ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ 11 ವರ್ಷಗಳಿಂದ ಆರ್ಥಿಕ ಅಸಮಾನತೆ ಹೆಚ್ಚುತ್ತಲೇ ಇದೆ: ಕಾಂಗ್ರೆಸ್‌ ವಾಗ್ದಾಳಿ

Most read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತದ ಅಸಮಾನತೆಯ ಮಟ್ಟವು ವಸಾಹತುಶಾಹಿ ಬ್ರಿಟಿಷ್ ಆಡಳಿತಾವಧಿಯ ಮಟ್ಟವನ್ನು ಮೀರಿಸಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಕ್ಯಾಪ್‌ ಜೆಮಿನಿ ಸಂಶೋಧನಾ ಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಅಸಮಾನತೆಯು ಅಮ್ ಆದ್ಮಿಗೆ ದೊಡ್ಡ ಪ್ರಮಾಣದ ನಿರಾಶೆ ಉಂಟು ಮಾಡಿದರೆ, 2024ರಲ್ಲಿ 33,000ಕ್ಕೂ ಹೆಚ್ಚು ಹೊಸ ‘ಖಾಸ್ ಆದ್ಮಿ’ ಮಿಲಿಯನೇರ್‌ಗಳು ಸೃಷ್ಟಿಸಿದೆ ಎಂದು ವರದಿ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕಳೆದ 11 ವರ್ಷಗಳಲ್ಲಿ ಆರ್ಥಿಕ ಅಸಮಾನತೆ ಇನ್ನಿಲ್ಲದ ಮಟ್ಟಕ್ಕೆ ಏರಿಕೆಯಾಗಿದೆ. ಮೋದಿ ಆಡಳಿತಾವಧಿಯಲ್ಲಿ ಭಾರತದ ಅಸಮಾನತೆಯ ಮಟ್ಟವು ವಸಾಹತುಶಾಹಿ ಬ್ರಿಟಿಷ್ ಆಡಳಿತವನ್ನು ಮೀರಿಸಿದೆ. ಪ್ರಮುಖ ವಲಯಗಳಲ್ಲಿನ ಏಕಸ್ವಾಮ್ಯವು ದೊಡ್ಡ ಪ್ರಮಾಣದ ಬೆಲೆ ಏರಿಕೆಗೆ ಕಾರಣವಾಗಿದೆ. ಗ್ರಾಮೀಣ ಕೃಷಿ ಕಾರ್ಮಿಕರಿಂದ ಹಿಡಿದು ಸಂಬಳ ಪಡೆಯುವ ಮಧ್ಯಮ ವರ್ಗದವರೆಗೆ ಸರಾಸರಿ ಭಾರತೀಯರ ವೇತನವು ಕಳೆದ ಹತ್ತು ವರ್ಷಗಳಲ್ಲಿ ಇದ್ದಲ್ಲೇ ಇದೆ ಎಂದು ಅವರು ಟೀಕಿಸಿದ್ದಾರೆ.

11 ವರ್ಷಗಳಲ್ಲಿ ಭಾರತದಲ್ಲಿ ಶ್ರೀಮಂತರ ಸಂಪತ್ತು ಶೇ 8.8ರಷ್ಟು ಏರಿಕೆಯಾಗಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಮೋದಿ ಆಡಳಿತದಲ್ಲಿ ಧನಿಕರು ದಾಖಲೆಯ ಸಂಖ್ಯೆಯಲ್ಲಿ ಬೆಳೆಯುತ್ತಲೇ ಇದ್ದಾರೆ. ಬೆರಗುಗೊಳಿಸುವ ದರದಲ್ಲಿ ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ರೀತಿಯ ಶ್ರೀಮಂತರ ಹೆಚ್ಚಳ ನಮ್ಮ ದೇಶದ ಬೆಳವಣಿಗೆಗೆ ಅಪಾಯವಾಗಿದೆ. ಈ ಶ್ರೀಮಂತರು 2030ರ ವೇಳೆಗೆ ವಿದೇಶಗಳಲ್ಲಿ ಹೆಚ್ಚು ಹೆಚ್ಚು ಆಸ್ತಿಗಳನ್ನು ಮಾಡಲು ಯೋಜಿಸುತ್ತಿದ್ದಾರೆ ಎಂದು ವರದಿ ಹೇಳಿದೆ. ಆದ್ದರಿಂದ ಧನಿಕರ ಕೇಂದ್ರೀಕೃತವಾಗುತ್ತಿರುವ ಸಂಪತ್ತು ವಿದೇಶಕ್ಕೆ ಸರಾಗವಾಗಿ ಹೋಗಲಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

More articles

Latest article