ಬೆಂಗಳೂರು: PM CARES ನಿಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ‘ದೊಡ್ಡ ಸಾಂಸ್ಥಿಕ ಹಗರಣಗಳಲ್ಲಿ ಒಂದು ಹಾಗೂ ಸಾರ್ವಜನಿಕ ನಂಬಿಕೆಗೆ ದ್ರೋಹ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಎಕ್ಸ್ ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು ‘ತುರ್ತು ಪರಿಹಾರದ ಹೆಸರಿನಲ್ಲಿ ದೇಶೀಯ ಹಾಗೂ ವಿದೇಶಿ ದಾನಿಗಳಿಂದ ಹಣ ಸಂಗ್ರಹಿಸುತ್ತಿರುವ ಮೋದಿ ಸರ್ಕಾರ, ಅಗತ್ಯವಿರುವ ಸಂದರ್ಭದಲ್ಲಿ ಅದನ್ನು ಖರ್ಚು ಮಾಡುವ ಉದ್ದೇಶವನ್ನೇ ಹೊಂದಿಲ್ಲವೇ?’ ಎಂದು ಅವರು ಪ್ರಶ್ನಿಸಿದ್ದಾರೆ.
2024-25ನೇ ಸಾಲಿನ PM CARES ನಿಧಿಯ ಆಡಿಟ್ ಹೇಳಿಕೆಯನ್ನು ಉಲ್ಲೇಖಿಸಿರುವ ಪ್ರಿಯಾಂಕ್ ಖರ್ಗೆ, ನಿಧಿಯಲ್ಲಿ ₹8,452 ಕೋಟಿ ಲಭ್ಯವಿದ್ದರೂ ಅದರ 0.01ರಷ್ಟು ಹಣವನ್ನಷ್ಟೇ ಬಳಸಲಾಗಿದೆ ಎಂದು ಆರೋಪಿಸಿದ್ದಾರೆ.
‘ಅನುಷ್ಠಾನ ಸಂಸ್ಥೆಗಳು ₹324 ಕೋಟಿಯನ್ನು ಹಿಂತಿರುಗಿಸಿರುವುದಾಗಿ ದಾಖಲಾಗಿದೆ. ಆದರೆ ಆ ಸಂಸ್ಥೆಗಳು ಯಾವುವು, ಹಣವನ್ನು ಯಾವ ಉದ್ದೇಶಕ್ಕಾಗಿ ನೀಡಲಾಗಿತ್ತು ಮತ್ತು ಏಕೆ ಹಿಂತಿರುಗಿಸಲಾಯಿತು ಎಂಬುದಕ್ಕೆ ಯಾವುದೇ ಸ್ಪಷ್ಟತೆ ಇಲ್ಲ’ ಎಂದು ಅವರು ಪ್ರಶ್ನಿಸಿದ್ದಾರೆ.
ಇದರ ಜತೆಗೆ ಹಣಕಾಸು ಹೇಳಿಕೆಗೆ ಸಂಬಂಧಿಸಿದ ಪೂರಕ ಟಿಪ್ಪಣಿಗಳನ್ನೂ (accompanying notes) ಪ್ರಕಟಿಸಿಲ್ಲ ಎಂದು ಪ್ರಿಯಾಂಕ್ ಖರ್ಗೆ ಆಕ್ಷೇಪಿಸಿದ್ದಾರೆ.
2020ರ ಮಾರ್ಚ್ನಲ್ಲಿ ತುರ್ತು ಹಾಗೂ ಸಂಕಷ್ಟದ ಪರಿಸ್ಥಿತಿಗಳನ್ನು ಎದುರಿಸುವ ಉದ್ದೇಶದಿಂದ PM CARES ನಿಧಿಯನ್ನು ಸ್ಥಾಪಿಸಲಾಗಿತ್ತು. ಕೋವಿಡ್ ಸಾಂಕ್ರಾಮಿಕದ ಬಳಿಕ ದೇಶವು ಚಂಡಮಾರುತ, ಭೀಕರ ಪ್ರವಾಹ, ಕೇರಳ ಮತ್ತು ಹಿಮಾಚಲ ಪ್ರದೇಶದಲ್ಲಿನ ನೈಸರ್ಗಿಕ ವಿಕೋಪಗಳು ಸೇರಿದಂತೆ ಹಲವು ಸಂಕಷ್ಟಗಳನ್ನು ಎದುರಿಸಿದೆ. ಇದೀಗ ದೇಶದ ಕೆಲವು ಭಾಗಗಳಲ್ಲಿ ತೀವ್ರ ಬರ ಹಾಗೂ ಸಂಕಷ್ಟದ ಪರಿಸ್ಥಿತಿಯೂ ಇದೆ ಎಂದು ಅವರು ಹೇಳಿದ್ದಾರೆ.
‘ಜನರು ಸಂಕಷ್ಟದಲ್ಲಿರುವಾಗ ಪರಿಹಾರಕ್ಕಾಗಿ ಮೀಸಲಿಟ್ಟ ಹಣವನ್ನು ಬಳಸದೇ ಇರುವುದು ನೇರವಾಗಿ ಕ್ರೂರತೆ’ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಅವರ ಈ ಹೇಳಿಕೆ PM CARES ನಿಧಿಯ ಇತ್ತೀಚಿನ ಆಡಿಟ್ ವಿವರಗಳ ಕುರಿತು ರಾಜಕೀಯ ಚರ್ಚೆ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲೇ ಬಂದಿದೆ. 2024-25ರ ಆಡಿಟ್ ಹೇಳಿಕೆಯ ಪ್ರಕಾರ ನಿಧಿಯಲ್ಲಿ ₹8,452 ಕೋಟಿ ಮೊತ್ತವಿದ್ದು, ಆ ವರ್ಷ ₹87.8 ಲಕ್ಷ ವೆಚ್ಚವಾಗಿದೆ ಎಂದು ವರದಿಯಾಗಿದೆ.

