ಮೈಸೂರಿನ ಬೆಟ್ಟಹಳ್ಳಿಯಲ್ಲಿ ಕಲುಷಿತ ನೀರು ಸೇವಿಸಿ ಒಬ್ಬ ಸಾವಿಗೀಡಾಗಿದ್ದು, 12 ಮಂದಿ ಅಸ್ವಸ್ಥರಾಗಿದ್ದಾರೆ. ಮೃತರಾದವರನ್ನು ಗೋವಿಂದೇಗೌಡ (65) ಎಂದು ಗುರುತಿಸಲಾಗಿದೆ. ಗ್ರಾಮದ 12 ಜನರು ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಗ್ರಾಮದ ಟ್ಯಾಂಕ್‌ನಿಂದ ಕುಡಿಯುವ ನೀರು ಸರಬರಾಜು ಆಗಿತ್ತೆಂದು ಹೇಳಲಾಗಿದೆ. ನೀರು ಕುಡಿದ ಕೆಲವರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ತಕ್ಷಣವೇ ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ರವಾನಿಸಿದರು ಚಿಕಿತ್ಸೆ ಫಲಕಾರಿಯಾಗದೇ ಗೋವಿಂದೇಗೌಡ ಸಾವನಪ್ಪಿದ್ದಾರೆ. ತಾಲೂಕು ಆಸ್ಪತ್ರೆಯ ವೈದ್ಯರ ತಂಡ ಬೆಟ್ಟಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರ ಆರೋಗ್ಯ ತಪಾಸಣೆಯಲ್ಲಿ ತೊಡಗಿದ್ದಾರೆ.
ಸಿಎಂ ತವರು ಕ್ಷೇತ್ರದಲ್ಲೇ ಹೀಗಾಗಿದ್ದರಿಂದ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಜೊತೆ ದೂರವಾಣಿ ಮೂಲಕ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ನೀರು ಕಲುಷಿತಗೊಳ್ಳಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.