ಬೆಳಗಾವಿ : ನಾವು ಸಹ ಕನ್ನಡಿಗರೇ ಇದ್ದೀವಿ. ಸಣ್ಣ ಜಗಳವನ್ನು ಕನ್ನಡ-ಮರಾಠಿ ಅಂತ ಮಾಡಲಾಗ್ತಿದೆ. ಕಂಡಕ್ಟರ್ ಮಹಾದೇವಪ್ಪ ಮೇಲೆ ದಾಖಲು ಮಾಡಿದ್ದ ಪೋಕ್ಸೋ ಕೇಸ್ ಅನ್ನು ವಾಪಸ್ ಪಡೆಯುತ್ತಿದ್ದೇವೆ ಎಂದು ಬಸ್ ಕಂಡಕ್ಟರ್ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿರುವ ದೂರುದಾರೆಯ ತಾಯಿ ಹೇಳಿದ್ದಾರೆ.
ಕರವೇ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರು ಬೆಳಗಾವಿಗೆ ಹೋದ ಬೆನ್ನಲ್ಲೇ ದೂರುದಾರೆಯ ತಾಯಿ ಮಾಧ್ಯಮದವರಿಗೆ ಈ ಹೇಳಿಕೆ ಕೊಟ್ಟಿದ್ದಾರೆ.
ಭಾಷೆಯ ವಿಚಾರವಾಗಿ ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಮರಾಠಿ ಯುವಕರು ಹಲ್ಲೆ ಮಾಡಿದ್ದರು. ಈ ಹಲ್ಲೆಯ ವಿಷಯವಾಗಿ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಬಿಗುವಿನ ವಾತವರಣ ಸೃಷ್ಟಿಯಾಗಿತ್ತು.
ಕನ್ನಡಿಗ ಕಂಡಕ್ಟರ್ ಮೇಲೆ ನಡೆದ ದಬ್ಬಾಳಿಕೆಯನ್ನು ಮತ್ತು ಹಲ್ಲೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿತ್ತು.
ಕೇಸ್ ವಾಪಸ್ ಪಡೆದ ತಕ್ಷಣ ಕಂಡಕ್ಟರ್ ಮಹಾದೇವಪ್ಪ ಸತ್ಯಕ್ಕೆ ಜಯವಾಗಿದೆ ಎಂದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು “ನನ್ನ ಸರ್ವೀಸ್ ನಲ್ಲಿ ಎಂದೂ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿಲ್ಲ. ಆ ಬಾಲಕಿಯ ಕುಟುಂಬಸ್ಥರು ನನಗೆ ಪರಿಚಯ. ಕೆಲವರ ಮಾತು ಕೇಳಿ ಪೋಕ್ಸೋ ಕೇಸ್ ದಾಖಲಿಸಿದ್ದರು”. ಎಂದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮಹದೇವಪ್ಪ ಹೇಳಿದರು.