ವಿರಾಜಪೇಟೆ: ಹಲಸಿನ ಮಿಡಿಗಾಗಿ ದಲಿತ ಕಾರ್ಮಿಕನ ಜೀವ ತೆಗೆದ ತೋಟದ ಮಾಲೀಕ; ಕಠಿಣ ಶಿಕ್ಷೆಗೆ ಆಗ್ರಹ

Most read

ವಿರಾಜಪೇಟೆ: ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಚೆಂಬೆ ಬೆಳ್ಳೂರು ಗ್ರಾಮದಲ್ಲಿ ಪಣಿಯರವರ ಪೊನ್ನಣ್ಣ ಅವರನ್ನು ದಿನಾಂಕ 27.12.2024ರಂದು ಅಮಾನುಷವಾಗಿ ಹತ್ಯೆ ಮಾಡಿರುವ ಚಿನ್ನಪ್ಪ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸಿಪಿಐಎಂಎಲ್ ಆಗ್ರಹಪಡಿಸಿದೆ.
ಎರವ ಸಮುದಾಯಕ್ಕೆ (ಪರಿಶಿಷ್ಠ ಪಂಗಡ) ಸೇರಿದ ಪೊನ್ನಣ್ಣ ಅವರು ಹಲಸಿನ ಮರದ ಮೇಲೆ ಮಿಡಿ ಕಾಯಿ ಸಾರು ತಿನ್ನುವ ಆಸೆಯಿಂದ ತಮ್ಮ ಮನೆಯ ಪಕ್ಕದ ತೋಟದಲ್ಲಿದ್ದ ಹಲಸಿನ ಮರವನ್ನು ಹತ್ತಿದ್ದರು. ತೋಟದ ಮಾಲೀಕ ಪೊರುಕೊಂಡ ಚಿನ್ನಪ್ಪ ನನ್ನ ತೋಟಕ್ಕೆ ಬಂದು ಹಲಸಿನಕಾಯಿ ಕದಿಯುತ್ತಿದ್ದೀಯಾ ಎಂದು ತಮ್ಮ ಕೋವಿಯಿಂದ ಗುಂಡು ಹಾರಿಸಿ ಪೊನ್ನಣ್ಣ ಅವರನ್ನು ಕೊಂದುಹಾಕಿದ್ದಾರೆ. ನಂತರವೂ ಪೊನ್ನಣ್ಣ ಅವರ ಪತ್ನಿ ಗೀತಾ ಅವರು ಸಹಾಯಕ್ಕಾಗಿ ಮೊರೆ ಇಟ್ಟರೂ ಕೇಳಿಸಿಕೊಳ್ಳದೆ ಹೊರಟು ಹೋಗಿದ್ದಾರೆ.

ಈ ಪ್ರಕರಣ ಕುರಿತು ವಿರಾಜಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ FIR ಸಂಖ್ಯೆ 0133/2024 ಅಲ್ಲಿ ಬಿ.ಎನ್.ಎಸ್ 2023ರ ಕಲಂ 103(1), ಪರಿಶಿಷ್ಠ ಜಾತಿ ಹಾಗು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ, 1989 ಯಡಿ ಕಲಂ 3(2)(v), ಹಾಗೂ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ, 1959 ಕಲಂ 3 ಹಾಗೂ 25ರಡಿಯಲ್ಲಿ ದಾಖಲಿಸಲಾಗಿದೆ. ಜಾತಿ ಹಿಡಿದು ನಿಂದನೆ ಮಾಡಿರುವ ಪೊರುಕೊಂಡ ಚಿನ್ನಪ್ಪ ಅವರ ವಿರುದ್ಧ ಜಾತಿ ದೌರ್ಜನ್ಯ ತಡೆ ಕಾಯ್ದೆ ಅಡ್ಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಸಿಪಿಐಎಂಎಲ್ ಮುಖಂಡರು ಜಿಲ್ಲಾಧಿಕಾರಿ ವೆಂಕಟರಾಜು, ಕೊಡಗು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶೇಖರ್ ಮತ್ತು ಕೊಡಗು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಅಧಿಕಾರಿ ಹೊನ್ನೇಗೌಡ ಅವರುಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಈ ಪ್ರಕರಣದ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಮತ್ತು ತಪ್ಪಿತಸ್ಥ ಚಿನ್ನಪ್ಪನಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಪೊನ್ನಣ್ಣ ನವರ ಪತ್ನಿ ಗೀತಾ ಅವರ ಕುಟುಂಬಕ್ಕೆ ಕೂಡಲೇ ರೂ. 20 ಲಕ್ಷ ಪರಿಹಾರ ನೀಡಬೇಕು. ಗೀತಾ ಅವರಿಗೆ ಸರ್ಕಾರಿ ನೌಕರಿ ಒದಗಿಸಬೇಕು. ಪೊನ್ನಣ್ಣ ಅವರ ಪೋಷಕರಿಗೆ ಮನೆ ಒದಗಿಸಬೇಕು ಹಾಗೂಪೊನ್ನಣ್ಣ ಅವರ ತಮ್ಮ ಪೂವಣ್ಣನಿಗೆ ಶಿಕ್ಷಣಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದದಾರೆ.

