Saturday, July 27, 2024

ಜಾಮನಗರ ಏರ್ಪೋರ್ಟ್ ಗೆ ಅಂತಾರಾಷ್ಟ್ರೀಯ ದರ್ಜೆ! ಅಂಬಾನಿ ಮಗನ ಮದುವೆ ಪೂರ್ವ ಸಂಭ್ರಮಕ್ಕಾಗಿ ಮೋದಿ ಸರ್ಕಾರದ ಗಿಫ್ಟ್!

Most read

ಜಾಮನಗರ: ಹತ್ತು ದಿನಗಳ ಕಾಲ ಇಲ್ಲಿನ ಭಾರತ ವಾಯುಸೇನೆಗೆ ಸೇರಿದ ವಿಮಾನ ನಿಲ್ದಾಣವನ್ನು ಮುಖೇಶ್ ಅಂಬಾನಿ ಮಗನ ಮದುವೆ ಪೂರ್ವದ ಕಾರ್ಯಕ್ರಮಗಳಿಗಾಗಿ ಅಂತಾರಾಷ್ಟ್ರೀಯ ದರ್ಜೆಗೆ ಏರಿಸಲಾಗಿರುವುದು ಹಲವು ಗಂಭೀರ ಪ್ರಶ್ನೆಗಳಿಗೆ ಕಾರಣವಾಗಿದೆ.

ಫೆಬ್ರವರಿ 25ರಿಂದಲೇ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ದರ್ಜೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ಮಾ.5ರವರೆಗೆ ಈ ಸೌಲಭ್ಯವನ್ನು ಅನುಭವಿಸಲಿದೆ. ಹತ್ತು ದಿನಗಳ ಕಾಲ ಜಾಮ್ನಗರ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ದರ್ಜೆಗೆ ಏರಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಗೃಹ ಸಚಿವಾಲಯ, ಆರೋಗ್ಯ ಸಚಿವಾಲಯ, ಹಣಕಾಸು ಸಚಿವಾಲಯಗಳು ಅಧಿಕಾರಿಗಳು ಹಗಲಿರುಳು ಶ್ರಮಿಸಿರುವುದು ಬೆಳಕಿಗೆ ಬಂದಿದೆ.

ಜಾಮನಗರ ವಿಮಾನ ನಿಲ್ದಾಣದಲ್ಲಿಕಸ್ಟಮ್, ಇಮಿಗ್ರೇಷನ್ ಹಾಗು ಕ್ವಾರಂಟೈನ್ ಸೌಲಭ್ಯಗಳನ್ನು ಕಲ್ಪಿಸಲು ಹಗಲಿರುಳು ಶ್ರಮವಹಿಸಿದೆ.

ಜಾಮ್ನಗರ್ ವಿಮಾನ ನಿಲ್ದಾಣ ರಕ್ಷಣಾ ಇಲಾಖೆಗೆ ಸೇರಿದ್ದು, ಇದರಲ್ಲಿ ವಾಣಿಜ್ಯ ವಿಮಾನಗಳ ಹಾರಾಟಕ್ಕೂ ಅನುಮತಿ ಇದೆ. ಆದರೆ ಅಂಬಾನಿ ಮಗನ ಮದುವೆ ಪೂರ್ವದ ಕಾರ್ಯಕ್ರಮಗಳಿಗೆ ವಿದೇಶಿ ಗಣ್ಯರನ್ನು ಬರಮಾಡಿಕೊಳ್ಳುವ ಸಲುವಾಗಿ ಇದಕ್ಕೆ ತಾತ್ಕಾಲಿಕವಾಗಿ ಅಂತರಾಷ್ಟ್ರೀಯ ದರ್ಜೆಯನ್ನು ನೀಡಲಾಗಿದೆ.

ಮುಖೇಶ್ ಅಂಬಾನಿ ಪುತ್ರನ ಮದುವೆ ಪೂರ್ವದ ಕಾರ್ಯಕ್ರಮಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಅತಿಗಣ್ಯರಾದ ಬಿಲ್ ಗೇಟ್ಸ್, ಮಾರ್ಕ್ ಜುಕರ್ ಬರ್ಗ್, ರಿಹಾನ್ನಾ, ಇವಾಂಕಾ ಟ್ರಂಪ್, ಹಲವು ದೇಶಗಳ ಮಾಜಿ ಪ್ರಧಾನಿಗಳು ಸೇರಿದಂತೆ ನೂರಾರು ಅತಿಗಣ್ಯ ಅತಿಥಿಗಳು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಡಿಫೆನ್ಸ್ ಏರ್ಪೋರ್ಟ್ ಅನ್ನು ಇಂಟರ್ ನ್ಯಾಷನಲ್ ಏರ್ಪೋರ್ಟ್ ಮಾಡಿದೆ.

ವಿಮಾನ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ಕಸ್ಟಮ್, ಇಮಿಗ್ರೇಷನ್ ಮತ್ತು ಕ್ವಾರಂಟೈನ್ ಸೌಕರ್ಯಗಳನ್ನು ಕಲ್ಪಿಸಲಾಗಿದ್ದು, ಇದಕ್ಕಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಗಲಿರುಳು ಶ್ರಮಿಸಿದ್ದಾರೆ.

ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಈಗಾಗಲೇ ಜಾಮ್ನಗರ್ ನಲ್ಲಿ ವಾಣಿಜ್ಯ ವಿಮಾನಗಳ ಓಡಾಟವನ್ನು ಆರಂಭಿಸಿತ್ತು. ಆಶ್ಚರ್ಯಕರ ವಿದ್ಯಮಾನವೆಂದರೆ ಭಾರತೀಯ ವಾಯುಸೇನೆ ತನ್ನ ಅತಿಸೂಕ್ಷ್ಮ ತಾಂತ್ರಿಕ ಸ್ಥಳಗಳನ್ನು ತಾತ್ಕಾಲಿಕವಾಗಿ ಬಿಟ್ಟುಕೊಟ್ಟಿದೆ ಎಂದು ʻದಿ ಹಿಂದೂʼ ವರದಿ ಮಾಡಿದೆ. ಈ ವರದಿಯ ಪ್ರಕಾರ ತಾಂತ್ರಿಕ ಸ್ಥಳಗಳಲ್ಲಿ ಮೂರು ವಿಮಾನಗಳಿಗೆ ಏಕಕಾಲಕ್ಕೆ ಅವಕಾಶ ಕಲ್ಪಿಸಲಾಗಿರುವುದು ಐಎಎಫ್ ಅಧಿಕಾರಿ ಒಪ್ಪಿಕೊಂಡಿದ್ದಾರೆ.

ರಿಯಲನ್ಸ್ ಸಂಸ್ಥೆಯ ಒಡೆಯ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿಯ ಮದುವೆ ಉದ್ಯಮಿ ವಿರೇನ್ ಮರ್ಚೆಂಟ್ ಪುತ್ರಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ಇದೇ ವರ್ಷ ಜುಲೈ 12ರಂದು ನಡೆಯಲಿದ್ದು, ವಿವಾಹಪೂರ್ವದ ಕಾರ್ಯಕ್ರಮಗಳು ಮಾ.5ರವರೆಗೆ ನಡೆಯಲಿದೆ.

ಒಬ್ಬ ಉದ್ಯಮಿಯ ಮಗನ ಮದುವೆಯಂಥ ಖಾಸಗಿ ಕಾರ್ಯಕ್ರಮಕ್ಕಾಗಿ ರಕ್ಷಣಾ ಸಚಿವಾಲಯ ತನ್ನ ಸೂಕ್ಷ್ಮ ಪ್ರದೇಶಗಳನ್ನು ಬಿಟ್ಟುಕೊಟ್ಟಿದ್ದು ಎಷ್ಟು ಸರಿ? ಇದಕ್ಕಾಗಿ ಒಂದು ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಸರ್ಕಾರ ಏರಿಸಬೇಕಿತ್ತಾ? ಸುಮಾರು ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಅಂಬಾನಿ ಪುತ್ರನ ಮದುವೆಗೆ ಕೇಂದ್ರ ಸರ್ಕಾರ ಇಷ್ಟೆಲ್ಲ ಮುತುವರ್ಜಿ ವಹಿಸಬೇಕಿತ್ತಾ ಎಂಬ ಪ್ರಶ್ನೆಗಳು ಈಗ ಉದ್ಭವಿಸಿವೆ.

More articles

Latest article