆ ತೆಗೆದುಕೊಂಡರೆ, ಆಡಳಿತ ವಿರೋಧಿ ಅಲೆ, ಕಿಸಾನ್, ಜವಾನ್, ಪೈಲ್ವಾನ್ ರ ಅಸಮಾಧಾನವನ್ನು ಮಾತ್ರವೇ ಈ ಸಮೀಕ್ಷೆಗಳು ಪರಿಗಣಿಸಿ ಬಿಜೆಪಿಯ ಸೋಲನ್ನು ಊಹಿಸಿ ಕಾಂಗ್ರೆಸ್ ಗೆಲುವನ್ನು ಉತ್ಪ್ರೇಕ್ಷಿಸಿದ್ದವು. ಕಾಂಗ್ರೆಸ್ ಪಕ್ಷದಲ್ಲಿರುವ ಒಳಜಗಳ, ಮುಖ್ಯಮಂತ್ರಿಯಾಗಲು ಇದ್ದ ಪೈಪೋಟಿ, ಜಾತಿರಾಜಕಾರಣ, ಭೂಪೇಂದರ್ ಹೂಡಾರವರ ಫ್ಯೂಡಲ್ ಆಟಿಡ್ಯೂಡ್ ಗಳನ್ನು ಈ ಸಮೀಕ್ಷಾ ತಯಾರಕರು ಗಮನಿಸಲೇ ಇಲ್ಲ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಮತ್ತೊಮ್ಮೆ ಈ ಚುನಾವಣಾ ಮತಗಟ್ಟೆ ಸಮೀಕ್ಷೆಗಳು ಸುಳ್ಳೆಂದು ಸಾಬೀತಾಗಿದೆ. ಮತದಾನ ಪ್ರಕ್ರಿಯೆಯಲ್ಲಿ ಜನರ ನಾಡಿಬಡಿತ ಅರಿಯದ ಸಮೀಕ್ಷಾ ಏಜನ್ಸಿಗಳ ಅಂಕಿ ಅಂಶಗಳು ಚುನಾವಣಾ ಫಲಿತಾಂಶದ ಹತ್ತಿರಕ್ಕೂ ಬರದೇ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಲೇ ಬರುತ್ತಿವೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ 350 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸುತ್ತದೆ ಎಂದು ಬಹುತೇಕ ಎಲ್ಲಾ ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ಅಗಿದ್ದೇನು? ಬಿಜೆಪಿ ಪಕ್ಷ ಕನಿಷ್ಟ ಬಹುಮತವನ್ನೂ ಪಡೆಯುವಲ್ಲಿ ವಿಫಲವಾಗಿ ಕೇವಲ 240 ಸ್ಥಾನಗಳನ್ನು ಗಳಿಸಲಷ್ಟೇ ಸಾಧ್ಯವಾಯ್ತು. ಈಗ ಬೇರೆ ಪಕ್ಷದ ಮರ್ಜಿಯಲ್ಲಿ ಸರಕಾರ ನಡೆಸಬೇಕಾದ ಪರಿಸ್ಥಿತಿ ಮೋದಿಯವರದ್ದಾದರೆ, ಸುಳ್ಳು ಭವಿಷ್ಯ ಹೇಳಿದ್ದಕ್ಕೆ ಸಮೀಕ್ಷಾ ಸಂಸ್ಥೆಗಳು ಕನಿಷ್ಟ ಕ್ಷಮೆಯನ್ನೂ ಕೇಳಲಾರದ ದುಸ್ಥಿತಿಯಲ್ಲಿವೆ.
