ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮಹತ್ವಯುತ ಜವಾಬ್ದಾರಿಗಳನ್ನು ಹೊಂದಿರುವ ಇಲಾಖೆಯ ಅಧಿಕಾರಿಗಳ ನಡುವೆ ಸಮನ್ವಯತೆಯ ಕೊರತೆ ಇದೆ ಎಂಬುದನ್ನು ಮನಗೊಂಡು ಮೊದಲ ಬಾರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ವಿವಿಧ ಘಟಕಗಳ ಅಧಿಕಾರಿಗಳ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ,
ಅಧಿಕಾರಿಗಳ ನಡುವೆ ಸಮನ್ವಯತೆ, ಸಮಯಪ್ರಜ್ಞೆ, ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆ ಹಾಗೂ ಹೊಣೆಗಾರಿಕೆ ಈ ಐದು ಸೂತ್ರಗಳನ್ನು ಇರಿಸಿಕೊಂಡು ಅಧಿಕಾರಿಗಳು ಕಾರ್ಯನಿರ್ವಹಿಸುವುದು ಅತ್ಯಂತ ಪ್ರಮುಖವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಪಂಚಾಯತ್ ರಾಜ್ ಅಧಿಕಾರಿಗಳ ಸಮ್ಮೇಳನ ಉದ್ಘಾಟಿಸಿ ಸಚಿವರು ಮಾತನಾಡಿ, ಇದೊಂದು ವಿಶಿಷ್ಟ ಇಲಾಖೆಯಾಗಿದ್ದು, ರಾಜ್ಯದಲ್ಲಿನ ಮೂರು ಹಂತದ ಸ್ಥಳೀಯ ಸರ್ಕಾರಗಳು ಕೇವಲ ಸಲಹಾ ಸಮಿತಿಗಳಾಗಿರದೆ (advisory body) ಸಂವಿಧಾನದತ್ತವಾಗಿ ರಚಿತಗೊಂಡ ಸ್ವಯಂ ಸರ್ಕಾರಗಳಾಗಿದ್ದು, (self governance) ಅಧಿಕಾರಿಗಳು ಆಳುವ ಪ್ರವೃತ್ತಿ ಬದಿಗಿರಿಸಿ ಆಲಿಸುವ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಅಲ್ಲದೆ, ಚುನಾಯಿತ ಜನ ಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಸೌಹಾರ್ದತೆಯಿಂದ ವ್ಯವಹರಿಸಿ ಮಾದರಿ ಅಧಿಕಾರಿಗಳಾಗಬೇಕು ಎಂದು ಸಚಿವರು ಕರೆ ನೀಡಿದರು.
ರಾಜ್ಯದ ಗ್ರಾಮಗಳ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸಬೇಕಾಗಿರುವ ಹಾಗೂ ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಜನರಿಗೆ ತಲುಪಿಸಬೇಕಾದ ಸಮಾನ ಉದ್ದೇಶ ಹಾಗೂ ಗುರಿಯನ್ನು ಇರಿಸಿಕೊಂಡ ಒಂದೇ ಇಲಾಖೆಯ ವಿವಿಧ ಘಟಕಗಳ ಅಧಿಕಾರಿಗಳ ನಡುವೆ ಸಮನ್ವಯತೆ ಸಾಧಿಸುವುದೇ ಇಂದಿನ ಸಮಾವೇಶದ ಆಶಯವಾಗಿದೆ ಎಂದು ಹೇಳಿದ ಸಚಿವರು
ಇಂದಿನ ಚರ್ಚೆ ಹಾಗೂ ಅಭಿಪ್ರಾಯಗಳಿಂದ ಹೊರಹೊಮ್ಮುವ ವಿಷಯಗಳನ್ನು ಆಧರಿಸಿ ಸಮನ್ವಯದಿಂದ ಗ್ರಾಮಗಳ ಅಭಿವೃದ್ಧಿ, ಪ್ರಗತಿ, ಕಾರ್ಯಕ್ರಮಗಳ ಸಬಲೀಕರಣ ಹಾಗೂ ಸರಳೀಕರಣದ ಹಾದಿಯಲ್ಲಿ ಹೊಸ ವಿಚಾರಗಳ ಅನ್ವೇಷಣೆ ನಡೆಯಲಿ ಎಂದು ಆಶಿಸುತ್ತೇನೆ ಎಂದರು.
ಅಭಿವೃದ್ಧಿಯ ಜೊತೆಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ವೈಜ್ಞಾನಿಕ ಮನೋಭಾವದೊಂದಿಗೆ ಪ್ರಜ್ಞಾವಂತ ಹಾಗೂ ಪ್ರಬುದ್ಧ ಸಮಾಜದ ನಿರ್ಮಾಣ ಸ್ಥಳೀಯ ಸಂಸ್ಥೆಗಳ ಗುರಿಯಾಗಬೇಕು ಎಂದು ತಿಳಿಸಿದರು.