ಬೆಂಗಳೂರು: ರಾಷ್ಟ್ರಪಿತ ಮಹಾತ್ಮಾ ಗಾಂಧಿಯ ಹತ್ಯೆಯ ಪಿತೂರಿ ಹಾಗೂ ಹತ್ಯೆಯ ಸಂಭ್ರಮದಿಂದ ಹಿಡಿದು ಭಾರತದ ಸಂವಿಧಾನಕ್ಕೆ, ಪ್ರಜಾಪ್ರಭುತ್ವ ಮೌಲ್ಯಕ್ಕೆ ಹಾಗೂ ಸೌಹಾರ್ದತಯ ಪರಂಪರೆಗೆ ಸಂಘ ಪರಿವಾರ ಮಾಡಿರುವ ಪ್ರಮಾದಗಳನ್ನು ಮರೆ ಮಾಚಿ ಪ್ರಧಾನಿ @narendramodi ಸಂಘದ ಮಾಧ್ಯಮ ವಕ್ತಾರಿಕೆ ಮಾಡುವುದು ಲಜ್ಜೆಗೇಡಿತನದ ಪರಮಾವಧಿ ಎಂದು ಕಾಂಗ್ರೆಸ್ ಮುಖಂಡ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಆರ್ ಎಸ್ ಎಸ್ ಅನ್ನು ಹೊಗಳಿರುವುದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಮನ್ ಕೀ ಬಾತ್ ನಲ್ಲಿ ಆರ್.ಎಸ್.ಎಸ್ ಸಂಘಟನೆಯ ನೂರು ವರ್ಷದ ಕಾರ್ಯಕ್ರಮದ ವಕ್ತಾರಿಕೆ ಮಾಡುವ ಬದಲು ಪ್ರಧಾನಿ ನರೇಂದ್ರ ಮೋದಿ ಸಂಘದ ಅಧಿಕೃತ ಪತ್ರಿಕೆ ಆರ್ಗನೈಸರ್ ಗೆ ಲೇಖನ ಬರೆದು ಬಿಡಲಿ. ಬರೆಯುವ ಮುನ್ನ ಪತ್ರಿಕೆಯಲ್ಲಿ ಈ ಹಿಂದೆ ದೇಶಕ್ಕೆ ಗಂಡಾಂತರ ತಂದಿರುವ ಸಂಘದ ಅಪಾಯಕಾರಿ ನಿಲುವುಗಳ ಬಗ್ಗೆಯೂ ಮನ್ ಕೀ ಬಾತ್ ಅಲ್ಲೇ ಮಾತಾಡಲಿ ಎMದು ಸವಾಲು ಹಾಕಿದ್ದಾರೆ.
ಸ್ವತಂತ್ರ ಚಳುವಳಿಯಲ್ಲಿ ಭಾಗವಹಿಸದೇ, ಬ್ರಿಟಿಷರ ಗುಲಾಮಗಿರಿಯ ಸಹಾಯಧನ ಪಡೆದವರು ದೇಶದ ಸೇವೆ ಮಾಡಿದ್ದೇವೆ ಎಂದು ಹೇಳುವುದು ಸ್ವತಂತ್ರ ಹೋರಾಟಗಾರರನ್ನೇ ಅವಮಾನಿಸಿದಂತೆ. ದೇಶದ ಶಾಂತಿ, ಸುವ್ಯವಸ್ಥೆ ಹಾಗೂ ಭದ್ರತೆಗೆ ಸಂಘ ಮಾಡಿರುವ ಗಂಡಾಂತರಗಳ ಇತಿಹಾಸವೇ ಇದೆ.
ಗಾಂಧಿಯ ಹತ್ಯೆಯ ನಂತರ ಸರ್ಧಾರ್ ಪಟೇಲ್ ಅವರು ಸಂಘವನ್ನೇ ಬ್ಯಾನ್ ಮಾಡುವಾಗ ಹೇಳಿದ ಮಾತುಗಳನ್ನಾದರೂ ಮನ್ ಕೀ ಬಾತ್ ಅಲ್ಲಿ ಮಾತಾಡುವ ಎದೆಗಾರಿಕೆ ಇದೆಯಾ? ದೇಶದ ಸೌಹಾರ್ದತೆಯ ಸೌಂದರ್ಯವನ್ನು ಹಾಳು ಮಾಡಿ, ಪ್ರಕೃತಿ ವಿಕೋಪದ ಸೇವೆಯನ್ನೇ ಪ್ರಧಾನಿಗಳು ಪ್ರದರ್ಶನ ಮಾಡುವುದು ಹಾಸ್ಯಾಸ್ಪದ.
ಸ್ವಯಂ ಘೋಷಿತ ನಿಸ್ವಾರ್ಥ ಸೇವೆಯ ಹೆಸರಿನಲ್ಲಿ ದೇಶಕ್ಕೆ ಅಪಾಯವಾಗಿರುವ ಸಂಘಟನೆಯನ್ನು ಹೊಗಳಲು ಪ್ರಧಾನಿ ಸ್ಥಾನವನ್ನು ಬಳಸಿಕೊಂಡಿರುವುದು ಅಕ್ಷಮ್ಯ ಮಾತ್ರವಲ್ಲ ಅಪರಾಧ ಕೂಡ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ.