ನವದೆಹಲಿ: ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಉತ್ಸವದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 30 ಭಕ್ತರು ಮೃತಪಟ್ಟು, 60ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಪ್ರಕರಣ ಕುರಿತು ಚರ್ಚಿಸಬೇಕೆಂದು ಒತ್ತಾಯಿಸಿ ಪ್ರತಿಪಕ್ಷಗಳು ಸಂಸತ್ತಿನಲ್ಲಿ ಇಂದು ಆಗ್ರಹಪಡಿಸಿದರು. ಪ್ರಶ್ನೋತ್ತರ ಅವಧಿ ಮಗಿದ ನಂತರ ಅವಕಾಶ ನೀಡುವುದಾಗಿ ಸಭಾಧ್ಯಕ್ಷ ಓಂ ಬಿರ್ಲಾ ಮನವಿ ಮಾಡಿಕೊಂಡರೂ ವಿಪಕ್ಷಗಳ ಸದಸ್ಯರು ಒಪ್ಪಲಿಲ್ಲ. ಪ್ರತಿಪಕ್ಷಗಳ ಸದಸ್ಯರು ಕುಂಭ ಮೇಳದ ದುರಂತಕ್ಕೆ ಉತ್ತರ ಬೇಕು ಎಂದು ಸದನದ ಬಾವಿಗಿಳಿದು ಘೋಷಣೆ ಕೂಗಿ ಕಾಲ್ತುಳಿತದಲ್ಲಿ ಮೃತಪಟ್ಟವ ನಿಖರ ಮಾಹಿತಿ ನೀಡುವಂತೆ ಒತ್ತಾಯಿಸಿದರು.
ನೀವು 30 ಜನ ಮೃತಪಟ್ಟಿದ್ದಾರೆ ಎಂದು ಹೇಳುತ್ತಿದ್ದೀರಿ. ಆದರೆ, ಈ ಸಂಖ್ಯೆ ಇನ್ನೂ ಹೆಚ್ಚಾಗಿದೆ. ಈ ದುರಂತದ ನಂತರ ಸಾವುಗಳನ್ನು ದೃಢೀಕರಿಸಲು ಸಾಕಷ್ಟು ಸಮಯ ತೆಗೆದುಕೊಳ್ಳಲಾಗಿದೆ. ಸಮಯ ತೆಗೆದುಕೊಂಡ ನಂತರವೂ ಉತ್ತರ ಪ್ರದೇಶ ಸರ್ಕಾರವು ನೈಜ ಸಾವಿನ ಸಂಖ್ಯೆಯನ್ನು ಮರೆಮಾಚುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು. ದೇಶದ ಮತದಾರರು ನಿಮ್ಮನ್ನು ಆಯ್ಕೆ ಮಾಡಿದ್ದು ಸಂಸತ್ತಿನಲ್ಲಿ ಮೇಜು ಒಡೆಯಲು ಅಥವಾ ಘೋಷಣೆಗಳನ್ನು ಕೂಗಲು ಅಲ್ಲ ಎಂದು ಲೋಕಸಭೆ ಸ್ಪೀಕರ್ ವಿರೋಧ ಪಕ್ಷದ ಸಂಸದರನ್ನು ತರಾಟೆಗೆ ತೆಗೆದುಕೊಂಡರು.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಕಲಾಪಕ್ಕೆ ಅಡ್ಡಿಪಡಿಸದಂತೆ ವಿರೋಧ ಪಕ್ಷಗಳ ಬಳಿ ಮನವಿ ಮಾಡಿದರು. ಸದನವನ್ನು ಅಡ್ಡಿಪಡಿಸದಂತೆ ನಾನು ಪ್ರತಿಪಕ್ಷಗಳನ್ನು ವಿನಂತಿಸುತ್ತೇನೆ ಎಂದರೂ ವಿಪಕ್ಷಗಳ ಕೋಪ ತಣ್ಣಗಾಗಲಿಲ್ಲ. ರಾಜ್ಯಸಭೆಯಲ್ಲೂ ಮಹಾಕುಂಭದ ಕಾಲ್ತುಳಿತ ಕುರಿತು ಮೊದಲು ಚರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಸರ್ಕಾರದ ವಿರುದ್ಧ ಪ್ರತಿಭಟಿಸಿದ ವಿರೋಧ ಪಕ್ಷಗಳು ರಾಜ್ಯಸಭೆ ಕಲಾಪವನ್ನು ಬಹಿಷ್ಕಿಸಿ ಹೊರ ನಡೆದರು.