ಪರಿಶಿಷ್ಟ ಪಂಗಡಗಳು ಮತ್ತು ಪರಿಶಿಷ್ಟ ಜಾತಿಗಳ (ದೌರ್ಜನ್ಯ ತಡೆ) ಕಾಯಿದೆ, 1989ರ ಅಡಿಯಲ್ಲಿರುವ ರಕ್ಷಣೆಗಳು ಮತ್ತು ಸವಲತ್ತುಗಳನ್ನು ಕಟ್ಟುನಿಟ್ಟಾಗಿ ಒದಗಿಸಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಮತ್ತು ಸಾಕ್ಷಿಗಳಿಗೆ ಬೆದರಿಕೆ ವಿರುದ್ಧ ಎಲ್ಲಾ ರೀತಿಯ ಸೂಕ್ತ ರಕ್ಷಣೆ ನೀಡಬೇಕು. ರಾಜ್ಯ ಸರ್ಕಾರವು ಎರವ ಸಮುದಾಯದ ಕ್ರೂರ ಸಾಮಾಜಿಕ ವಾಸ್ತವತೆಯನ್ನು ನಿರ್ಲಕ್ಷಿಸಬಾರದು, ಅವರಿಗೆ ವಸತಿ ಮತ್ತು ಸಾಗುವಳಿಗಾಗಿ ಭೂಮಿಯನ್ನು ಒದಗಿಸಬೇಕು. ಎರವರನ್ನು ತೋಟಗಳಲ್ಲಿನ “ಲೈನ್ ಹೌಸಿಂಗ್” ಪದ್ಧತಿಯನ್ನು ಮುಕ್ತಗೊಳಿಸಬೇಕು. ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಅವಕಾಶಗಳನ್ನು ಕಲ್ಪಿಸಲು ವಿಶೇಷ ಕಾಳಜಿ ವಹಿಸಬೇಕು ಎಂದೂ ಆಗ್ರಹಪಡಿಸಿದ್ದಾರೆ.

ಒಂದು ಹಲಸಿನಕಾಯಿಗಾಗಿ ಜೀವ ತೆಗೆದುಕೊಳ್ಳಲು ಸಿದ್ಧವಿರುವ ಪ್ರಬಲ ಸಮುದಾಯದವರು ದಮನಿತ ಸಮುದಾಯದವರನ್ನು ಹೇಗೆ ಬದುಕಲು ಬಿಡುತ್ತಾರೆ? ಎರವ ಸಮುದಾಯದ ದಿನನಿತ್ಯದ ದಮನವನ್ನು ಎತ್ತಿತೋರಿಸುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಎರವ ಶಿಕ್ಷಣ, ಅರೋಗ್ಯ, ವಸತಿ, ಉದ್ಯೋಗ, ಯಾವುದೇ ರೀತಿಯ ಭದ್ರತೆ, ಅಭಿವೃದ್ಧಿಯನ್ನು ಕಂಡಿರುವುದಿಲ್ಲ. ಈ ವರ್ಗದ ಜನ ಕಾಫಿ ತೋಟಗಳ ಲೈನ್ ಮನೆಗಳಲ್ಲಿ ವಾಸವಾಗಿದ್ದು, ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಹೋಗುತ್ತಾ, ತೋಟಗಳಲ್ಲಿ ಕುಟುಂಬ ಸಮೇತ ದುಡಿಯುತ್ತಾ, ಜೀವನ ನಡೆಸುತ್ತಾರೆ. ಎರವ ಸಮುದಾಯದ ಅತಿಹೆಚ್ಚು ಕುಟುಂಬಗಳಿಗೆ ಯಾವುದೇ ಭೂಮಿ ಮಲೀಖತ್ವ ಇರುವುದಿಲ್ಲ. ಸರ್ಕಾರದ ಯೋಜನೆಗಳು ಇವರಿಗೆ ತಲುಪುವುದಿಲ್ಲ. ಈ ಸಮುದಾಯದ ಅಭಿವೃದ್ಧಿಗಾಗಿ ಅವರಿಗೆ ಯಾವುದೇ ಸವಲತ್ತುಗಳು ಇರುವುದಿಲ್ಲ. ಕಾಲಿಡಲು ತಮ್ಮದೇ ಆದ ಮನೆ ಇರುವುದಿಲ್ಲ. ಎರವರ ಸಾಮಾಜಿಕ ಸ್ಥಿತಿಯು ಪ್ರಬಲ ಸಮುದಾಯಗಳ ನೆರಳಿನಲ್ಲಿದೆ. ಇವರು ದಿನನಿತ್ಯ ದೌರ್ಜನ್ಯ, ನಿಂದನೆ, ತಾರತಮ್ಯವನ್ನು ಅನುಭವಿಸುತ್ತಾರೆ. ಈ ಸಮುದಾಯದ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರವು ಗಂಭೀರ ಕ್ರಮಗಳನ್ನು ವಹಿಸುವುದು ಅತ್ಯಗತ್ಯವಾಗಿದೆ ಎಂದೂ ವಿವರಿಸಿದ್ದಾರೆ.

More articles

Latest article