Saturday, May 18, 2024

ಅಯೋಧ್ಯೆ ವಿಷಯದಲ್ಲಿ ಮೋದಿ ರಾಜಕೀಯ ಮಾಡಿದ್ದಾರೆ ಎಂದರೆ ಗ್ಯಾರಂಟಿಗಳ ಹೆಸರಿನಲ್ಲಿ ಕಾಂಗ್ರೆಸ್ ಮಾಡಿದ್ದೇನು? : HDK ಪ್ರಶ್ನೆ

Most read

ಬೆಂಗಳೂರು: ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ರಾಮಮಂದಿರ ಕಟ್ಟಿದ್ದು ಜನರ ದೇಣಿಗೆಯ ಹಣದಿಂದ. ಸಿದ್ದರಾಮಯ್ಯ ಅವರ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದ್ದು ಜನರ ತೆರಿಗೆ ಹಣದಿಂದ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಯೋಧ್ಯೆ ವಿಚಾರದಲ್ಲಿ ಮೋದಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಆದರೆ, ಇವರು ಗ್ಯಾರಂಟಿಗಳ ವಿಷಯದಲ್ಲಿ ಮಾಡಿದ್ದೇನು? ರಾಜಕೀಯವನ್ನೇ ಮಾಡಿದರು, ಅಲ್ಲವೇ? ಎಂದರು.

ನಾನು ಕೂಡ ಹಿಂದೆ ಮಂದಿರಕ್ಕೆ ಹಣ ಸಂಗ್ರಹ ಮಾಡಿರುವ ಬಗ್ಗೆ ಲೆಕ್ಕ ಕೇಳಿದ್ದೇನೆ. ರಾಮನ ಬಗ್ಗೆ ನಂಬಿಕೆ ಇರಿಸಿರಿಕೊಂಡಿರುವ ಕುಟುಂಬಗಳು ದೇಣಿಗೆ ಕೊಟ್ಟಿದ್ದಾರೆ. ಇವರು ರಾಜ್ಯದಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಬೇಕಾದರೆ, ಅವುಗಳನ್ನು ಜಾರಿ ಮಾಡಿದ ಸಂದರ್ಭದಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಕರೆಸಿ ಕಾರ್ಯಕ್ರಮ ಮಾಡಬಹುದಾ? ಅವರಿಗೂ ರಾಜ್ಯಕ್ಕೂ ಏನು ಸಂಬಂಧ? ಗ್ಯಾರಂಟಿಗಳ ಹಣ ಕಾಂಗ್ರೆಸ್ ಪಕ್ಷದ ಖಜಾನೆಯದ್ದಾ? ಅದು ಜನರ ತೆರಿಗೆ ಹಣ. ಜನರ ದುಡ್ಡಿನಲ್ಲಿ ಇವರು ರಾಜಕೀಯ ಮಾಡಬಹುದಾದರೆ, ಮೋದಿ ಅವರು ಮಾಡಬಾರದ? ಎಂದು ಮಾಜಿ ಮುಖ್ಯಮಂತ್ರಿಗಳು ಖಾರವಾಗಿ ಪ್ರಶ್ನಿಸಿದರು.

ಮೋದಿ ಮತ್ತೆ ಪ್ರಧಾನಿ ಆದರೆ ಸರ್ವಾಧಿಕಾರಿ ಆಡಳಿತ ಬರುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಅವರ ಹತಾಶೆಯನ್ನು ಸೂಚಿಸುತ್ತದೆ. ಬಹುಶಃ ಖರ್ಗೆ ಅವರಿಗೆ ಕನಸಿನಲ್ಲಿ ಅಂಬೇಡ್ಕರ್ ಅವರು ಬಂದು ಹೇಳಿರಬೇಕು ಎಂದ ಕುಮಾರಸ್ವಾಮಿ ಅವರು ಟೀಕಿಸಿದ್ದಾರೆ.

More articles

Latest article