ಲೇಟೆಸ್ಟಾಗಿ ನಡೆದ ಹರಿಯಾಣ ರಾಜ್ಯದ ಚುನಾವಣಾ ಮತಗಟ್ಟೆಯ ಸಮೀಕ್ಷೆಗಳೆಲ್ಲವೂ ತಲೆಕೆಳಗಾಗಿವೆ. ಎಲೆಕ್ಷನ್ ರಿಸಲ್ಟ್ ಕುರಿತು ಭವಿಷ್ಯವಾಣಿ ಹೇಳುವ ಎಲ್ಲಾ ಸಮೀಕ್ಷೆಗಳೂ 90 ಸಂಖ್ಯಾಬಲದ ಹರಿಯಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ 50 ಕ್ಕೂ ಹೆಚ್ಚು ಸೀಟು ಗೆಲ್ಲುವುದು ಎಂದಿದ್ದವು. ಬಿಜೆಪಿ ಪಕ್ಷ 30 ರ ಗಡಿ ದಾಟಲಾರದು ಎಂದೂ ಪುಂಗಿದ್ದವು. ಆದರೆ ಆಗಿದ್ದು ಉಲ್ಟಾ ಪಲ್ಟಾ. ಬಿಜೆಪಿ ಹಿಂದಿನ ಎರಡೂ ವಿಧಾನಸಭೆಯಲ್ಲಿ ಗಳಿಸಿದ್ದಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಅಂದರೆ 48 ಸೀಟುಗಳನ್ನು ಗೆದ್ದಿತ್ತು. ಕಾಂಗ್ರೆಸ್ ಪಕ್ಷ 37 ಸ್ಥಾನಗಳನ್ನು ಮಾತ್ರ ಗೆದ್ದು ರಾಜ್ಯವಾಳುವ ಅಧಿಕಾರದಿಂದ ವಂಚಿತವಾಯ್ತು.
ಈ ಹಿಂದೆಯೂ ಸಹ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಎಂದು ಸಮೀಕ್ಷೆಗಳೆಲ್ಲಾ ಅಬ್ಬರಿಸಿದ್ದವು. ಆದರೆ ಬಿಜೆಪಿ ಪಕ್ಷವನ್ನು ಆಪ್ ಪಾರ್ಟಿಯ ಕಸಬರಿಕೆ ಸಾರಾಸಗಟಾಗಿ ಗುಡಿಸಿ ಹಾಕಿತ್ತು. ಜೊತೆಗೆ ಸಮೀಕ್ಷಾ ಏಜನ್ಸಿಗಳ ವಿಶ್ವಾಸಾರ್ಹತೆಯನ್ನೂ ಕುಂಠಿತ ಗೊಳಿಸಿತ್ತು.
ಯಾಕೆ ಹೀಗೆ? ಸಮೀಕ್ಷೆಗಳು ಎನ್ನುವುದೇ ಬೋಗಸ್ಸಾ? ಕ್ರೀಮಿ ಲೇಯರ್ ಸರ್ವೇಗಳಿಗೆ ಮಾತ್ರ ಸೀಮಿತವಾ? ಯಾವುದೋ ಅಂದಾಜಿನ ಮೇಲೆ ಸಮೀಕ್ಷೆ ಪ್ರಕಟಿಸುವುದು, ಫಲಿತಾಂಶಕ್ಕೆ ಹತ್ತಿರದ ಸಂಖ್ಯೆಗಳು ಬಂದರೆ ತಾವು ಹೇಳಿದ್ದೇ ಸತ್ಯ ವಾಕ್ಯವೆಂದು ಸಂಭ್ರಮಿಸೋದು. ಸಮೀಕ್ಷೆ ಸುಳ್ಳಾದರೆ ಕ್ಷಮೆ ಕೂಡಾ ಕೇಳದೇ ಮಾಯವಾಗೋದು. ಇದೇ ಈ ಮತಗಟ್ಟೆ ಭವಿಷ್ಯ ಹೇಳುವ ಗಿಳಿಶಾಸ್ತ್ರದವರ ತಂತ್ರಗಾರಿಕೆ.
