ಬೆಂಗಳೂರು: ರಾಜಾರಾಜೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣಗೆರೆಯ ಖಾಸಗಿ ಶೆಡ್ ಒಂದರಲ್ಲಿ ನಡೆದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 13 ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.
ಚಿತ್ರದುರ್ಗದ ಅಪೋಲೋ ಫಾರ್ಮಸಿಯೊಂದರಲ್ಲಿ ಉದ್ಯೋಗಿಯಾಗಿದ್ದ ರೇಣುಕಾಸ್ವಾಮಿ ಎಂಬ 33 ವರ್ಷದ ಯುವಕನನ್ನು ದರ್ಶನ್ ಗ್ಯಾಂಗ್ ಅಪಹರಿಸಿ ಬೆಂಗಳೂರಿಗೆ ಕರೆತಂದು ಕೊಲೆಗೈದಿದ್ದರು.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಸುಮನಹಳ್ಳಿ ರಾಜಾಕಾಲುವೆ ಬಳಿ ಎಸೆಯಲಾಗಿದ್ದ ರೇಣುಕಾಸ್ವಾಮಿಯ ಮೃತದೇಹ ಪತ್ತೆಯಾಗುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಿ ಪ್ರಮುಖ ಆರೋಪಿಗಳಾದ ನಟಿ ಪವಿತ್ರಾಗೌಡ, ನಟ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ಎಲ್ಲ ಆರೋಪಿಗಳನ್ನು 24ನೇ ಎಸಿಎಂಎಂ ನ್ಯಾಯಾಲಯ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ತಲೆಮರೆಸಿಕೊಂಡಿರುವ ಉಳಿದ ನಾಲ್ವರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು, ಇಂದು ಸಂಜೆಯೊಳಗೆ ಬಂಧಿಸಿ ಕರೆತರುವ ಸಾಧ್ಯತೆ ಇದೆ.
ಬಂಧಿತ ಆರೋಪಿಗಳನ್ನು ಇಂದು ಪೊಲೀಸರು ಸ್ಥಳ ಮಹಜರ್ ಗಾಗಿ ಪಟ್ಟಣಗೆರೆಯ ಶೆಡ್ ಗೆ ಮತ್ತು ಶವ ಪತ್ತೆಯಾದ ಸ್ಥಳಕ್ಕೆ ಕರೆದೊಯ್ಯಲಿದ್ದಾರೆ.
ಕೃತ್ಯಕ್ಕೆ ಬಳಸಲಾಗಿದ್ದ ಒಂದು ಜೀಪ್ ಮತ್ತು ಸ್ಕಾರ್ಪಿಯೋ ಕಾರುಗಳನ್ನು ಪೊಲೀಸರು ಸೀಜ್ ಮಾಡಿದ್ದು, ಕೃತ್ಯಕ್ಕೆ ಬಳಸಲಾದ ಆಯುಧಗಳು, ವಸ್ತುಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಈಗಾಗಲೇ ಪಟ್ಟಣಗೆರೆ ಶೆಡ್ ಗೆ ತೆರಳಿದ್ದ ಎಫ್ ಎಸ್ ಎಲ್ ತಂಡ ಆರೋಪಿಗಳ ಹೆಜ್ಜೆ ಗುರುತು, ಫಿಂಗರ್ ಪ್ರಿಂಟ್, ರಕ್ತದ ಕಲೆಗಳು, ಸ್ಥಳದಲ್ಲಿ ಸಿಕ್ಕ ಬಟ್ಟೆಗಳನ್ನು ಸಂಗ್ರಹಿಸಿದೆ. ಶೆಡ್ ನಲ್ಲಿ ಹೆಣ್ಣುಮಕ್ಕಳು ಬಳಸುವ ವ್ಯಾನಿಟಿ ಬ್ಯಾಗ್ ಸಿಕ್ಕಿದ್ದು ಅದನ್ನೂ ಕೂಡ ಸೀಜ್ ಮಾಡಲಾಗಿದೆ.