ಬೆಂಗಳೂರು: ನೀರಿನ ಬಾಟಲ್ ಮಾರುವವರೇ, ಕನಿಷ್ಠ ದರ ನೀಡಿ ಕಡ್ಡಾಯವಾಗಿ ಖಾಲಿ ಬಾಟಲಿ ಖರೀದಿಸುವ ನಿಯಮ ರೂಪಿಸಬೇಕು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ.ಖಂಡ್ರೆ ಸೂಚನೆ ನೀಡಿದ್ದಾರೆ.
ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿರುವ ಅವರು, ನೀರಿನ ಪ್ಲಾಸ್ಟಿಕ್ ಬಾಟಲ್‌ಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ಕಡಿವಾಣ ಹಾಕಬೇಕಿದೆ. ಪ್ಲಾಸ್ಟಿಕ್ ಹಾವಳಿ ತಡೆ ಈ ಕ್ರಮ ಅಗತ್ಯ. ಬಾಟಲ್ ಮೂಲಕ ಕುಡಿಯುವ ನೀರು ಮಾರುವ ಕಂಪನಿಗಳಿಗೆ ಖಾಲಿ ಬಾಟಲ್‌ಗಳನ್ನು ವೈಜ್ಞಾನಿಕ ವಿಲೇವಾರಿ ಹೊಣೆಗಾರಿಕೆಯೂ ಇರುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಕೇಂದ್ರ ಸರ್ಕಾರ ನಿರ್ದಿಷ್ಟ ಏಕ ಬಳಕೆ ಪ್ಲಾಸ್ಟಿಕ್ ತಯಾರಿಕೆ, ದಾಸ್ತಾನು, ಮಾರಾಟ, ಬಳಕೆಯನ್ನು ನಿಷೇಧಿಸಿದೆ. ರಾಜ್ಯ ಸರ್ಕಾರವೂ ಈ ಸಂಬಂಧ ನಿಯಮಗಳನ್ನು ರೂಪಿಸಿದೆ. ಆದರೂ, ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದಿದ್ದಾರೆ.
ಪರಿಸರ ಹಾಳು ಮಾಡುತ್ತಿರುವ ನೀರಿನ ಬಾಟಲಿಗಳಿಗೆ (ಮಿನರಲ್ ವಾಟರ್) ಕಡಿವಾಣ ಹಾಕಬೇಕು. ಉತ್ಪಾದಕರ ವಿಸ್ತರಿತ ಜವಾಬ್ದಾರಿಯಂತೆ (ಇಪಿಆರ್) ಯಾವುದೇ ಉತ್ಪನ್ನದ ತಯಾರಕರಿಗೆ, ಉತ್ಪನ್ನ ಗ್ರಾಹಕ ಕೈಸೇರಿದ ನಂತರವೂ ಪರಿಸರದ ಮೇಲೆ ಪರಿಣಾಮ ಬೀರುವಂತಿದ್ದರೆ ಅವುಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನೂ ಹೊಂದಿರುತ್ತಾರೆ. ಈ ಬಗ್ಗೆ ಕಟ್ಟುನಿಟ್ಟಿನ ನಿಯಮ ರೂಪಿಸಿ, ಜಾರಿಗೆ ತರಬೇಕು ಎಂದು ಪತ್ರದಲ್ಲಿ ಸೂಚಿಸಿದ್ದಾರೆ.