ಇದಕ್ಕೆ ಸಮೀಕ್ಷಾ ಪ್ರವೀಣರೂ ಇದ್ದಾರೆ. ಪ್ರಶಾಂತ ಕಿಶೋರ್ ಎನ್ನುವಾತ ಯಾವ ಪಕ್ಷ ಗೆಲ್ಲಿಸಬೇಕು, ಯಾವ ಪಕ್ಷ ಗೆಲ್ಲುತ್ತದೆ ಎಂದು ಹೇಳುತ್ತಾ ಒಂದೆರಡು ಚುನಾವಣೆಯಲ್ಲಿ ಯಶಸ್ವಿಯಾದರೂ ತದನಂತರ ಅವರು ಸತತವಾಗಿ ವಿಫಲರಾಗಿದ್ದು ಇತಿಹಾಸ. ಕಳೆದ ಸಲದ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಸಮೀಕ್ಷೆಗಳು ಸುಳ್ಳಾದರೂ ಯೋಗೇಂದ್ರ ಯಾದವ್ ರವರು ಹೇಳಿದ ಮತಗಟ್ಟೆ ಭವಿಷ್ಯ ಮಾತ್ರ ಚುನಾವಣಾ ಫಲಿತಾಂಶಕ್ಕೆ ಹತ್ತಿರ ಇತ್ತು. ಹೀಗಾಗಿ ಈಗ ನಡೆದ ಹರಿಯಾಣದ ಚುನಾವಣೆಯಲ್ಲೂ ಯೋಗೇಂದ್ರರವರ ಭವಿಷ್ಯ ನಿಜವಾಗುತ್ತದೆ ಎಂದೇ ನಂಬಲಾಗಿತ್ತು. ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಸರಕಾರ ರಚಿಸುತ್ತದೆ ಎಂದು ಯೋಗೇಂದ್ರರವರು ಹೇಳಿದ ಭವಿಷ್ಯವನ್ನೇ ನಂಬಿದ ಬೇರೆಲ್ಲಾ ವೃತ್ತಿಪರ ಸಮೀಕ್ಷಾ ಏಜನ್ಸಿಗಳೂ ಅವರದೇ ಅಂಕಿ ಸಂಖ್ಯೆಗಳಲ್ಲಿ ಸ್ವಲ್ಪ ವ್ಯತ್ಯಾಸ ಮಾಡಿ ಫಲಿತಾಂಶದ ಭವಿಷ್ಯ ನುಡಿದಿದ್ದವು. ಮಾಧ್ಯಮಗಳೂ ಸಹ ಆ ಸಮೀಕ್ಷೆಗಳೇ ಸಾಕಾರವಾಗುತ್ತವೆ ಎಂಬಂತೆ ಪ್ರಚಾರ ಮಾಡಿದವು. ಜನರೂ ನಂಬಿದ್ದರು. ಕಾಂಗ್ರೆಸ್ ಪಕ್ಷವಂತೂ ಗೆದ್ದೇ ಬಿಟ್ಟಿದೆ ಎಂದು ಸಂಭ್ರಮಿಸಿತು. ಆದರೆ ಅಕ್ಟೋಬರ್ 8 ರಂದು ನಡೆದ ಮತದಾನದ ಎಣಿಕೆಯ ಫಲಿತಾಂಶ ಮಾತ್ರ ಏರುಪೇರಾಗಿತ್ತು. ಯೋಗೇಂದ್ರ ಯಾದವ್ ರವರ ಭವಿಷ್ಯವಾಣಿಯೂ ಸುಳ್ಳಾಗಿತ್ತು. ಬಾಕಿ ಎಲ್ಲಾ ಸಮೀಕ್ಷೆಗಳು ವಾಸ್ತವವನ್ನು ಅಂದಾಜಿಸುವಲ್ಲೂ ಸೋತಿದ್ದವು.
