ಬೆಳಗಾವಿ: ನಮ್ಮ ಕ್ಷೇತ್ರದ ಜನ ನನ್ನ ತಾಯಿಯನ್ನು ಮನೆ ಮಗಳ ರೀತಿಯಲ್ಲಿ ನೋಡುತ್ತಾರೆ. ಸಿ.ಟಿ. ರವಿ ಬಳಸಿದ ಪದ ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ನಮ್ಮ ಕುಟುಂಬಕ್ಕೆ ನಿಜಕ್ಕೂ ನೋವಾಗಿದೆ. ಬಿಜೆಪಿ ನಾಯಕರ ಮೇಲೆ ನಮಗೆ ಗೌರವವಿದೆ. ಆದರೆ ನಿಮ್ಮ ತಾಯಿ, ಸಹೋದರಿಯರಿಗೆ ಈ ಪದ ಬಳಕೆ ಮಾಡಿದರೆ ನೀವು ಸುಮ್ಮನಿರುತ್ತೀರಾ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.
ಮಾತೆತ್ತಿದರೆ ರಾಮಾಯಣ, ಮಹಾಭಾರತ ಉಲ್ಲೇಖ ಮಾಡುತ್ತೀರಿ. ರಾಜ್ಯದಲ್ಲಿ ಏಕೈಕ ಮಹಿಳಾ ಸಚಿವೆಯಾಗಿ ನಮ್ಮ ತಾಯಿ ಕೆಲಸ ಮಾಡುತ್ತಿದ್ದಾರೆ. ಗೃಹ ಲಕ್ಷ್ಮೀ ಯೋಜನೆ ಮೂಲಕ ಜನಪ್ರಿಯತೆ ಸಾಧಿಸಿದ್ದಾರೆ. ಸುವರ್ಣಸೌಧದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು. ನಮ್ಮ ಕಾರ್ಯಕರ್ತರಿಗೆ ಸಹಜವಾಗಿ ಆಕ್ರೋಶ ಇರುತ್ತದೆ ಎಂದು ಹೇಳಿದ್ದಾರೆ.
ನನ್ನನ್ನು ಎನ್‌ಕೌಂಟರ್ ಮಾಡಲು ಬೆಳಗಾವಿ ಪೊಲೀಸರ ಯತ್ನಿಸಿದ್ರು ಎಂಬ ಸಿಟಿ ರವಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಉತ್ತರ ಕೊಡುತ್ತಾರೆ. ಇಡಿ, ಸಿಬಿಐ ಮುಂದಿಟ್ಟುಕೊಂಡು ಬಿಜೆಪಿ ಏನುಮಾಡುತ್ತಿದೆ ಎನ್ನುವುದು ದೇಶಕ್ಕೆ ಗೊತ್ತಿದೆ ಎಂದರು. ನಮ್ಮ ತಾಯಿ ಮನೆಯಿಂದ ಹೊರ ಬಂದಿಲ್ಲ. ನಮ್ಮ ತಾಯಿ ಹೋರಾಟದ ಮೂಲಕ ಬಂದವರು. ಅವಾಚ್ಯ ಶಬ್ದ ಬಳಸಿದ ಹಿನ್ನೆಲೆಯಲ್ಲಿ ನೊಂದಿದ್ದಾರೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯವಾಗಲಿದ್ದಾರೆ ಎಂದು ಮೃಣಾಲ್ ಹೆಬ್ಬಾಳ್ಕರ್ ತಿಳಿಸಿದರು.