Sunday, September 8, 2024

ಊಹಾಪೋಹ ಹರಡಬೇಡಿ: ಮಾಧ್ಯಮಗಳಿಗೆ ಪೊಲೀಸ್ ಕಮಿಷನರ್ ಎಚ್ಚರಿಕೆ

Most read

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಸೂಕ್ಷ್ಮತೆ ಮತ್ತು ಭದ್ರತೆ ದೃಷ್ಟಿಯಿಂದ ಮಾಧ್ಯಮಗಳು ಊಹಾಪೋಹದ ವರದಿಗಳನ್ನು ಹರಡಬಾರದು ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಎಚ್ಚರಿಕೆ ನೀಡಿದ್ದಾರೆ.

ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಭರದಿಂದ ಸಾಗುತ್ತಿದೆ. ಈಗಾಗಲೇ ಮಾಹಿತಿಗಳನ್ನಾಧರಿಸಿ ಹಲವು ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಇಂಥ ಸಂದರ್ಭದಲ್ಲಿ ಮಾಧ್ಯಮಗಳು ತನಿಖೆಗೆ ಸಹಕರಿಸಬೇಕು ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಿನ್ನೆ ಮಧ್ಯಾಹ್ನ ಎಚ್.ಎ.ಎಲ್ ಠಾಣಾ ವ್ಯಾಪ್ತಿಯ ರಾಮೇಶ್ವರಂ‌ ಕೆಫೆ ಎಂಬ ಹೋಟೆಲ್ ನಲ್ಲಿ ಸುಧಾರಿತ ಸ್ಫೋಟಕ ಸಿಡಿದ ಪರಿಣಾಮವಾಗಿ ಹತ್ತು ಮಂದಿ ಗಾಯಗೊಂಡಿದ್ದರು. ಗಾಯಗೊಂಡವರೆಲ್ಲರೂ ಅಪಾಯದಿಂದ ಪಾರಾಗಿದ್ದು, ಪೊಲೀಸರು ಬಾಂಬ್ ಇಟ್ಟು ಹೋದ ಆರೋಪಿಗಾಗಿ ಜಾಲಾಡುತ್ತಿದ್ದಾರೆ.

ಈ‌ ನಡುವೆ ಮಾಧ್ಯಮಗಳಲ್ಲಿ, ಅದರಲ್ಲೂ ವಿಶೇಷವಾಗಿ ಟೀವಿ ಮಾಧ್ಯಮಗಳಲ್ಲಿ ಅನೇಕ ಅತಿರಂಜಿತ, ಕಪೋಲಕಲ್ಪಿತ ವರದಿಗಳು ಪ್ರಸಾರವಾಗುತ್ತಿದ್ದು, ಜನರಲ್ಲಿ ಭೀತಿಯ ವಾತಾವರಣವನ್ನು ಮೂಡಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಕಮಿಷನರ್ ಸೂಚನೆ ಮಹತ್ವ ಪಡೆದಿದೆ.

ಕಮಿಷನರ್ ಪೋಸ್ಟ್ ಗೆ ಹಲವರು ಕಮೆಂಟ್ ಮಾಡಿದ್ದು, ‘ಬೆಂಗಳೂರು ಪೊಲೀಸರ ಮೇಲೆ ನಮಗೆ ನಂಬಿಕೆ ಇದೆ’ ಎಂದು ಸಾಫ್ಟ್ ವೇರ್ ಇಂಜಿನಿಯರ್ ಶಿವಾನಂದ ಗುಂಡಾನವರ ಪೋಸ್ಟ್ ಮಾಡಿದ್ದಾರೆ.

ತನಿಖೆಯ ಕುರಿತು ಕೆಳಹಂತದ ಪೊಲೀಸ್ ಅಧಿಕಾರಿಗಳು ತಮ್ಮ ಮಾಧ್ಯಮ ಮಿತ್ರರಿಗೆ ಮಾಹಿತಿ ಸೋರಿಕೆ ಮಾಡದಂತೆ ಸೂಚನೆ ನೀಡಿ.‌ ಅದರಿಂದ ಸಾಕಷ್ಟು ಅನುಕೂಲವಾಗುತ್ತದೆ ಎಂದು ಅನಿಲ್ ಬುಡೂರ್ ಎಂಬುವವರು ಕಮೆಂಟ್ ಮಾಡಿದ್ದಾರೆ.

More articles

Latest article