ಯಾಕೆ ಹೀಗಾಗುತ್ತದೆ? ಯಾಕೆ ಸಮೀಕ್ಷೆಗಳು ದಿಕ್ಕು ತಪ್ಪಿ ಬೇರೆಯವರ ದಿಕ್ಕನ್ನೂ ತಪ್ಪಿಸುತ್ತವೆ?. ಯಾಕೆಂದರೆ ಸಮೀಕ್ಷೆ ಮಾಡುವವರಿಗೆ, ಮಾಡಿಸುವವರಿಗೆ ಮತದಾರರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸ್ಯಾಂಪಲ್ ಸರ್ವೇಗಳು ಫಲನೀಡುತ್ತಿಲ್ಲ. ಸಮೀಕ್ಷೆಗಳು ಎಂಬುದು ವ್ಯಾಪಾರಿ ಸರಕಾಗಿದ್ದು ಯಾವುದೋ ಒಂದು ಪಕ್ಷದ ಪರ ಹೈಪ್ ಸೃಷ್ಟಿಸಲು ಬಳಕೆಯಾಗುತ್ತವೆ ಎಂಬ ಆರೋಪಗಳು ಕೇಳಿಬಂದಿವೆ.
ಹರಿಯಾಣ ಚುನಾವಣೆಯ ಉದಾಹರಣೆ ತೆಗೆದುಕೊಂಡರೆ, ಆಡಳಿತ ವಿರೋಧಿ ಅಲೆ, ಕಿಸಾನ್, ಜವಾನ್, ಪೈಲ್ವಾನ್ ರ ಅಸಮಾಧಾನವನ್ನು ಮಾತ್ರವೇ ಈ ಸಮೀಕ್ಷೆಗಳು ಪರಿಗಣಿಸಿ ಬಿಜೆಪಿಯ ಸೋಲನ್ನು ಊಹಿಸಿ ಕಾಂಗ್ರೆಸ್ ಗೆಲುವನ್ನು ಉತ್ಪ್ರೇಕ್ಷಿಸಿದ್ದವು. ಕಾಂಗ್ರೆಸ್ ಪಕ್ಷದಲ್ಲಿರುವ ಒಳಜಗಳ, ಮುಖ್ಯಮಂತ್ರಿಯಾಗಲು ಇದ್ದ ಪೈಪೋಟಿ, ಜಾತಿರಾಜಕಾರಣ, ಭೂಪೇಂದರ್ ಹೂಡಾರವರ ಫ್ಯೂಡಲ್ ಆಟಿಡ್ಯೂಡ್ ಗಳನ್ನು ಈ ಸಮೀಕ್ಷಾ ತಯಾರಕರು ಗಮನಿಸಲೇ ಇಲ್ಲ. ಫ್ಯಾಸಿಸ್ಟ್ ಬಿಜೆಪಿ ಹಾಗೂ ಫ್ಯೂಡಲ್ ಕಾಂಗ್ರೆಸ್ ನಾಯಕತ್ವದ ನಡುವಿನ ಚುನಾವಣಾ ಕದನದಲ್ಲಿ ಆರ್ಗನೈಜ್ಡ್ ಫ್ಯಾಸಿಸ್ಟರು ಗೆಲ್ಲುವ ಸಾಧ್ಯತೆಯನ್ನು ಈ ಮತಗಟ್ಟೆ ಭವಿಷ್ಯಕಾರರು ಮರೆತೇ ಬಿಟ್ಟರು. ಹೀಗಾಗಿ ಫ್ಯೂಡಲ್ ವ್ಯವಸ್ಥೆಯ ವಿರುದ್ಧ ತಿರುಗಿಬಿದ್ದ ಹಿಂದುಳಿದ ಜಾತಿ ಹಾಗೂ ದಲಿತ ಸಮುದಾಯದವರು ಫ್ಯಾಸಿಸ್ಟರತ್ತ ತಮ್ಮ ಒಲವು ತೋರಿದರು. ಗೆದ್ದೇ ಗೆಲ್ಲುತ್ತೇವೆ ಎಂಬ ಭಾರೀ ವಿಶ್ವಾಸದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದರು.
ಹರಿಯಾಣದಲ್ಲಿ ಪಾಳೇಗಾರಿಕೆ ನಡೆಸುವ ಪ್ರಬಲ ಸಮುದಾಯ ಜಾಟ್. ಯಾವಾಗಲೂ ದಲಿತ ಹಿಂದುಳಿದ ಸಮುದಾಯದ ಮೇಲೆ ದಬ್ಬಾಳಿಕೆ ಮಾಡಿಕೊಂಡೇ ಬಂದಿರುವ ಈ ಫ್ಯೂಡಲ್ ಜಾತಿಯವರು ಈ ಸಲ ಕಾಂಗ್ರೆಸ್ ಬೆನ್ನಿಗೆ ನಿಂತರು. ರೈತರ ಆಂದೋಲನವನ್ನೂ ಮುನ್ನಡೆಸಿದವರಲ್ಲಿ ಜಾಟ್ ಜಾತಿಯ ನಾಯಕರೇ ಮುಂಚೂಣಿಯಲ್ಲಿದ್ದವರು. ಈ ಸಲದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತಿರುಗಿ ಬಿದ್ದ ಜಾಟ್ ಸಮುದಾಯ ಬಿಜೆಪಿಗರನ್ನು ಮತಯಾಚಿಸಲು ಊರು ಕೇರಿಗಳ ಒಳಗೂ ಬಿಡಲಿಲ್ಲ. ಇದರಿಂದಾಗಿ ಮೇಲ್ನೋಟಕ್ಕೆ ಸಮೀಕ್ಷಾಕಾರರಿಗೆ ಬಿಜೆಪಿ ಪಕ್ಷಕ್ಕೆ ಗ್ರಾಮೀಣ ಪ್ರದೇಶದಲ್ಲಿ ಬೆಂಬಲ ಇಲ್ಲ ಎಂದೇ ಅನ್ನಿಸಿತು. ಆದರೆ ಅಲ್ಲಿ ಆಗಿದ್ದೇ ಬೇರೆ.
ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಭೂಪಿಂದರ್ ಸಿಂಗ್ ಹೂಡಾ ಜಾಟ್ ಜಾತಿಯ ನಾಯಕ. ಗ್ರಾಮಗ್ರಾಮಗಳಲ್ಲಿ ಭೂ ಒಡೆತನ ಹೊಂದಿದ ಪ್ರಭಾವಿ ಸಮುದಾಯ ಜಾಟ್ ಜಾತಿಯವರದ್ದು. ಕಾಂಗ್ರೆಸ್ ಏನಾದರೂ ಅಧಿಕಾರಕ್ಕೆ ಬಂದರೆ ಈ ಜಾಟ್ ಸಮುದಾಯದವರ ಪ್ರಾಬಲ್ಯ ಇನ್ನೂ ಜಾಸ್ತಿಯಾಗಿ ತಮ್ಮ ಮೇಲೆ ಜಾತಿ ದೌರ್ಜನ್ಯ ಅತಿಯಾಗುತ್ತದೆ ಎಂದು ನಂಬಿದ ಅನ್ಯ ಜಾತಿಯ ಬಹುತೇಕ ಮತದಾರರು ಅನಿವಾರ್ಯವಾಗಿ ಬಿಜೆಪಿಗೆ ಮತ ಚಲಾಯಿಸಿ ಫ್ಯೂಡಲ್ ಸಮುದಾಯದ ಮೇಲಿರುವ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದರು. ಹೂಡಾ ಎನ್ನುವ ಪಾಳೆಗಾರನನ್ನು ಪಕ್ಕಕ್ಕಿಟ್ಟು ಹಿಂದುಳಿದ ಜಾತಿಯ ನಾಯಕರನ್ನೋ ಇಲಗಲಾ ದಲಿತ ಸಮುದಾಯದ ನಾಯಕಿ ಸೆಲ್ಜಾ ರವರನ್ನೋ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕಾಂಗ್ರೆಸ್ ಹೈಕಮಾಂಡ್ ಘೋಷಿಸಿ, ಜಾತಿ ಸಮೀಕರಣ ಮಾಡಿ ಉತ್ತಮ ಕ್ಯಾಂಡಿಡೇಟ್ ಗಳನ್ನು ಹಾಕಿದ್ದರೆ ಕಾಂಗ್ರೆಸ್ ಗೆಲುವು ಸಾಧ್ಯವಾಗುತ್ತಿತ್ತು.
