ಮುಸ್ಲಿಮರಿಗೆ ಮೀಸಲಾತಿ ನೀಡಲು ಇಂಡಿಯಾ ಮೈತ್ರಿಕೂಟ ಸಂವಿಧಾನ ಬದಲಿಸಲು ನಿರ್ಧರಿಸಿದ್ದಾರೆ. ಅದೊಂದು ಕೋಮುವಾದಿಗಳು ಒಕ್ಕೂಟ ಎಂದು ಪ್ರಧಾನಿ ಮೋದಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಿರ್ಜಾಪುರ ಲೋಕಸಭಾ ಕ್ಷೇತ್ರದಲ್ಲಿ ಭಾನುವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, “ಇಂಡಿಯಾ ಮೈತ್ರಿಯ ನಾಯಕರು ಕಟ್ಟಾ ಕೋಮುವಾದಿ, ಜಾತಿವಾದಿ ಮತ್ತು ಕುಟುಂಬವಾದಿಗಳಾಗಿದ್ದಾರೆ. ಕೇಂದ್ರದಲ್ಲಿ ಅವರ ಸರ್ಕಾರ ರಚನೆಯಾದರೆ ಇದೇ ತತ್ವಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಸಮಾಜವಾದಿ ಪಕ್ಷವು ಯಾದವ ಸಮುದಾಯದ ಜನರ ಪ್ರತಿಭೆಯನ್ನು ಗುರುತಿಸುವುದರಲ್ಲಿ ನಿರ್ಲಕ್ಷ್ಯವೆಸಗಿದೆ. ಮುಲಾಯಂ ಸಿಂಗ್ ಯಾದವ್ ಅವರ ಕುಟುಂಬದ ಸದಸ್ಯರಿಗೆ ಮಾತ್ರ ಟಿಕೆಟ್ ನೀಡಿದ್ದಾರೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್‌ನ ಇಂಡಿಯಾ ಮೈತ್ರಿಕೂಟದ ಗೆಲುವಿಗಾಗಿ ಪಾಕಿಸ್ತಾನದಲ್ಲಿ ಪ್ರಾರ್ಥನೆ ಮಾಡಲಾಗುತ್ತಿದೆ. ಗಡಿಯಾಚೆಗಿನ ಜಿಹಾದಿಗಳು ಈ ಒಕ್ಕೂಟದವರನ್ನು ಬೆಂಬಲಿಸುತ್ತಿದ್ದಾರೆ. ಎಸ್‌ಪಿ ಮತ್ತು ಕಾಂಗ್ರೆಸ್ ‘ವೋಟ್ ಜಿಹಾದ್’ಗೆ ಮನವಿ ಮಾಡುತ್ತಿವೆ” ಎಂದು ಹೇಳುವ ಮೂಲಕ ಮತ್ತೆಮೋದಿ ಅವರು ಸುದ್ದಿಯಲ್ಲಿ ಇದ್ದಾರೆ..
“ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ಪುನಃ ಜಾರಿಗೆ ತರುವುದಾಗಿ ಹೇಳುತ್ತಿದ್ದಾರೆ. ಜೊತೆಗೆ ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಕೂಡಾ ರದ್ದುಗೊಳಿಸುತ್ತಾರೆ. ಇದು ಯಾರ ಅಜೆಂಡಾ ಎಂಬುದನ್ನು ನೀವೇ ಯೋಚಿಸಿ ಎಂದು ನೆರೆದಿದ್ದ ಸಾರ್ವಜನಿಕರನ್ನು ಪ್ರಶ್ನಿಸಿದ ಮೋದಿ, ದೇಶ ವಿರೋಧಿ ಶಕ್ತಿಗಳಿಗೆ ಬೇಕಾಗಿರುವುದು ಇದೇ” ಎಂದು ಹೇಳಿದ್ದಾರೆ.
”ವಿರೋಧ ಪಕ್ಷಗಳು ಮೂರು ದೊಡ್ಡ ಪಿತೂರಿಗಳನ್ನು ಮಾಡುತ್ತಿವೆ. ಮೊದಲನೆಯದು, ಸಂವಿಧಾನ ಬದಲಾಯಿಸುವುದು. ಈ ಮೂಲಕ ಭಾರತದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದು ಅವರ ಮೂಲ ಉದ್ದೇಶ. ಎರಡನೆಯದು, ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ನೀಡುತ್ತಿರುವ ಮೀಸಲಾತಿಯನ್ನು ಕೊನೆಗೊಳಿಸುವುದು. ಮೂರನೆಯದು, ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ಸಂಪೂರ್ಣ ಮೀಸಲಾತಿ ನೀಡುವುದು” ಎಂದು ಹೇಳುವ ಮೂಲಕ ಕಾಂಗ್ರೆಸ್ ಮೇಲೆ ಆರೋಪ ಮಾಡಿದ್ದಾರೆ.