ಬೆಂಗಳೂರು: ಮೈಸೂರು -ಕೊಡಗು ಸಂಸದ ಯದುವೀರ ಒಡೆಯರ್ ಆಯ್ಕೆಯನ್ನು ಅಸಿಂಧು ಎಂದು ಘೋಷಿಸಿ, ಈ ಕ್ಷೇತ್ರಕ್ಕೆ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಕೋರಲಾದ ಅರ್ಜಿಗೆ ಸಂಬಂಧಪಟ್ಟಂತೆ ಪ್ರತಿವಾದಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.
ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ರೇವತಿ ರಾಜ್ ಆಲಿಯಾಸ್ ಭೀಮಪುತ್ರಿ ರೇವತಿ ರಾಜ್ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಆದೇಶಿಸಿದೆ.
ರೇವತಿ ರಾಜ್ ಅವರು ನಾನು 2024ರ ಏಪ್ರಿಲ್ 4ರಂದು ನಾಮಪತ್ರ ಸಲ್ಲಿಸಿದ್ದೆ. ಆದರೆ, ನಾಮಪತ್ರದ ಕಲಂ 7, 7(ಎ), 7(ಎ) (ಬಿ) ಗಳನ್ನು ಸೂಕ್ತ ರೀತಿಯಲ್ಲಿ ಭರ್ತಿ ಮಾಡಿರಲಿಲ್ಲ. ಆದ್ದರಿಂದ ನಾಮಪತ್ರವನ್ನು ಸರಿಯಾಗಿ ಭರ್ತಿ ಮಾಡಿ ಏಪ್ರಿಲ್ 5ರ ಬೆಳಿಗ್ಗೆ 11 ಗಂಟೆ ಒಳಗಾಗಿ ಸಲ್ಲಿಸಬೇಕು ಎಂದು ಚುನಾವಣಾಧಿಕಾರಿಗಳು ಸೂಚಿಸಿದ್ದರು. ನಿಗದಿತ ಸಮಯದ ಒಳಗಾಗಿಯೇ ನಾನು ಸಲ್ಲಿಸಿದ್ದರೂ ನಾಮಪತ್ರ ತಿರಸ್ಕರಿಸಲಾಗಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.
ತಮ್ಮ ನಾಮಪತ್ರ ತಿರಸ್ಕರಿಸಿದ್ದ ಅಂದಿನ ಚುನಾವಣಾಧಿಕಾರಿಗಳೂ ಆಗಿದ್ದ ಮೈಸೂರು ಜಿಲ್ಲಾಧಿಕಾರಿ ಕೆ. ವಿ. ರಾಜೇಂದ್ರ ಅವರ ಆದೇಶವನ್ನು ಬದಿಗೆ ಸರಿಸಬೇಕು. ಯದುವೀರ್ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ, ಭಾರತೀಯ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ
ಆಯೋಗಕ್ಕೆ ಹೊಸದಾಗಿ ಚುನಾವಣೆ ನಡೆಸಲು ಆದೇಶಿಸಬೇಕು ಎಂದು ರೇವತಿರಾಜ್ ಮನವಿ ಮಾಡಿಕೊಂಡಿದ್ದಾರೆ.