ಇಂಫಾಲ್: ಕಳೆದ 2 ವರ್ಷಗಳಿಂದ ಸಂಘರ್ಷ ಭುಗಿಲೆದ್ದಿರುವ ಮಣಿಪುರಕ್ಕೆ ಇದೇ ಮೊದಲ ಬಾರಿಗೆ ಸೆಪ್ಟೆಂಬರ್ 13 ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದು, ಅವರ ಭವ್ಯ ಸ್ವಾಗತ ಸಮಾರಂಭದಲ್ಲಿ ಹಾಡಿ ನರ್ತಿಸಲು ಕುಕಿ-ಜೋ ಸಮುದಾಯ ನಿರಾಕರಿಸಿದೆ.
ಮಣಿಪುರದಲ್ಲಿ ಮೇ 2023 ರಲ್ಲಿ ಸಂಘರ್ಷ ಭುಗಿಲೆದ್ದಿದ್ದು, ಇದುವರೆಗೂ ಪ್ರಧಾನಿ ಮೋದಿ ಕಣಿವೆ ರಾಜ್ಯಕ್ಕೆ ಭೇಟಿ ನೀಡಿರಲಿಲ್ಲ.
ಪ್ರಧಾನಿ ಮೋದಿ ಅವರು ಸ್ವಾಗತ ಸಮಾರಂಭದಲ್ಲಿ ಭಾಗವಹಿಸುವ ಬದಲಾಗಿ ಜನಾಂಗೀಯ ಹಿಂಸಾಚಾರ ಪೀಡಿತರೊಂದಿಗೆ ಮಾತುಕತೆ ನಡೆಸಬೇಕು ಎಂದು ಇಂಫಾಲ್ ಹಮರ್ ನಿರಾಶ್ರಿತ ಸಮಿತಿ ಒತ್ತಾಯಿಸಿದೆ.
ಇದೇ ಸಮುದಾಯದ ಚುರಾಚಂದ್ ಪುರ ಜಿಲ್ಲೆಯ ಗ್ಯಾಂಗ್ಟೆ ವಿದ್ಯಾರ್ಥಿ ಸಂಘಟನೆಯು, ಪ್ರಧಾನಿಗಳ ಭೇಟಿಯನ್ನು ಸ್ವಾಗತಿಸುವುದಾಗಿ ಹೇಳಿದೆ. ಆದರೆ ನಾವು ನಮ್ಮ ಕಣ್ಣುಗಳಲ್ಲಿ ಇನ್ನೂ ನೀರು ಬತ್ತಿ ಹೋಗಿಲ್ಲ. ಕಣ್ಣೀರಿನೊಂದಿಗೆ ನೃತ್ಯ ಮಾಡಲು ಸಾಧ್ಯವಿಲ್ಲ. ನಮ್ಮ ಶೋಕ ಕೊನೆಗೊಂಡಿಲ್ಲ. ನಮ್ಮ ಗಾಯಗಳು ಇನ್ನೂ ಒಣಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಸಂತೋಷದಿಂದ ನೃತ್ಯ ಮಾಡಲು ಸಾಧ್ಯವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕುಕಿ ಸಮುದಾಯದ ಪ್ರಮುಖ ಸಂಘಟನೆಯಾದ ಕುಕಿ ಇನ್ಪಿ ಮಣಿಪುರ, ಪ್ರಧಾನಿ ಮೋದಿ ಅವರನ್ನು ರಾಜ್ಯಕ್ಕೆ ಸ್ವಾಗತಿಸುತ್ತೇವೆ. ಆದರೆ ಈ ಭೇಟಿಯು ನಮಗೆ ನ್ಯಾಯ ಒದಗಿಸಬೇಕು ಮತ್ತು ಕುಕಿ-ಜೋ ಜನರ ಸಾಮೂಹಿಕ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಹೇಳಿದೆ.