ಬೆಂಗಳೂರು: ವಿಧಾನಸೌಧವು ಬೆಂಗಳೂರು ನಗರದ ಆಕರ್ಷಣೀಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ದೇಶಿ ಹಾಗೂ ವಿದೇಶಿ ಪ್ರವಾಸಿಗರು ವಿಧಾನಸೌಧಕ್ಕೆ ಬೇಟಿ ನೀಡಲು ಉತ್ಸುಕರಾಗಿದ್ದು, ಪ್ರತಿ ಪ್ರವಾಸಿಗರು ಕಟ್ಟಡದ ಹೊರ ಭಾಗದಲ್ಲಿ ನಿಂತು ವೀಕ್ಷಣೆ ಮಾಡುತ್ತಾ ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದೀಗ ವಿಧಾನಸೌಧಕ್ಕೆ ಶಾಶ್ವತ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ, ಕಟ್ಟಡದ ಸೌಂದರ್ಯ ಮತ್ತಷ್ಟು ಹೆಚ್ಚಿದೆ. ಈ ನಿಟ್ಟಿನಲ್ಲಿ ವಿಧಾನಸೌಧಕ್ಕೆ ಬೇಟಿ ನೀಡುವ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಕಟ್ಟಡದ ಪಾರಂಪರಿಕ ಇತಿಹಾಸ ಹಾಗೂ ಮಹತ್ವವನ್ನು ತಿಳಿಸುವ ಮೂಲಕ ಕಟ್ಟಡದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುವ ದೃಷ್ಟಿಯಿಂದ ದೆಹಲಿಯ ರಾಷ್ಟ್ರಪತಿ ಭವನ, ಸಂಸತ್ ಭವನಕ್ಕೆ ಏರ್ಪಡಿಸಿರುವಂತೆ ವಿಧಾನಸೌಧಕ್ಕೂ ಸಹ “Guided Tour” ಏರ್ಪಡಿಸಿ ಪ್ರವಾಸಿಗರನ್ನು ಆಕರ್ಷಿಸಲು ಸರ್ಕಾರ ಉದ್ದೇಶಿಸಿದೆ. ಈ ಸಂಬಂಧ ವಿಧಾನಸೌಧಕ್ಕೆ Guided Tour” ವ್ಯವಸ್ಥೆ ಕಲ್ಪಿಸಲು ಪ್ರವಾಸೋದ್ಯಮ ಇಲಾಖೆಗೆ ಅನುಮತಿ ನೀಡಲಾಗಿದೆ.
ವಿಧಾನಸೌಧಕ್ಕೆ “Guided Tour” ವ್ಯವಸ್ಥೆಯನ್ನು ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಾರಿಗೆ ತರಲು ಕೆಲವು ಷರತ್ತು ಮತ್ತು ನಿಬಂಧನೆಗೊಳಪಟ್ಟು ಮಂಜೂರಾತಿ ನೀಡಲಾಗಿದೆ.
ಷರತ್ತು ಮತ್ತು ನಿಬಂಧನೆಗಳು:
• ಸಾರ್ವತ್ರಿಕ ರಜಾ ದಿನಗಳಂದು ಮಾತ್ರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ “Guided TourScanned with camscanner ವ್ಯವಸ್ಥೆ ಕಲ್ಪಿಸಲಾಗುತ್ತದೆ.
• ವಿಧಾನಸೌಧ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರನ್ನು ತಲಾ 30 ಜನರ ತಂಡಗಳನ್ನಾಗಿ ವಿಭಜಿಸಿ, ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ಈ ಪ್ರತಿ ತಂಡಗಳ ಮೇಲ್ವಿಚಾರಣೆ ಮಾಡಲು ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳನ್ನು ಕಡ್ಡಾಯವಾಗಿ ನೇಮಿಸಲಾಗುತ್ತದೆ. ಪ್ರತಿ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹಾಗೂ ವಿವರಗಳನ್ನು ವಿಧಾನಸೌಧದ ಭದ್ರತಾ ವಿಭಾಗಕ್ಕೆ ಅಯಾ ದಿನವೇ ಸಲ್ಲಿಸಬೇಕಾಗಿರುತ್ತದೆ. Guided Tour ಗೆ ಅನುವಾಗುವಂತೆ ಪ್ರವಾಸಿಗರು Online ಮುಖಾಂತರ ಟಿಕೆಟ್ ಪಡೆಯಲು ಪ್ರವಾಸೋದ್ಯಮ ಇಲಾಖೆಯಿಂದ ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತದೆ. ಪ್ರವಾಸಿಗರಿಗೆ ನಿಗದಿಪಡಿಸುವ ಪ್ರವೇಶ ದರವು ಜನಸ್ನೇಹಿಯಾಗಿರಬೇಕು ಎಂದು ಸೂಚನೆ ನೀಡಲಾಗಿದೆ.
• ಪ್ರವಾಸಿಗರ ಅಧಿಕೃತ ಗುರುತಿನ ಚೀಟಿಯನ್ನು ಪರಿಶೀಲಿಸಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.
• ವಿಧಾನಸೌಧದ ಕಟ್ಟಡ/ ಉದ್ಯಾನವನ/ಪ್ರತಿಮೆಗಳಿಗೆ ಯಾವುದೇ ರೀತಿಯ ದಕ್ಕೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಮತ್ತು ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸುವುದು ಲೋಕೋಪಯೋಗಿ ಇಲಾಖೆ ಜವಬ್ದಾರಿಯಾಗಿರುತ್ತದೆ.
• ಪರಿವೀಕ್ಷಣೆಯ ಸಂದರ್ಭದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಸುಸಜ್ಜಿತ ವೈದ್ಯಕೀಯ ತಂಡದೊಂದಿಗೆ ಆಂಬ್ಯುಲೆನ್ಸ್ ಸೌಲಭ್ಯವನ್ನು ಕಲ್ಪಿಸಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ.
ಪ್ರವಾಸಿಗರು ಪಾಲಿಸಬೇಕಾದ ನಿಯಮಗಳು:
• ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ವಿಧಾನಸೌಧದ ಆವರಣದ ಸ್ವಚ್ಛತೆಯನ್ನು ಕಾಪಾಡಲು ಬದ್ಧರಾಗಿರಬೇಕಾಗುತ್ತದೆ.
• ವಿಧಾನಸೌಧ ಕಟ್ಟಡದ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಡ್ರೋಣ್ ಕ್ಯಾಮರಾ ಬಳಸುವುದನ್ನು ನಿಷೇಧಿಸಿದೆ.
• ಪ್ರವಾಸಿಗರು ಕುಡಿಯುವ ನೀರನ್ನು ಹೊರತು ಪಡಿಸಿ, ಇನ್ನುಳಿದ ಯಾವುದೇ ಆಹಾರ/ತಿಂಡಿ/ತಿನಿಸುಗಳನ್ನು ತರುವುದನ್ನು ನಿಷೇಧಿಸಲಾಗಿದೆ.
• ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ.
• ವಿಧಾನಸೌಧದ ಆವರಣದಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.