ಈ ಅಂಶಗಳತ್ತ ಸಮೀಕ್ಷಾ ಪಂಡಿತರು ಗಮನ ಹರಿಸಿದ್ದರೆ, ಜಾಟ್ ಪ್ರಾಬಲ್ಯದ ವಿರುದ್ದ ಕೆಳವರ್ಗದವರಲ್ಲಿರುವ ಅಸಹನೆಯನ್ನು ಗುರುತಿಸಿದ್ದರೆ ಬಿಜೆಪಿ ಗೆಲುವನ್ನು ಊಹಿಸಬಹುದಾಗಿತ್ತು. ಆದರೆ ಕೇವಲ ಮೇಲ್ಪದರ ಸರ್ವೇಗಳು ಹಾಗೂ ಆಡಳಿತ ವಿರೋಧಿ ಅಲೆಯೆಂಬ ಊಹಾಪೋಹಗಳು ಸಮೀಕ್ಷೆಯ ದಿಕ್ಕನ್ನೇ ತಪ್ಪಿಸಿದವು. ಕಾಂಗ್ರೆಸ್ಸನ್ನು ಮೇಲಕ್ಕೆತ್ತಿ ಕೆಳಕ್ಕೆ ಬಿಸಾಡಿದವು. ಮತಗಟ್ಟೆ ಸಮೀಕ್ಷೆಗಳನ್ನು ನಂಬುವ ಜನರಲ್ಲಿ ನಿರಾಸೆಯನ್ನು ಮೂಡಿಸಿದವು. ಕೊನೆಗೆ ಚುನಾವಣೆಯಿಂದ ಚುನಾವಣೆಗೆ ಸಮೀಕ್ಷೆಗಳೇ ನಗೆಪಾಟಲಿಗೆ ಈಡಾಗಿ ತಮ್ಮ ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡವು.
ಮತದಾನ ಪೂರ್ವ ಚುನಾವಣಾ ಸಮೀಕ್ಷೆಗಳನ್ನು ಮಾಡುವುದನ್ನೇ ಸುಪ್ರೀಂ ಕೋರ್ಟ್ ನಿರ್ಬಂಧಿಸಿದಂತೆ ಮತದಾನೋತ್ತರ ಸಮೀಕ್ಷೆಗಳನ್ನೂ ನಿಷೇಧಿಸುವುದು ಉತ್ತಮ. ಯಾಕೆಂದರೆ ಕಳೆದ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ 350 ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ಖಚಿತ ಎಂದು ಬಹುತೇಕ ಸಮೀಕ್ಷೆಗಳು ಹೇಳಿದ್ದವು. ಇಷ್ಟೆಲ್ಲಾ ಪಂಡಿತೋತ್ತಮರು ಹೇಳುತ್ತಿರುವುದರಿಂದ ಮೋದಿ ಪಟಾಲಂ ಘೋಷಿಸಿದಂತೆ ಅಬ್ ಕಿ ಬಾರ್ ಚಾರ್ ಸೌ ಪಾರ್ ಆಗಬಹುದು ಎಂದೇ ಬಹುತೇಕರು ನಂಬಿದ್ದರು. ಇದರಿಂದಾಗಿ ಚುನಾವಣಾ ಬೆಟ್ಟಿಂಗ್ ದಂಧೆ ಬಿಜೆಪಿ ಪರವಾಗಿತ್ತು. ಸಟ್ಟಾ ಬಜಾರ್ ನಲ್ಲೂ ಬಿಜೆಪಿ ಹವಾ ಜೋರಾಗಿತ್ತು. ಶೇರು ಮಾರುಕಟ್ಟೆ ಏರಿಕೆಯಾಗಿತ್ತು. ಆದರೆ ಯಾವಾಗ ಬಿಜೆಪಿ ಪಕ್ಷಕ್ಕೆ ಬಹುಮತ ಸಿಕ್ಕಲಿಲ್ಲವೋ, ವಿಶ್ವಾಸಕ್ಕೆ ಅರ್ಹರಲ್ಲದ ಬೇರೆ ಪಕ್ಷದ ಜೊತೆ ಸರಕಾರ ರಚಿಸುವ ಅನಿವಾರ್ಯತೆ ಮೋದಿಯವರದ್ದಾಯ್ತೊ ಆಗ ಶೇರು ಮಾರುಕಟ್ಟೆ ಧರಾಶಾಹಿಯಾಯ್ತು. ಹತ್ತಾರು ಲಕ್ಷ ಕೋಟಿ ಹೂಡಿಕೆದಾರರ ಹಣ ನಷ್ಟವಾಯ್ತು. ಬೆಟ್ಟಿಂಗ್ ನಲ್ಲಿ ಸೋತವರ ಸಂಖ್ಯೆ ಹೆಚ್ಚಾಯಿತು. ಇದಕ್ಕೆಲ್ಲಾ ಸಮೀಕ್ಷೆಗಳೆಂಬ ಸುಳ್ಳು ಅಂಕಿ ಅಂಶಗಳೇ ಕಾರಣವಾಗಿದ್ದವು.
ಯಾವುದೇ ಚುನಾವಣೆ ಇರಲಿ, ಈ ಬೆಟ್ಟಿಂಗ್ ದಂಧೆ ಅವ್ಯಾಹತವಾಗಿ ನಡೆಯುತ್ತದೆ. ಸಮೀಕ್ಷೆಗಳನ್ನು ನಂಬಿದ ಜನ ಬೆಟ್ಟಿಂಗ್ ಕಟ್ಟುತ್ತಾರೆ. ಸಮೀಕ್ಷೆಗಳು ಹುಸಿಯಾದಾಗ ನಷ್ಟ ಅನುಭವಿಸುತ್ತಾರೆ. ಇಷ್ಟೆಲ್ಲಾ ತೊಂದರೆಗೆ ಕಾರಣವಾಗುವ ಮತದಾನೋತ್ತರ ಸಮೀಕ್ಷೆಗಳನ್ನೇ ಬ್ಯಾನ್ ಮಾಡುವುದು ದೇಶವಾಸಿಗಳ ಆರ್ಥಿಕ ಹಾಗೂ ಸಾಮಾಜಿಕ ಕಳಕಳಿಯ ದೃಷ್ಟಿಯಿಂದ ಒಳ್ಳೆಯ ನಿರ್ಧಾರವಾಗಬಹುದು. ಸುಪ್ರೀಂ ಕೋರ್ಟ್ ಈ ನಿಟ್ಟಿನತ್ತ ಗಮನ ಹರಿಸಬೇಕಿದೆ. ಜನರೂ ಸಹ ಸಮೀಕ್ಷೆಗಳನ್ನು ನಂಬದೇ ಫಲಿತಾಂಶ ಬರುವವರೆಗೂ ಕಾಯಬೇಕಿದೆ. ಯಾವುದೇ ಪಕ್ಷ ಗೆಲ್ಲಲಿ ಇಲ್ಲ ಸೋಲಲಿ, ಜನರು ನಷ್ಟ ಅನುಭವಿಸದೇ ಇರಲಿ. ಸುಳ್ಳು ಸಮೀಕ್ಷೆಗಳಿಂದ ನಂಬಿಕೆ ದ್ರೋಹ ಆಗದೇ ಇರಲಿ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ವಕ್ಫ್ ಆಸ್ತಿಯ ಹಿನ್ನೆಲೆ ಮತ್ತು ಕಾನೂನು